ಬೆಂಗಳೂರು: ಕನ್ನಡ ಚಿತ್ರಗಳಿಗಾಗಿ ಬಹುತೇಕ ಮೀಸಲಾಗಿದ್ದ ನಗರದ ಹೃದಯ ಭಾಗದಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಈಗ ಪರಭಾಷಾ ಚಿತ್ರದ ದರ್ಬಾರ್ ಶುರುವಾಗಿದೆ. ಜ.9ಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತೆಲುಗು ಅವತರಣಿಕೆಯ ದರ್ಬಾರ್ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಹಾಗೂ ಟೀಕೆ ವ್ಯಕ್ತವಾಗುತ್ತಿದೆ.
ಕೆಂಪೇಗೌಡ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರ ಕಳೆದ 40 ವರ್ಷಗಳಿಂದ ಕನ್ನಡ ಸಿನಿಮಾಗಳಿಗೆ ಸೀಮಿತವಾಗಿತ್ತು. ಈಚೆಗೆ ಆ ಚಿತ್ರಮಂದಿರದಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನಗಳು ಹೆಚ್ಚಾಗುತ್ತಿದೆ. ಇದು ಕನ್ನಡ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಈಗ ದರ್ಬಾರ್ ಸಿನಿಮಾ ಪ್ರದರ್ಶನಕ್ಕೆ ಅದು ವೇದಿಕೆಯಾಗಿದೆ. ದರ್ಬಾರ್ ಸಿನಿಮಾ ಮೂಲ ತಮಿಳು ಭಾಷೆಯದ್ದಾಗಿದ್ದರೂ ಹಿಂದಿ, ಮಲೆಯಾಳಂ ಮತ್ತು ತೆಲುಗು ಭಾಷೆಯಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
70ರ ದಶಕದಲ್ಲಿ ಆರಂಭ: 70ರ ದಶಕದ ಅವಧಿಯಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ 10ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನರ್ತಕಿ ಕೂಡ ಒಂದು. ಕನ್ನಡದ ಕಣ್ಮಣಿಗಳೆಂದು ಪ್ರಸಿದ್ಧವಾಗಿದ್ದ ಡಾ. ರಾಜ್ಕುಮಾರ್, ಶಂಕರ್ನಾಗ್, ಡಾ. ವಿಷ್ಣುವರ್ಧನ್ ಹಾಗೂ ಅಂಬರೀಷ್ ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದ ಚಿತ್ರಮಂದಿರಗಳು ಈಗ ಅವರ ನಿಧನದ ನಂತರ ಪರಭಾಷೆ ಸಿನಿಮಾಗಳ ಪ್ರದರ್ಶನಕ್ಕೆ ಮುಂದಾಗುತ್ತಿವೆ. ಇದು ಚಿತ್ರಪ್ರೇಮಿಗಳ ಬೇಸರಕ್ಕೆ ಕಾರಣವಾಗುತ್ತಿದೆ.
ಏನೇನು ಕಾದಿದಿಯೋ!?
ಹೃದಯಭಾಗದಲ್ಲಿ ಅನ್ಯಭಾಷೆ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರ ರೆಡಿಯಾಗಿದೆ. ಈಗ ತೆಲುಗು, ನಾಳೆ ತಮಿಳು, ಮಲಯಾಳಂ ಸಿನಿಮಾಗಳು ಬರುತ್ತವೆ. ಮುಂದೆ ಕನ್ನಡ ಸಿನಿಮಾಗಳು ಥಿಯೇಟರ್ಗಳಿಗಾಗಿ ಮಂಡಿಯೂರುವ ಕಾಲ ಬರಬಹುದು. ಕನ್ನಡ ಚಿತ್ರರಂಗದ ಅಧ್ಯಾಯ ಮುಗಿಯಿತು. ಅಣ್ಣಾವು› ಇಲ್ಲದ ನಾಡಿಗೆ ಏನೇನು ಕಾದಿದೆಯೋ ಎಂಬ ಪೋಸ್ಟ್ ಮೂಲಕ ಕನ್ನಡ ಅಭಿಮಾನಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ನಟರ ಸಿನಿಮಾವಿಲ್ಲ
ಜನವರಿಯಲ್ಲಿ ಕನ್ನಡದ ಸ್ಟಾರ್ ನಟರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. 2019ರ ಡಿಸೆಂಬರ್ನಲ್ಲಿ ಬಿಡುಗಡೆಯಾದ ಸುದೀಪ್ ಅಭಿನಯದ ದಬಾಂಗ್ 3 ಕನ್ನಡ ಅವತರಣಿಕೆ, ಅವನೇ ಶ್ರೀಮನ್ ನಾರಾಯಣ, ದರ್ಶನ್ ಅಭಿನಯದ ಒಡೆಯ ಚಿತ್ರಗಳು ಯಶಸ್ವಿ ಪ್ರದರ್ಶನವಾಗುತ್ತಿವೆ. ಸ್ಟಾರ್ ನಟರ ಹೊಸ ಸಿನಿಮಾಗಳು ಸದ್ಯ ಬಿಡುಗಡೆಯಾಗುತ್ತಿಲ್ಲವಾದ್ದರಿಂದ, ಪರಭಾಷೆಗಳ ಸ್ಟಾರ್ ನಟರ ಚಿತ್ರಪ್ರದರ್ಶನಕ್ಕೆ ಚಿತ್ರಮಂದಿರಗಳ ಮಾಲೀಕರು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ. ರಾಜ್ಯಾದ್ಯಂತ ಒಟ್ಟು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದರ್ಬಾರ್ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಕನ್ನಡ ಭಾಷೆಗೆ ಡಬ್ಬಿಂಗ್ ಇದ್ದರೂ ಸಮಸ್ಯೆ, ಇಲ್ಲದಿದ್ದರೂ ಸಮಸ್ಯೆಯಾಗಿದೆ. ಜನವರಿಯಲ್ಲಿ ದೊಡ್ಡ ಬಜೆಟ್ ಹಾಗೂ ಸ್ಟಾರ್ ನಟರ ಸಿನಿಮಾ ಬಿಡುಗಡೆ ಇಲ್ಲದ ಕಾರಣ, ದರ್ಬಾರ್ ಸಿನಿಮಾ ವಿತರಣೆಯನ್ನು ತೆಗೆದುಕೊಂಡಿದ್ದೇವೆ.
| ಧೀರಜ್ ಪೈ ವಿತರಕ