More

    ಈ ಜಗತ್ತಿನಲ್ಲಿ ಯಾರೂ ನಿಷ್ಪ್ರಯೋಜಕರಲ್ಲ…

    ಈ ಜಗತ್ತಿನಲ್ಲಿ ಯಾರೂ ನಿಷ್ಪ್ರಯೋಜಕರಲ್ಲ...ಪಾಲಕರಿಗೆ, ವೃದ್ಧರಿಗೆ, ಗುರು-ಹಿರಿಯರಿಗೆ ಮರ್ಯಾದೆ ಕೊಡುವುದನ್ನು ಹಾಗೂ ಸೇವೆ ಮಾಡುವುದನ್ನು ಮಕ್ಕಳಿಗೆ ಕಲಿಸಬೇಕು. ಇದನ್ನೆಲ್ಲ ನಾವೂ ಮಾಡುತ್ತಿರಬೇಕು. ಆಗ ಮಾತ್ರ ಮಕ್ಕಳು ನಮ್ಮನ್ನು ನೋಡಿ ಅನುಕರಿಸುತ್ತಾರೆ. ಅವರು ಅಪ್ಪಟ ಬಂಗಾರವಾದರೆ ಮಾತ್ರ ಅವರ ಯೋಗ್ಯತೆಗೆ ಸರಿಯಾದ ಬೆಲೆ ಸಿಗುತ್ತೆ.

    ‘ನೀನು ಹೆಣ ಹೊರೋದಕ್ಕೂ ನಾಲಾಯಕ್ಕು…’ ಅಂತ ಕೆಲವರು ಬೈಯೋದನ್ನು ನೀವು ಕೇಳಿರಬಹುದು. ಯಾರಿಂದಲಾದರೂ ಒಂದು ನಿಗದಿತ ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ ಆತ ನಿಷ್ಪ್ರಯೋಜಕ ಅಂತ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಎಲ್ಲರಿಂದಲೂ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಒಬ್ಬ ಸೋಮಾರಿಯಾಗಿ ಯಾವಾಗಲೂ ಕುಳಿತುಕೊಂಡೇ ಇರುತ್ತಾನೆ ಅಂತಾದರೆ ಅಂಥವನನ್ನು ವಾಚ್​ವುನ್ ಅಥವಾ ಲಿಫ್ಟ್​ಆಪರೇಟರ್ ಕೆಲಸಕ್ಕೆ ನೇಮಿಸಿ. ಗೇಟ್ ಹತ್ರ ಬಂದವರನ್ನು ಬರೀ ವಿಚಾರಿಸೋದು ಅಥವಾ ಸ್ಟೂಲ್ ಮೇಲೆ ಕುಳಿತು ಲಿಫ್ಟಲ್ಲಿ ಜನರನ್ನು ಮೇಲೆ-ಕೆಳಗೆ ಸಾಗಿಸೋದು ಅವನ ಜಾಯಮಾನಕ್ಕೆ ಹೊಂದುವ ಕೆಲಸವಾದ್ದರಿಂದ ಖುಷಿಯಾಗಿಯೇ ಅದನ್ನು ಮಾಡುತ್ತಿರುತ್ತಾನೆ. ಒಂದು ವೇಳೆ ಪಾದರಸದಂತಹ ಚುರುಕಿನ ವ್ಯಕ್ತಿ ಮಾಡುವ ಕೆಲಸವನ್ನು ಸೋಮಾರಿಗೆ ಕೊಟ್ಟು ಸೋಮಾರಿ ಮಾಡುವ ಕೆಲಸವನ್ನು ಚುರುಕು ವ್ಯಕ್ತಿಗೆ ಕೊಟ್ಟಲ್ಲಿ

    ಇಬ್ಬರ ಕೆಲಸವೂ ಕೆಡುತ್ತದೆ. ಈ ಜಗತ್ತಿನಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಏನಾದರೂ ವಿಶೇಷವಾದ ಗುಣ ಹೊಂದಿಯೇ ಇರುತ್ತಾನೆ. ಆ ಗುಣವನ್ನೇ ಬಾರ್ನ್ ಗಿಫ್ಟ್ ಅಂತ ಅನ್ನೋದು. ಅದು ಜನ್ಮತಃ ಬಂದಿದ್ದು ಆ ಗುಣಕ್ಕೆ ಪೂರಕವಾದ ಕೆಲಸವನ್ನು ಮಾತ್ರ ಅನಾಯಾಸವಾಗಿ ಮಾಡಿ ಮುಗಿಸುವ ನೈಪುಣ್ಯವನ್ನು ಪಡೆದಿರುತ್ತಾನೆ. ಬಳಪದ ಕಲ್ಲಿನಿಂದ ಕುಸುರಿ ಕೆಲಸಗಳ ಸುಂದರವಾದ ಮೂರ್ತಿಯನ್ನು ನಿರ್ವಿುಸಲು ಸಾಧ್ಯವಿಲ್ಲ. ಯಾಕೆಂದರೆ ಇದಕ್ಕೆ ಶಿಲ್ಪಿಯ ಉಳಿಯ ಪೆಟ್ಟುಗಳನ್ನು ಸಹಿಸುವ ಗುಣವಾಗಲೀ ಆತನಿಗೆ ಬೇಕಾದ ಆಕಾರವನ್ನು ಹೊಂದುವ ಗುಣವಾಗಲೀ ಇಲ್ಲ. ಇದನ್ನು ಬರೆಯಲು ಮಾತ್ರ ಬಳಸಬಹುದು. ವಿಗ್ರಹಕ್ಕೆ ಅಮೃತಶಿಲೆಯೇ ಬೇಕು. ಎಲ್ಲೋ ಬಿದ್ದಿದ್ದ ಅನಾಥ ಕಲ್ಲಿಗೆ ಶಿಲ್ಪಿಯೊಬ್ಬನಿಂದ ಜೀವಂತಿಕೆ ಬರುತ್ತದೆ. ಆದರೆ ಈ ಕಲ್ಲಿಂದ ಬರೆಯಲು ಸಾಧ್ಯವಿಲ್ಲ.

    ಒಂದು ಸರ್ಕಸ್ ಪ್ರದರ್ಶನದಲ್ಲಿ ಹಂಸಗಳು ತರಹೇವಾರಿ ತಾಲೀಮನ್ನು ಮಾಡುತ್ತಿದ್ದವು. ಒಬ್ಬಾತ ಕುತೂಹಲ ತಡೆಯಲಾರದೆ ತರಬೇತಿದಾರನಿಗೆ- ‘ಇವುಗಳಿಗೆ ಇಷ್ಟೊಂದು ಟ್ರೖೆನಿಂಗ್ ಕೊಡೋದಕ್ಕೆ ನೀವು ಎಷ್ಟೊಂದು ಕಷ್ಟಪಟ್ಟಿರಬಹುದಲ್ವಾ?’ ಎಂದು ಕೇಳಿದ. ಆ ತರಬೇತುದಾರ- ‘ನಾನು ಮಾಡಿದ್ದು ಏನೂ ಇಲ್ಲ. ಒಂದು ದಿನ ಕಾಡಿನಲ್ಲಿ ಹಂಸಗಳ ಗುಂಪೊಂದು ಒಂಟಿಕಾಲಿನಲ್ಲಿ ಡ್ಯಾನ್ಸ್ ಮಾಡುತ್ತಿತ್ತು. ಇನ್ನೊಂದು ಕಾಡಿನಲ್ಲಿ ಗಿರಕಿ ಹೊಡೆಯುವ ಹಂಸಗಳ ಗುಂಪಿತ್ತು. ಮತ್ತೊಂದು ಕಾಡಿನಲ್ಲಿ ಹಂಸಗಳು ಪಲ್ಟಿ ಹೊಡೆಯುತ್ತಿದ್ದವು. ಒಂದೊಂದು ಗುಂಪಿನಿಂದಲೂ ನಾಲ್ಕು ನಾಲ್ಕು ಹಂಸಗಳನ್ನು ಹಿಡಿದು ತಂದು ಒಟ್ಟಿಗೆ ಬಿಟ್ಟೆ. ಅವುಗಳು ಜನ್ಮತಃ ಬಂದ ಗುಣವನ್ನು ತೋರಿಸುತ್ತಿವೆ ಅಷ್ಟೆ. ಒಂದಕ್ಕೆ ಇನ್ನೊಂದರ ವಿದ್ಯೆ ಕಲಿಸಲು ಸಾಧ್ಯವೇ ಇಲ್ಲ’ ಎಂದ.

    ಇದಕ್ಕೆ ಇನ್ನೊಂದು ಉತ್ತಮ ಉದಾಹರಣೆ ಚಾಣಕ್ಯ-ಚಂದ್ರಗುಪ್ತ ಮೌರ್ಯರದ್ದು. ಐತಿಹ್ಯದ ಪ್ರಕಾರ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಗುರುವಾಗಿದ್ದ ಚಾಣಕ್ಯನು ಪೂರ್ವ ಭಾರತದ ಮಗಧ ರಾಜ್ಯದಲ್ಲಿ ಎಳೆಯ ಹುಡುಗ ಚಂದ್ರಗುಪ್ತನು ಬಾಲಕರೊಂದಿಗೆ ಆಟವಾಡುತ್ತಿದ್ದುದನ್ನು ಕಂಡ. ಚಂದ್ರಗುಪ್ತನು ನ್ಯಾಯಾಧೀಶನಾಗಿಯೂ ಇನ್ನೊಬ್ಬ ಹುಡುಗ ಅಪರಾಧಿಯಾಗಿಯೂ ಆಟವಾಡುತ್ತಿದ್ದರು. ನ್ಯಾಯಾಧೀಶನ ನ್ಯಾಯವಿಚಾರಣೆಯ ವೈಖರಿಯನ್ನು ಗಮನಿಸಿದ ಚಾಣಕ್ಯ ಈತ ಮುಂದೊಂದು ದಿನ ಸಾಮ್ರಾಟನಾಗಿ ಮೆರೆಯುವ ಯೋಗ್ಯತೆ ಉಳ್ಳವನೆಂದು ಮನಗಂಡು ತಮ್ಮ ಗರಡಿಯಲ್ಲಿ ತೊಡಗಿಸಿದರು. ನಂತರದ್ದೆಲ್ಲ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಇತಿಹಾಸ. ನೀವು ಕೇಳಬಹುದು, ‘ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡುವ ಬದಲಾಗಿ ಚಾಣಕ್ಯನೇ ಯಾಕೆ ರಾಜನಾಗಬಾರದಿತ್ತು?’ ತರಬೇತುದಾರನಾದವನು ನಾಯಕನಾಗಲು ಸಾಧ್ಯವಿಲ್ಲ, ನಾಯಕನಾದವನು ತರಬೇತುದಾರನಾಗಲು ಸಾಧ್ಯವಿಲ್ಲ ಎಂಬ ಅರಿವು ಚಾಣಕ್ಯನಿಗಿತ್ತು.

    ಆಸಕ್ತಿಯನ್ನು ಗಮನಿಸಿ: ಯಾರಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದನ್ನೇ ಕಲಿಯಬೇಕು. ಅನಾಸಕ್ತಿಯಿಂದ ಕಲಿಯ ಹೊರಟ ಯಾವ ವಿದ್ಯೆಯೂ ಫಲಿಸದು. ನನಗೆ ನನ್ನ ಮಗಳನ್ನು ಡಾಕ್ಟರ್ ಮಾಡುವ ದೊಡ್ಡ ಆಸೆ ಇತ್ತು. ಆದರೆ ಅವಳಿಗೆ ರಕ್ತ ಕಂಡರೆ ಹೆದರಿಕೆ. ಮತ್ತೇನು ಮಾಡೋದು? ಕೊನೆಗೆ ಅವಳಿಷ್ಟದಂತೆ ಎಂಬಿಎ ಆರಿಸಿಕೊಂಡು ಮೊದಲ ಶ್ರೇಣಿಯಲ್ಲಿ ಪಾಸಾದಳು. ಒಂದು ವೇಳೆ ನಾನೇನಾದರೂ ಅವಳಿಗೆ ಡಾಕ್ಟರ್ ಆಗಬೇಕು ಅಂತ ಒತ್ತಡ ಹೇರಿದ್ದರೆ ಅವಳು ಪಾಸಾಗುತ್ತಿದ್ದಳೋ ಇಲ್ಲವೋ? ‘ಸಬ್ ಹುಯೇ ರಾಣಿ, ಕೌನ್ ಭರೇ ಪಾನಿ’ ಎಂಬ ಗಾದೆಯಂತೆ ಎಲ್ರೂ ರಾಣಿಯರಾದ್ರೆ ನೀರು ತುಂಬೋರು ಯಾರು? ಯಾರ್ಯಾರು ಯಾವ ಯಾವ ಕೆಲಸಕ್ಕೆ ಸಮರ್ಥರಿದ್ದಾರೋ ಅವರು ಅದೇ ಕೆಲಸವನ್ನು ಮಾಡಬೇಕೆನ್ನೋದು ಒಟ್ಟು ತಾತ್ಪರ್ಯ.

    ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳೋದಾದ್ರೆ, ಪಿಯುಸಿವರೆಗೆ ಹೇಗೋ ಪಾಸಾದೆ! ಬಿಕಾಂ ಡಿಗ್ರಿಯಲ್ಲಿ ಪಾಠಗಳೆಲ್ಲ ತಲೆಯ ಮೇಲೆ ಹಾರಿ ಹೋಗ್ತಾ ಇದ್ವು. ಕೊನೆಗೂ ಪಾಸ್ ಆಗ್ಲೇ ಇಲ್ಲ. ಪಾಸ್ ಆದ್ರೆ ಬ್ಯಾಂಕಿನಲ್ಲಿ ಸಾವಿರ ರೂಪಾಯಿ ಸಂಬಳದ ಕೆಲಸ ಕೊಡಿಸುವುದಾಗಿ ನನ್ನ ಭಾವ ಕುಸುಮಾಕರ್ ಹೇಳಿದ್ರು. ಆದ್ರೆ ನನಗೆ ಅದಾಗಲೇ ಮ್ಯಾಜಿಕ್ ಹುಚ್ಚು ಜಾಸ್ತಿ ಆಗಿತ್ತು. ಬೇರೆ ಯಾವುದರಲ್ಲೂ ಆಸಕ್ತಿನೇ ಇರಲಿಲ್ಲ. ಕಾಲೇಜಿಗೆ ಗುಡ್​ಬೈ ಹೇಳಿದೆ. ಎಷ್ಟೇ ಸಂಬಳ ಬಂದ್ರೂ ಕೆಲ್ಸಾನೇ ಬೇಡ. ಹತ್ತು ರೂಪಾಯಿ ಸಿಕ್ಕಿದ್ರೂ ಸಾಕು, ಮ್ಯಾಜಿಕನ್ನೇ ಜೀವನಕ್ಕೆ ಆರಿಸಿಕೊಳ್ತೀನೀಂತ ತೀರ್ಮಾನ ಮಾಡಿ ಅದರಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡು ಯಶಸ್ವಿಯಾದೆ. ಹುಟ್ಟು ಪ್ರತಿಭೆಯೊಂದೇ ಸಾಲದು. ಅದಕ್ಕೆ ಸಾಣೆ ಹಿಡಿದು ಅದು ಪ್ರಕಾಶಿಸುವಂತೆ ಮಾಡಬೇಕಾಗುತ್ತದೆ. ಅಂದ ಆಕಾರವಿಲ್ಲದ ಕಠೋರವಾದ ಕಲ್ಲನ್ನು ತಿದ್ದಿ ತೀಡಿದಾಗ ಮಾತ್ರ ಅದು ಅಮೂಲ್ಯವಾದ ವಜ್ರವಾಗಿ ಮಾರ್ಪಡುತ್ತದೆ. ಇಲ್ಲದಿದ್ದಲ್ಲಿ ಅದು ಯಾವ ಉಪಯೋಗಕ್ಕೂ ಬಾರದ ಕಲ್ಲಾಗಿ ಉಳಿದು ಹೋಗುತ್ತದೆ. ಇದಕ್ಕೆಲ್ಲ ಯೋಗ್ಯ ಗುರುವಿನ ಅಗತ್ಯವಿದೆ. ಚಂದ್ರಗುಪ್ತ ಮೌರ್ಯನಿಗೆ ಚಾಣಕ್ಯ ಸಿಕ್ಕಿದ ಹಾಗೆ ನನಗೆ ನನ್ನ ತಂದೆ ಸಿಕ್ಕಿದ್ದರು. ನೀವು ನಿಮ್ಮ ಮಕ್ಕಳಿಗೆ ಯೋಗ್ಯ ಗುರುವಾಗಬಹುದು. ನಿಮ್ಮ ಮಕ್ಕಳ ಬುದ್ಧಿವಂತಿಕೆ ಬಗ್ಗೆ ನಿಮಗೆ ಹೆಮ್ಮೆ ಎನಿಸಿ ಅವರನ್ನು ಬಾಯಿ ತುಂಬ ಹೊಗಳಬಹುದು. ಆದರೆ ಅವರ ಬೆಳವಣಿಗೆಯ ಪ್ರತಿ ಹಂತದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ತಪು್ಪ ಮಾಡಿದಾಗ ಅವರನ್ನು ಶಿಕ್ಷಿಸದಿದ್ದಲ್ಲಿ ಅವರು ದಾರಿ ತಪು್ಪವ ಸಾಧ್ಯತೆಗಳಿವೆ. ‘If you spare the rod, you spoil the child‘ ಎಂಬ ಗಾದೆಯಂತೆ ಮಕ್ಕಳು ತಪು್ಪ ಮಾಡಿದಲ್ಲಿ ಅಲ್ಲೇ ಶಿಕ್ಷಿಸಿ. ಇಲ್ಲದಿದ್ದಲ್ಲಿ ಅವರು ಯಾವತ್ತೂ ಸರಿದಾರಿಗೆ ಬರೋದಿಲ್ಲ. ನಿಮ್ಮ ಶಿಕ್ಷೆ ಶಿಕ್ಷಣದಂತಿರಬೇಕು. ನಿಮ್ಮ ಶಿಕ್ಷೆ ಅವರು ಮಾಡಿದ್ದು ತಪು್ಪ ಎಂದು ತಿಳಿಸುವಂತಿರಬೇಕೇ ಹೊರತು ಕಠಿಣಶಿಕ್ಷೆ ಆಗಬಾರದು. ಆ ಶಿಕ್ಷಣ ಮಕ್ಕಳ ಬೆಲೆಯನ್ನು ಹೆಚ್ಚಿಸುವಂತಿರಬೇಕು. ಪಾಲಕರಿಗೆ, ವೃದ್ಧರಿಗೆ, ಗುರು-ಹಿರಿಯರಿಗೆ ಮರ್ಯಾದೆ ಹಾಗೂ ಸೇವೆ ಮಾಡುವುದನ್ನು ಕಲಿಸಬೇಕು. ಇದನ್ನೆಲ್ಲ ನಾವೂ ಮಾಡುತ್ತಿರಬೇಕು. ಆಗ ಮಾತ್ರ ಮಕ್ಕಳು ನಮ್ಮನ್ನು ನೋಡಿ ಅನುಕರಿಸುತ್ತಾರೆ. ಅವರು ಅಪ್ಪಟ ಬಂಗಾರವಾದರೆ ಮಾತ್ರ ಅವರ ಯೋಗ್ಯತೆಗೆ ಸರಿಯಾದ ಬೆಲೆ ಸಿಗುತ್ತೆ. ರೋಲ್ಡ್​ಗೋಲ್ಡ್ ಆದರೆ ಅದು ಚಿನ್ನದಂತೆ ಹೊಳೆಯುತ್ತಾದರೂ ಅದಕ್ಕೆ ಬೆಲೆ ಇಲ್ಲ.

    ಇದು ಮಕ್ಕಳಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯಿಸುತ್ತದೆ.

    ಪ್ರತಿದಿನ ನಾನು ಫ್ಯಾಕ್ಟರಿಯಲ್ಲಿ ಬೆಳಗ್ಗೆ ಸ್ಲಂನಿಂದ ಬಂದ ಅನಕ್ಷರಸ್ಥ ಕೆಲಸಗಾರರನ್ನು ಸೇರಿಸಿ ನೀತಿಕಥೆ, ಜಾಣರ ಲೆಕ್ಕ, ಓದು-ಬರಹವನ್ನು ಕಲಿಸುತ್ತಿದ್ದೆ. ಯಾವ್ಯಾವ ಕೆಲಸವನ್ನು ಯಾರ್ಯಾರು ಚೆನ್ನಾಗಿ ಮಾಡುತ್ತಾರೆ ಎಂಬುದನ್ನು ಕಂಡು ಹಿಡಿದು ಅವರವರ ನೈಪುಣ್ಯಕ್ಕೆ ಅನುಗುಣವಾಗಿ ಕೆಲಸ ಕೊಟ್ಟಿದ್ದರಿಂದ ಅವರು ಸಂತೋಷದಿಂದ ಕೆಲಸ ಮಾಡುತ್ತಿದ್ದರು. ಆದರೂ ಅವರ ಕೆಲಸದ ಮೇಲೆ ಒಂದು ಕಣ್ಣಿಟ್ಟಿರುತ್ತಿದ್ದೆ. ಇಲ್ಲದಿದ್ದಲ್ಲಿ ನಿಧಾನಕ್ಕೆ ಅವರ ಕಾರ್ಯಕ್ಷಮತೆ ಕುಗ್ಗಿ ನಾನು ಅಲ್ಲಿ ಇದ್ದಾಗ ಸಿಗುವ ಫಲಿತಾಂಶಕ್ಕೂ ಇಲ್ಲದಿದ್ದಾಗ ಸಿಗುವ ಫಲಿತಾಂಶಕ್ಕೂ ವ್ಯತ್ಯಾಸವಿರುತ್ತಿತ್ತು. ಮೇಲ್ವಿಚಾರಣೆ ಇಲ್ಲದಿದ್ದರೆ ಅತ್ಯುತ್ತಮ ಕಾರ್ವಿುಕರು ಕೂಡ ಉಪಯೋಗವಿಲ್ಲದಂತಾಗುತ್ತಾರೆ. ಬೆಳಗ್ಗೆ ಕೆಲಸ ಕಲಿಸಿ ನೀವು ಸಂಜೆ ತನಕ ದೂರವಿದ್ದು ನಂತರ ಹೋಗಿ ನೋಡಿ. ನೀವು ಹೇಳಿ ಕೊಟ್ಟಂತಹ ಕೆಲಸ ಆಗಿರುವುದಿಲ್ಲ ಇಲ್ಲವೇ ಎಷ್ಟು ಆಗಿರಬೇಕಿತ್ತು ಅಷ್ಟು ಆಗಿರುವುದಿಲ್ಲ. ಬೆಂಕಿಯನ್ನು ಉರಿಸಿ ಎಣ್ಣೆಯನ್ನೋ ತುಪ್ಪವನ್ನೋ ಆಗಾಗ ಸುರಿಯದೆ ಹಾಗೇ ಬಿಟ್ಟಲ್ಲಿ ಕ್ರಮೇಣ ಅದು ಆರುತ್ತದೆ. ಒಮ್ಮೆ ಆರಿದ ಬೆಂಕಿಯನ್ನು ಮತ್ತೆ ಉರಿಸೋದು ಕಷ್ಟಸಾಧ್ಯ. ಜೋರಾಗಿ ವಾಹನ ಓಡಿಸುವಾಗ ಎಕ್ಸಿಲರೇಟರ್ ಬಿಟ್ಟರೂ ಅದು ಹಾಗೇ ಓಡುತ್ತದೆ ಎಂದು ಅನ್ನಿಸುತ್ತದೆ. ಬಿಟ್ಟರೆ ಸ್ವಲ್ಪ ದೂರ ಓಡಿ ನಿಧಾನವಾಗಿ ನಿಲ್ಲುತ್ತೆ. ನಿಮ್ಮ ಗಾಡಿ ಸದಾ ಮುನ್ನುಗ್ಗಿ ಓಡುತ್ತಿರಲಿ ಎಂದು ಸದಾ ಹಾರೈಸುತ್ತೇನೆ.

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts