ಬೆಂಗಳೂರು: ದೇಶದ ಅತ್ಯುತ್ತಮ ಸ್ವಾಯುತ್ತ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರು ಜಲಮಂಡಳಿಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸಲು ಬಿಡುವುದಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘ ಸೋಮವಾರ ಕಾವೇರಿ ಭವನದಲ್ಲಿ ಏರ್ಪಡಿಸಿದ್ದ 2020ರ ದಿನಚರಿ ಬಿಡುಗಡೆಗೊಳಿಸಿ ಮಾತನಾಡಿದರು. ಹಲವು ದಕ್ಷ ಅಧಿಕಾರಿ ಹಾಗೂ ನೌಕರರ ಸೇವೆಯ ಫಲವಾಗಿ ಇಂದು ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇಂತಹ ಸಂಸ್ಥೆಯನ್ನು ಖಾಸಗಿ ಯವರಿಗೆ ಒಪ್ಪಿಸುವುದು ಸರಿಯಲ್ಲ. ಖಾಸಗಿ ವ್ಯಕ್ತಿಗಳ ವಶಕ್ಕೆ ಈ ಸಂಸ್ಥೆ ನೀಡಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಜಲಮಂಡಳಿ ಈಗ ಹೇಗಿದೆಯೂ ಹಾಗೆಯೇ ಉಳಿಯಬೇಕು ಎಂದರು.
ಎಸ್.ಎಂ .ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಜಲಮಂಡಳಿಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆದಿತ್ತು. ಆಗ ಸದನದಲ್ಲಿ ತೀವ್ರವಾಗಿ ವಿರೋಧಿಸಿದ್ದೆ. ಕಡೆಗೆ ಖಾಸಗೀಕರಣದ ನಿರ್ಧಾರವನ್ನು ಎಸ್.ಎಂ.ಕೃಷ್ಣ ಹಿಂಪಡೆದಿದ್ದರು. ಈಗ ಮತ್ತೊಮ್ಮೆ ನೌಕರರಲ್ಲಿ ಖಾಸಗೀಕರಣ ಭಯ ಶುರುವಾಗಿದೆ. ಈ ಬಗ್ಗೆ ಯಾರೂ ಹೆದರುವ ಅಗತ್ಯವಿಲ್ಲ. ಬೆಂಗಳೂರು ನಗರಕ್ಕೆ ನೀರು ಪೂರೈಸುವುದು ಸುಲಭದ ಕೆಲಸವಲ್ಲ. ಖಾಸಗಿಯವರು ಈ ಕಾರ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಬೆಂಗಳೂರು ಜಲಮಂಡಳಿ ಪ್ರಧಾನ ಮುಖ್ಯ ಇಂಜಿನಿಯರ್ ಕೆಂಪರಾಮಯ್ಯ, ಆರ್ಥಿಕ ಸಲಹೆಗಾರ ಪ್ರಶಾಂತ್, ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ, ನಿವೃತ್ತ ಮುಖ್ಯ ಇಂಜಿನಿಯರ್ ಕೆ.ಆರ್. ನಾರಾಯಣ ಐಯ್ಯಂಗಾರ್ ಸೇರಿ ಹಲವರು ಉಪಸ್ಥಿತರಿದ್ದರು.
ಅಧ್ಯಕ್ಷರಿಗೆ ಇಂಜಕ್ಷನ್!
ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಸಮಾರಂಭಕ್ಕೆ ಗೈರಾಗಿದ್ದಕ್ಕೆ ಸೋಮಣ್ಣ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ತುಷಾರ್ಗೆ ಎಲ್ಲಿ ಹೇಗೆ ಇಂಜಕ್ಷನ್ ಕೊಡಬೇಕೆಂಬುದು ಗೊತ್ತಿದೆ. 25 ವರ್ಷಗಳಿಂದ ತುಷಾರ್ ಅವರನ್ನು ಬಲ್ಲೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.