ಹುಬ್ಬಳ್ಳಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿರುವುದರಿಂದ ಮಾರುಕಟ್ಟೆಯಲ್ಲಿ ಸ್ವಾರಸ್ಯಕರ ಸಂಗತಿಗಳು ನಡೆಯುತ್ತಿವೆ.
ಸೆಪ್ಟೆಂಬರ್ ಅಂತ್ಯದವರೆಗೆ ಬ್ಯಾಂಕ್‌ಗಳಲ್ಲಿ 2 ಸಾವಿರ ಮುಖಬೆಲೆಯ ನೋಟು ವಿನಿಮಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ವಿಚಾರವೇ ಮಾರುಕಟ್ಟೆಯಲ್ಲಿ ಸ್ವಾರಸ್ಯಕರ ಬೆಳವಣಿಗೆಗೆ ಆಸ್ಪದ ನೀಡಿದೆ. ಆರ್‌ಬಿಐ ಪ್ರಕಾರ ಮಾರುಕಟ್ಟೆಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟು ಮಾನ ಕಳೆದುಕೊಂಡಿದೆ. ಇದಕ್ಕೆ ಬೆಲೆ ಸಿಗುವುದು ಬ್ಯಾಂಕ್‌ಗಳಲ್ಲಿ ಮಾತ್ರ. ಹೀಗಿದ್ದಾಗಿಯೂ ಸೆಪ್ಟೆಂಬರ್‌ವರೆಗೆ ಬ್ಯಾಂಕ್‌ಗಳಲ್ಲಿ ವಿನಿಮಯಕ್ಕೆ ಅವಕಾಶ ಉಂಟಲ್ಲ ಎಂದು ಕೆಲವರು ತಗಾದೆ ತೆಗೆದು ಚಲಾವಣೆಗೆ ಪ್ರಯತ್ನ ಮಾಡುತ್ತಿದ್ದಾರೆ.
ಬ್ಯಾಂಕ್ ಮುಂದೆ ಸಾಲಿಲ್ಲ: 2016ರ ಸೆಪ್ಟೆಂಬರ್‌ನಲ್ಲಿ 500 ಮತ್ತು 1000 ರೂ. ಮುಖ ಬೆಲೆಯ ನೋಟು ರದ್ದು ಮಾಡಿದಾಗ ಜನ ಕಂಗಾಲಾಗಿದ್ದರು. ಹಳೆಯ ನೋಟಿಗೆ ಬದಲಾಗಿ ಹೊಸ ನೋಟು ಪಡೆಯಲು ಬ್ಯಾಂಕ್‌ಗಳ ಮುಂದೆ ಜನ ಮುಗಿಬಿದ್ದಿದ್ದರು. ಸಾಲಿನಲ್ಲಿ ನಿಂತಿದ್ದ ಜನರಿಗೆ ಹೊಸ ನೋಟು ನೀಡಲು ಬ್ಯಾಂಕ್‌ಗಳಿಂದಲೂ ತಕ್ಷಣಕ್ಕೆ ಸಾಧ್ಯವಾಗಿರಲಿಲ್ಲ. ಆದರೀಗ ಅಂದಿನ ಸ್ಥಿತಿ ಕಾಣದಾಗಿದೆ. 2 ಸಾವಿರ ರೂ. ಮುಖಬೆಲೆಯ ನೋಟು ಬ್ಯಾಂಕ್‌ಗೆ ಜಮಾ ಮಾಡಲು ಬರುವವರ ಸಂಖ್ಯೆ ತೀರಾ ಕಡಿಮೆ ಇದೆ. ಅಲ್ಲದೇ ವಿನಿಮಯಕ್ಕೆ ಸೆಪ್ಟೆಂಬರ್‌ವರೆಗೆ ಕಾಲಾವಕಾಶ ಇರುವುದರಿಂದ ಜನ ಸಾಲಿನಲ್ಲಿ ಬಂದು ನಿಲ್ಲದಾಗಿದ್ದಾರೆ.
ಪ್ರಯಾಣಿಕರು-ನಿರ್ವಾಹಕರ ಕಿತ್ತಾಟ: 2 ಸಾವಿರ ಮುಖಬೆಲೆ ನೋಟು ಚಲಾವಣೆ ಹಿಂಪಡೆದಿರುವುದರಿಂದ ಹೆಚ್ಚು ಸಮಸ್ಯೆ ಆಗಿರುವುದು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ. ಕೆಲ ಪ್ರಯಾಣಿಕರು ಬಸ್‌ಗಳಲ್ಲಿ ಟಿಕೆಟ್ ಪಡೆಯಲು 2 ಸಾವಿರ ರೂ. ನೋಟ್ ನೀಡುತ್ತಿದ್ದಾರೆ. ಆದರೆ, ನಿರ್ವಾಹಕರು ಇದು ಚಲಾವಣೆಯಲ್ಲಿ ಇಲ್ಲ ಎನ್ನುತ್ತಿದ್ದಾರೆ. ‘ನಿಮ್ಮದು ಸರ್ಕಾರಿ ವ್ಯವಸ್ಥೆ. ಖಾಸಗಿ ಆಗಿದ್ದರೆ ಬಿಡಿ ಎನ್ನಬಹುದಿತ್ತು. ನೀವು ನಿಮ್ಮ ಕಚೇರಿಗೆ ಜಮಾ ಮಾಡಿ, ನಮ್ಮ ಬಳಿ ಇರುವುದು ಇದೊಂದೇ ನೋಟು’’ ಎಂದು ಹೇಳಿ ಟಿಕೆಟ್ ಪಡೆಯಲು ಕಿತ್ತಾಟ ನಡೆಸುತ್ತಿದ್ದಾರೆ. ಇದು ನಿರ್ವಾಹಕರಿಗೆ ತಲೆನೋವು ತಂದಿಟ್ಟಿದೆ. ನಿರ್ವಾಹಕರು ಈ ತೊಂದರೆಯಿಂದ ಪಾರಾಗಲು ಪ್ರಯಾಣಿಕರು ಬಸ್ ಹತ್ತುವ ಮುನ್ನವೇ ‘2 ಸಾವಿರ ರೂ ನೋಟು ಚಲಾವಣೆಯಲ್ಲಿ ಇಲ್ಲ’ವೆಂದು ಗಮನ ಸೆಳೆಯುತ್ತಿದ್ದಾರೆ.
ತರಕಾರಿ, ಕಿರಾಣಿಯೂ ಸಿಗಲ್ಲ: ನೋಟು ಚಲಾವಣೆ ಹಿಂಪಡೆಯುವುದಾಗಿ ಘೋಷಿಸಿದ ಮಾರನೇ ದಿನದಿಂದಲೇ ಹುಬ್ಬಳ್ಳಿಯ ತರಕಾರಿ, ಕಿರಾಣಿ ಅಂಗಡಿಗಳಲ್ಲಿ 2 ಸಾವಿರ ರೂ. ಮಾನ ಕಳೆದುಕೊಂಡಿದೆ. ಅಂಗಡಿಕಾರರು ನೋಟು ಪಡೆಯುತ್ತಿಲ್ಲ. ತರಕಾರಿ ಅಂಗಡಿಯವರು ಈ ಹಿಂದೆಯೇ 2 ಸಾವಿರ ರೂ. ನೋಟು ಪಡೆಯಲು ಹಿಂದೇಟು ಹಾಕುತ್ತಿದ್ದರು. ಈಗಂತೂ ನೋಟು ಮುಟ್ಟದಾಗಿದ್ದಾರೆ.
ಪೆಟ್ರೋಲ್ ಸಿಗಲ್ಲ: ಬಹುತೇಕ ಪೆಟ್ರೋಲ್ ಬಂಕ್ ಮಾಲೀಕರು ನಿತ್ಯ ಸಂಗ್ರಹವಾಗುವ ಹಣವನ್ನು ಬ್ಯಾಂಕಿಗೆ ಜಮಾ ಮಾಡುವುದು ವಾಡಿಕೆ. ಹೀಗಾಗಿ, ಪೆಟ್ರೋಲ್ ಬಂಕ್‌ಗಳಲ್ಲಿ ಕೆಲದಿನಗಳ ಮಟ್ಟಿಗಾದರೂ ನೋಟು ಚಲಾವಣೆಗೆ ತೊಂದರೆ ಆಗದು ಎಂದುಕೊಳ್ಳಲಾಗಿತ್ತು. ಆದರೀಗ ಬಂಕ್‌ಗಳಲ್ಲಿಯೂ ನೋಟು ನಡೆಯುವುದಿಲ್ಲ ಎನ್ನುವ ಪೋಸ್ಟರ್ ಅಂಟಿಸಲಾಗಿದೆ. ಬ್ಯಾಂಕಿಗೆ ಹಣ ಜಮಾ ಮಾಡಿ ಎಂದು ಗ್ರಾಹಕರು ಕೋರಿದರೂ ಬಂಕ್‌ನ ಕೆಲಸಗಾರರು ಒಪ್ಪದಾಗಿದ್ದಾರೆ.
ದಂಡ ಸ್ವೀಕರಿಸದ ಪೊಲೀಸರು: ನೋಟು ಚಲಾವಣೆ ಹಿಂಪಡೆದಿರುವ ಬಿಸಿ ಸಂಚಾರಿ ಪೊಲೀಸರಿಗೂ ತಟ್ಟಿದೆ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದವರು, ವಾಹನಗಳ ದಾಖಲೆ ಸರಿಯಾಗಿಲ್ಲದಿರುವುದಕ್ಕೆ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಪೊಲೀಸರು ದಂಡದ ರಸೀದಿ ನೀಡುತ್ತಿದ್ದಂತೆಯೇ ಸವಾರರು 2 ಸಾವಿರ ರೂ. ನೋಟು ನೀಡುತ್ತಿದ್ದಾರೆ. ಇದು ಚಲಾವಣೆಯಲ್ಲಿ ಇಲ್ಲವೆಂದು ಪೊಲೀಸರು ಹೇಳಿದಾಕ್ಷಣ ಸವಾರರು ಜಗಳ ಕಾಯುತ್ತಿದ್ದಾರೆ. ‘ನೀವು ಸರ್ಕಾರಕ್ಕೆ ಹಣ ಜಮಾ ಮಾಡುತ್ತೀರಿ, ಹೀಗಾಗಿ ನೋಟು ಪಡೆಯಲೇಬೇಕು’ ಎಂದು ಆಗ್ರಹಿಸುತ್ತಿದ್ದಾರೆ.
ಹೊಟೇಲ್‌ಗಳಲ್ಲಿಯೂ ಬೋರ್ಡ್: ಹುಬ್ಬಳ್ಳಿಯ ಅನೇಕ ಹೋಟೆಲ್‌ಗಳಲ್ಲಿ ‘2 ಸಾವಿರ ರೂ. ನೋಟುಗಳನ್ನು ಪಡೆಯುವುದಿಲ್ಲ’ ಎಂದು ಬೋರ್ಡ್ ನೇತುಹಾಕಲಾಗಿದೆ. ನೋಟು ವಿನಿಮಯಕ್ಕೆ ಸೆಪ್ಟೆಂಬರ್‌ವರೆಗೆ ಕಾಲಾವಕಾಶ ಉಂಟಲ್ಲ ಎಂದು ಹೋಟೆಲ್‌ಗಳಲ್ಲಿಯೂ ಕೆಲ ಗ್ರಾಹಕರು ಜಗಳ ಕಾಯುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಹೋಟೆಲ್ ಮಾಲೀಕರು ನೋಟು ಪಡೆಯುವುದಿಲ್ಲ ಎನ್ನುವ ಫಲಕ ಅಳವಡಿಸಿದ್ದಾರೆ.
2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಪ್ರಯಾಣಿಕರಿಂದ ನಾವು ಪಡೆಯುತ್ತೇವೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಯಾವ ನಿರ್ವಾಹಕರೂ ಇದಕ್ಕೆ ವಿರೋಧ ಮಾಡುವುದಿಲ್ಲ. ಟಿಕೆಟ್ ಕೊಟ್ಟಾದ ಮೇಲೆ ಚಿಲ್ಲರೆ ಕೊಡಲು ಸಮಸ್ಯೆ ಆಗಬಹುದೆಂದು ಅಥವಾ ಅವರ ಬಳಿ ಹಣ ಸಂಗ್ರಹ ಇಲ್ಲದ್ದರಿಂದ 2 ಸಾವಿರ ರೂ. ನೋಟುಗಳನ್ನು ನಿರಾಕರಿಸಿರಬಹುದು.
I ವಿವೇಕಾನಂದ ವಿಶ್ವಜ್ಞ, ಕೆಎಸ್‌ಆರ್‌ಟಿಸಿ ಹು-ಧಾ ನಗರ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ