ಸ್ವದೇಶ್ ದರ್ಶನ್‌ಗೆ ಆರಂಭಿಕ ಹಿನ್ನಡೆ

ಅವಿನ್ ಶೆಟ್ಟಿ ಉಡುಪಿ

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ್ ಯೋಜನೆ ಜಾರಿಗೆ ತಂದಿದ್ದು, ಕರಾವಳಿಯ ಮೂರು ಜಿಲ್ಲೆಗಳ (ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ) ಸಮಗ್ರ ಯೋಜನಾ ವರದಿ(ಡಿಪಿಆರ್) ವಿಳಂಬ ಪ್ರಕ್ರಿಯೆಯಿಂದಾಗಿ 67.71 ಕೋಟಿ ರೂ.ವೆಚ್ಚದ ಯೋಜನೆ ಅನುಷ್ಠಾನಕ್ಕೆ ತೀವ್ರ ಹಿನ್ನಡೆಯಾಗಿದೆ.

2016ರಲ್ಲಿ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ದೂರದೃಷ್ಟಿಯೊಂದಿಗೆ ಕೇಂದ್ರ ಸರ್ಕಾರ ಸ್ವದೇಶ್ ದರ್ಶನ್ ಯೋಜನೆ ರೂಪಿಸಿದ್ದು, ದೇಶದಲ್ಲಿ ಒಟ್ಟು 13 ಪ್ರತ್ಯೇಕ ವಲಯಗಳನ್ನು ಗುರುತಿಸಲಾಗಿತ್ತು. ಕಳೆದ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಯೋಜನೆ ಅನುದಾನವನ್ನು ಮೀಸಲಿಡಲಾಗಿತ್ತು. ತೇಲುವ ರೆಸ್ಟೋರೆಂಟ್, ತೇಲುವ ಜೆಟ್ಟಿ, ಸಿಸಿ ಕ್ಯಾಮರಾ, ಬೀಚ್ ಕ್ಲೀನಿಂಗ್, ವಾಟರ್ ಸ್ಪೋರ್ಟ್, ಸರ್ಫಿಂಗ್ ಸಲಕರಣೆಗಳು, ರಕ್ಷಣಾ ಬೋಟ್ ಮೊದಲಾದ ಸೌಲಭ್ಯಗಳು ಈ ಯೋಜನೆ ಅಡಿಯಲ್ಲಿ ಬರುತ್ತದೆ.

ಒಂದು ಜಿಲ್ಲೆಗೆ ಆಗಲ್ಲ: 67.71 ಕೋಟಿ ರೂ. ವೆಚ್ಚದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಆಯ್ದ ಬೀಚ್‌ಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿ ಡಿಪಿಆರ್ ಮಾಡಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿತ್ತು.
ಉಡುಪಿ ಜಿಲ್ಲೆ ನಿರ್ದಿಷ್ಟ ಸಮಯದಲ್ಲಿ ಡಿಪಿಆರ್ ಸಲ್ಲಿಸಿದ್ದರೆ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ವಿಳಂಬ ಮಾಡಿದವು. ಉಡುಪಿ ಜಿಲ್ಲೆ ಒಂದಕ್ಕೇ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ; ಮೂರು ಜಿಲ್ಲೆ ಸೇರಿದರೆ ಮಾತ್ರ ಯೋಜನೆ ಸಮರ್ಪಕ ಅನುಷ್ಠಾನ ಸಾಧ್ಯ ಎಂದ ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಉಡುಪಿ ಜಿಲ್ಲೆಯ ಡಿಪಿಆರ್‌ನ್ನು ತಿರಸ್ಕರಿಸಿದೆ.

ಮೂರು ಜಿಲ್ಲೆಗಳು ಒಟ್ಟಿಗೆ ಪರಿಷ್ಕೃತ ಡಿಪಿಆರ್ ಸಲ್ಲಿಸಬೇಕೆಂದು ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಕೇಂದ್ರ ಸೂಚಿಸಿತ್ತು. ಅದರಂತೆ ಮೂರೂ ಜಿಲ್ಲೆಗಳಿಂದ ಹೊಸದಾಗಿ ಡಿಪಿಆರ್ ರಚಿಸಿ ಸಲ್ಲಿಸಲಾಗಿದೆ. ಯೋಜನೆ ಶೀಘ್ರ ಮಂಜೂರಾಗುವ ನಿರೀಕ್ಷೆ ಇದೆ.

 ಸೋಮೇಶ್ವರ, ಪಣಂಬೂರಿಗೆ ಕೊಕ್, ತಣ್ಣೀರುಬಾವಿ, ಸಸಿಹಿತ್ಲು ಸೇರ್ಪಡೆ: 2018ರ ಅಂತ್ಯದಲ್ಲಿ ಪ್ರಸ್ತುತ ಪ್ರವಾಸೋದ್ಯಮ, ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ಸಂಬಂಧಿಸಿ ಪರಿಷ್ಕೃತ ಡಿಪಿಆರ್ ತಯಾರಿಸುವಂತೆ ಕೇಂದ್ರ ಕೇಳಿದ್ದು, ಅದರಂತೆ ಉಡುಪಿ ಜಿಲ್ಲೆಗೆ ಪರಿಷ್ಕೃತ ಡಿಪಿಆರ್ ರಚಿಸಿ 6 ತಿಂಗಳ ಹಿಂದೆ ಕೊಡಲಾಗಿದೆ. ಈ ಡಿಪಿಆರ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದ್ದು, ರಕ್ಷಣಾ ಬೋಟು, ಸಿಸಿ ಕ್ಯಾಮರಾ, ಅಗತ್ಯ ಮೂಲಸೌಕರ್ಯಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೋಜನೆಗಾಗಿ ಮೊದಲು ಮಾಡಿದ್ದ ಡಿಪಿಆರ್ ಬದಲಿಸಿ ಹೊಸದಾಗಿ ಡಿಪಿಆರ್ ಮಾಡಿ ಕೊಡಲಾಗಿದೆ. ಮೊದಲ ಡಿಪಿಆರ್‌ನಲ್ಲಿದ್ದ ಸೋಮೇಶ್ವರ, ಪಣಂಬೂರು ಬೀಚ್‌ಗಳನ್ನು ಕೈಬಿಡಲಾಗಿದೆ. ಸೋಮೇಶ್ವರದಲ್ಲಿ ಪ್ರವಾಸಿಗರು ಬರುವುದು ಕಡಿಮೆ ಮತ್ತು ಪಣಂಬೂರು ಎನ್‌ಎಂಪಿಟಿ ಜಾಗ ಆಗಿರುವುದರಿಂದ ಅಭಿವೃದ್ಧಿ ಕಾರ್ಯ ನಡೆಸಲು ಸಮಸ್ಯೆಯಾಗುತ್ತದೆ ಎಂಬ ಕಾರಣದಿಂದ ಅದರ ಬದಲು ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ಗಳನ್ನು ಆಯ್ಕೆ ಮಾಡಿ ಡಿಪಿಆರ್ ಮಾಡಿ ಕಳಿಸಲಾಗಿದೆ ಎಂದು ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.

  • ಯಾವ್ಯಾವ ಬೀಚುಗಳು:
    ಉಡುಪಿ: ಮಲ್ಪೆ, ಮರವಂತೆ, ತ್ರಾಸಿ, ಕಾಪು
    ದ.ಕ.: ಸುರತ್ಕಲ್, ಸಸಿಹಿತ್ಲು, ತಣ್ಣೀರುಬಾವಿ
    ಉತ್ತರ ಕನ್ನಡ: ಮುರುಡೇಶ್ವರ, ಓಂ ಬೀಚ್, ಕೂಡ್ಲೆ, ಟಾಗೋರ್ ಬೀಚ್

ಪರಿಷ್ಕೃತ ಪ್ರಸ್ತಾವನೆ ಸೂಚನೆಯಂತೆ ಸೊಮೇಶ್ವರ, ಪಣಂಬೂರು ಬೀಚ್‌ಗಳನ್ನು ಈ ಯೋಜನೆಯಿಂದ ಕೈ ಬಿಡಬೇಕಾಯಿತು. ಪರಿಷ್ಕೃತ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಿಳಂಬವಾದರೂ ವ್ಯವಸ್ಥಿತವಾಗಿ ಯೋಜನೆ ಅನುಷ್ಠಾನ ಆಗಬೇಕು ಎಂಬ ಉದ್ದೇಶ ಇದರಲ್ಲಿದೆ. ಸ್ವದೇಶ್ ದರ್ಶನ್ ಯೋಜನೆ ಅಡಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ನಡೆಯಲಿದೆ.
ಉದಯಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ

Leave a Reply

Your email address will not be published. Required fields are marked *