ಮಕ್ಕಳ ಸಾಹಿತ್ಯದಲ್ಲಿ ಕಾಣದ ಹೊಸ ಪ್ರಯೋಗ: ಡಾ. ರಾಜೇಂದ್ರ ಗಡಾದ ವಿಷಾದ

ಧಾರವಾಡ: ಮಕ್ಕಳ ಸಾಹಿತ್ಯದಲ್ಲಿ ಹೊಸ ಪ್ರಯೋಗವಾಗುತ್ತಿಲ್ಲ. ವಸ್ತುನಿಷ್ಠ ವಿಮರ್ಶೆ ಆಗುತ್ತಿಲ್ಲ. ಹೊಸತನ ಕಳೆದುಹೋಗಿದೆ ಎಂದು ಡಾ. ರಾಜೇಂದ್ರ ಗಡಾದ ವಿಷಾದ ವ್ಯಕ್ತಪಡಿಸಿದರು.

84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರೇಕ್ಷಾಗೃಹ ಸಭಾಂಗಣದ ಡಾ.ಡಿ.ಸಿ. ಪಾವಟೆ ವೇದಿಕೆಯಲ್ಲಿ ಶನಿವಾರ ಜರುಗಿದ ಮೊದಲ ಗೋಷ್ಠಿಯಲ್ಲಿ ‘ಮಕ್ಕಳ ಸಾಹಿತ್ಯ: ಪ್ರಕಟಣೆ ಮತ್ತು ಪ್ರಚಾರ’ ಸಮಸ್ಯೆಗಳು ಕುರಿತಾದ ವಿಷಯ ಮಂಡಿಸಿದ ಅವರು, ಕೆಲವರು ಇಂಟರ್ನೆಟ್ ಮಾಹಿತಿ ಜಾಲಾಡಿ ಒಂದೆರಡು ದಿನಗಳಲ್ಲಿ ಜೊಳ್ಳು ಕೃತಿಗಳನ್ನು ರಚಿಸುತ್ತಿದ್ದಾರೆ. ಹಳೆಯ ಕೃತಿಗಳ ಶೀರ್ಷಿಕೆ ಬದಲಿಸಿ ವಿಷಯ ಕದ್ದು ಬರೆಯುವವರು ಹೆಚ್ಚಾಗಿದ್ದಾರೆ. ಹಾಗಾಗಿ, ಮಕ್ಕಳ ಸಾಹಿತ್ಯದ ಗುಣಮಟ್ಟ ಕುಸಿಯುತ್ತದೆ. ಮಕ್ಕಳ ಸಾಹಿತ್ಯದಲ್ಲಿ ಗುಣಮಟ್ಟ ತರುವುದಕ್ಕಾಗಿ ಮಕ್ಕಳ ಪುಸ್ತಕ ನೀತಿ ಜಾರಿಯಾಗಬೇಕು. ಪುಸ್ತಕ ಹೇಗಿರಬೇಕು? ಯಾವ ಅಂಶ ಪರಿಗಣಿಸಿರಬೇಕು ಎನ್ನುವ ನಿಯಮಗಳನ್ನು ರೂಪಿಸಬೇಕು. ಈ ನೀತಿಯು ಬರಹಗಾರರಿಗೆ ಹೇಗೆ ಬರೆಯಬೇಕೆನ್ನುವ ನಿರ್ದೇಶನ ಮಾಡಬೇಕು ಎಂದರು.

ಮಡಿವಂತಿಕೆ ತೆರೆದಿಟ್ಟು, ತಮ್ಮನ್ನು ತಾವು ತೆರೆದುಕೊಳ್ಳಬೇಕು. ವಯೋಮಾನ ಆಧರಿತವಾಗಿ ಪುಸ್ತಕ ಬರಬೇಕಿದೆ. ಪುಸ್ತಕದಲ್ಲಿ ವಯೋಮಾನ ಬರೆಯಬೇಕು ಎಂದರು.

ಈಗ ಕರ್ನಾಟಕದಲ್ಲಿ ಪ್ರತಿವರ್ಷ 1,000 ಶೀರ್ಷಿಕೆಗಳ ಪುಸ್ತಕಗಳು ಬರುತ್ತಿವೆ. ಆದರೆ, ಪ್ರತಿಶತ 30ರಷ್ಟು ಪುಸ್ತಕಗಳು ಮಾತ್ರ ಮಕ್ಕಳ ಕೈಗೆ ಬರುತ್ತಿವೆ. ಕೆಲ ಬರಹಗಾರರು 1000 ಪ್ರತಿ ಮುದ್ರಿಸಿ ಹತ್ತಾರು ವರ್ಷಗಳಿಂದ ಮಾರಾಟ ಮಾಡಲು ಹೆಣಗಾಟ ನಡೆಸುತ್ತಿದ್ದಾರೆ. ಈ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರವು ಮಕ್ಕಳ ಪುಸ್ತಕ ಪ್ರಾಧಿಕಾರ ರಚಿಸಬೇಕು. ಪ್ರತಿವರ್ಷ ಬರಹಗಾರರಿಂದ ಅರ್ಜಿ ಆಹ್ವಾನಿಸಿ, ಉತ್ತಮ ಲೇಖನಗಳನ್ನು ಆಯ್ಕೆ ಮಾಡಬೇಕು. ಪ್ರಾಧಿಕಾರವೇ ಪುಸ್ತಕಗಳನ್ನು ಮುದ್ರಿಸಿ ಮಾರಾಟ ಮಾಡಬೇಕು. ಸಾಹಿತಿಗಳಿಗೆ ಮಾರಾಟದ ಹಣ ನೀಡಬೇಕು. ಸರ್ಕಾರದ ವತಿಯಿಂದ ಮಕ್ಕಳ ಸಾಹಿತ್ಯದ ಪುಸ್ತಕಗಳು ಪ್ರಕಟವಾಗಬೇಕು. ಪ್ರತಿ ಐದು ವರ್ಷಕ್ಕೊಮ್ಮೆ ಅಖಿಲ ಭಾರತ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜನೆ ಆಗಲಿ ಎಂದು ಹೇಳಿದರು.