ನವಭಾರತದ ಜನಾದೇಶ: ಮುಗಿಲು ಮುಟ್ಟಿದ ಬಿಜೆಪಿ ಕಾರ್ಯಕರ್ತರ ಜಯಘೋಷ

ನವದೆಹಲಿ: ಭಾರತೀಯ ಜನತಾ ಪಕ್ಷ ಅಭೂತಪೂರ್ವ ದಾಖಲೆ ನಿರ್ವಿುಸಿದ ಹಿನ್ನೆಲೆ ದೇಶಾದ್ಯಂತ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಹಬ್ಬದ ವಾತಾವರಣ ಇತ್ತು. ಗುರುವಾರ ಸಂಜೆ ನಡೆದ ಅಭಿನಂದನಾ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸುತ್ತಿದ್ದಂತೆ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿತ್ತು. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ‘130 ಕೋಟಿ ಜನರಿಗೆ ತಲೆಬಾಗಿವೆ. ಹಿಂದೆಂದೂ ಕೇಳದಂತಹ ಅಭೂತಪೂರ್ವ ಫಲಿತಾಂಶ ಬಂದಿದೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ’ ಎಂದರು.

‘ಇದು ನವಭಾರತದ ಜನಾದೇಶ. ಜನರು ರಾಷ್ಟ್ರದ ಉಜ್ವಲ ಭವಿಷ್ಯದ ಆಯ್ಕೆ ಮಾಡಿದ್ದಾರೆ. ಈ ಐತಿಹಾಸಿಕ ಜನಾದೇಶ ಇಡೀ ಜಗತ್ತನ್ನು ನಿಬ್ಬೆರಗುಗೊಳಿಸಿದೆ’ ಎಂದು ಬಣ್ಣಿಸಿದರು. ‘ಮೊದಲ ಅವಧಿಯ ಭ್ರಷ್ಟಾಚಾರ ರಹಿತ ಆಡಳಿತ ಮೆಚ್ಚಿ ಜನರು ಈ ಸಾರಿ ನಮ್ಮ ಬಲ ಹೆಚ್ಚಿಸಿದ್ದಾರೆ. ದೇಶವನ್ನು ಪ್ರಗತಿ ಪಥದಲ್ಲಿ ಖಂಡಿತ ತೆಗೆದುಕೊಂಡು ಹೋಗುತ್ತವೆ. ಈ ಕಾರ್ಯದಲ್ಲಿ ಪ್ರತಿಪಕ್ಷಗಳನ್ನು ಜತೆಗೆ ಕರೆದೊಯ್ಯಲಾಗುವುದು’ ಎಂದು ಪ್ರಧಾನಿ ತಿಳಿಸಿದರು. ‘ಕೆಲವೊಮ್ಮೆ ತಪು್ಪಗಳಾಗಬಹುದು. ಆದರೆ, ಇದು ದುರುದ್ದೇಶಪೂರ್ವಕವಲ್ಲ. ದ್ವೇಷ ರಾಜಕಾರಣವನ್ನು ಎಂದಿಗೂ ಮಾಡುವುದಿಲ್ಲ. ನಮಗೆ ಸಂವಿಧಾನವೇ ಎಲ್ಲಕ್ಕಿಂತ ಹಿರಿದು’ ಎಂದು ಮೋದಿ ಹೇಳಿದರು.

‘ಸಾಮಾನ್ಯ ವ್ಯಕ್ತಿಗೆ ಜನರು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೀತ್ಯಾದರ ತೋರಿ ಆಶೀರ್ವದಿಸಿದ್ದಾರೆ. ನನ್ನ ಜೀವನ ಈ ದೇಶಕ್ಕೆ ಮುಡಿಪು. ಟೀಕೆಯನ್ನೂ ಸ್ವಾಗತಿಸುವೆ’ ಎಂದರು. ಅಮಿತ್ ಷಾ ಮಾತನಾಡಿ, 50 ವರ್ಷ ಆಡಳಿತ ನಡೆಸಿದ ಐತಿಹಾಸಿಕ ಪಕ್ಷ 17 ರಾಜ್ಯಗಳಲ್ಲಿ ಖಾತೆಯನ್ನೆ ತೆರೆದಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಮೂದಲಿಸಿದರು.

ಭಣಗುಟ್ಟಿದ ಕಾಂಗ್ರೆಸ್ ಕಚೇರಿ: ದಹೆಲಿಯ ಕಾಂಗ್ರೆಸ್ ಕಚೇರಿ ಭಣಗುಡುತ್ತಿತ್ತು. ಪಕ್ಷದ ಅಧ್ಯಕ್ಷ ಸೇರಿ ಪ್ರಧಾನ ಕಾರ್ಯದರ್ಶಿಗಳ ಕೊಠಡಿಗಳಿಗೆ ಬೀಗ ಜಡಿಯಲಾಗಿತ್ತು.

ಧನ್ಯವಾದ ಹೇಳಿದ ಮೋದಿ ತಾಯಿ

ಬಿಜೆಪಿ ಪ್ರಚಂಡ ವಿಜಯ ಸಾಧಿಸುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಗಾಂಧಿನಗರ ಅವರ ನಿವಾಸದ ಬಳಿ ಜಮಾಯಿಸಿದ್ದ ಕಾರ್ಯಕರ್ತರನ್ನು ಭೇಟಿಯಾದ ಹೀರಾಬೆನ್, ಮೋದಿಯ ಅಭೂತಪೂರ್ವ ಗೆಲುವಿಗಾಗಿ ಧನ್ಯವಾದ ಹೇಳಿದರು.

ಚೌಕೀದಾರ್ ಅಳಿಸಿದ ಮೋದಿ!

ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಪ್ರಭಾವ ಬೀರಿದ್ದ ಚೌಕೀದಾರ್ (ಕಾವಲುಗಾರ) ಪದವನ್ನು ಟ್ವಿಟರ್ ಖಾತೆಯಿಂದ ಪ್ರಧಾನಿ ಮೋದಿ ತೆಗೆದುಹಾಕಿದ್ದಾರೆ. ಚೌಕೀದಾರ್ ಎಂಬ ಉತ್ಸಾಹವನ್ನು ಉಳಿಸಿಕೊಂಡೇ ದೇಶದ ಅಭಿವೃದ್ಧಿಗೆ ಕೆಲಸ ಮಾಡೋಣ. ಚೌಕೀದಾರ್ ನನ್ನ ಅಕೌಂಟ್​ನಿಂದ ಹೋಗಿರಬಹುದು, ಆದರೆ, ಅದು ನನ್ನ ಜೀವನದ ಅವಿಭಾಜ್ಯ ಅಂಗ ಎಂದಿದ್ದಾರೆ.

ಜನಾದೇಶ ಗೌರವಿಸುವೆನೆಂದ ರಾಹುಲ್

ನವದೆಹಲಿ: ಸ್ಪಷ್ಟ ಬಹುಮತ ಪಡೆದ ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿ ಮಾತನಾಡಿದ ರಾಹುಲ್ ಗಾಂಧಿ, ಫಲಿತಾಂಶದಲ್ಲಿ ಏನು ತಪ್ಪಾಗಿದೆ ಎಂದು ಹುಡುಕುವ ದಿನವಲ್ಲ. ಭಾರತದ ಜನತೆ ಮುಂದಿನ ಸರ್ಕಾರವನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ, ಹೀಗಾಗಿ ಮೋದಿ ನಮ್ಮ ಮುಂದಿನ ಪ್ರಧಾನಿಯಾಗುತ್ತಾರೆ ಮತ್ತು ನಾನು ಅದನ್ನು ಗೌರವಿಸುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಯ ನೀಡಿದ ರಾಹುಲ್ ಯಾರೂ ಹೆದರಬೇಕಾಗಿಲ್ಲ, ಪ್ರೀತಿ ಎಂದೂ ಸೋಲುವುದಿಲ್ಲ. ಮುಂದಿನ ಬಾರಿ ಮತ್ತಷ್ಟು ಬಲಿಷ್ಠರಾಗಿ ಹೋರಾಟ ಮಾಡೋಣ ಎಂದಿದ್ದಾರೆ. ಅಮೇಠಿ ಕ್ಷೇತ್ರದಲ್ಲಿನ ತಮ್ಮ ಸೋಲನ್ನು ಒಪ್ಪಿಕೊಂಡ ರಾಹುಲ್, ಸಚಿವೆ ಸ್ಮೃತಿ ಇರಾನಿಗೆ ಶುಭಕೋರಿದ್ದಾರೆ.

ಸೋಲಿನ ಆಘಾತ ಕಾಂಗ್ರೆಸ್ ಮುಖಂಡ ಸಾವು: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಮತ್ತು ಭೋಪಾಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ದಿಗ್ವಿಜಯ ಸಿಂಗ್​ಗೆ ಹಿನ್ನಡೆಯಾಗುತ್ತಿದ್ದ ಕಾರಣ ಸಿಯೋರ್ ಜಿಲ್ಲೆಯ ರತನ್ ಸಿಂಗ್ ಠಾಕೂರ್ ಮತ ಎಣಿಕೆ ಕೇಂದ್ರದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.