ಜಿಪಿಎಸ್​ ನಿಯಂತ್ರಣಕ್ಕೆ ಆರೋಗ್ಯ ಸಹಾಯಕಿಯರು

ಅಜ್ಜಮಾಡ ರಮೇಶ್ ಕುಟ್ಟಪ್ಪ

ಮಡಿಕೇರಿ: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು ಇನ್ನು ಮುಂದೆ ಜಿಪಿಎಸ್ ನಿಯಂತ್ರಣಕ್ಕೆ ಒಳಪಡುತ್ತಾರೆ. ಈ ವ್ಯವಸ್ಥೆ ಜ.1 ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.

ಈಗಾಗಲೆ ಪ್ರತಿಯೊಬ್ಬ ಸಹಾಯಕಿಯರಿಗೆ ಇಲಾಖೆಯಿಂದ ಟ್ಯಾಬ್ ವಿತರಿಸಲಾಗಿದೆ. ಇಂಟರ್‌ನೆಟ್ ಸಂಪರ್ಕ ಪಡೆಯಲು ಮಾಸಿಕ 190 ರೂ. ನೀಡಲಾಗುತ್ತದೆ. ತಮ್ಮೂರಿನಲ್ಲಿ ಇಂಟರ್‌ನೆಟ್ ಸಂಪರ್ಕ ಇರುವ ಮೊಬೈಲ್ ಸಂಸ್ಥೆಯ ಸಿಮ್ ಖರೀದಿಸಲು ಸಹಾಯಕಿಯರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ತಮ್ಮ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿರುವ ಗರ್ಭಿಣಿಯರು- ಮಕ್ಕಳ ಮಾಹಿತಿ, ಆಸ್ಪತ್ರೆಗೆ ಬರುವ ಹೊರ ರೋಗಿಗಳ ವಿವರ, ಒಪಿಡಿಯಲ್ಲಿರುವವರ ವಿವರವನ್ನು ಪ್ರತಿನಿತ್ಯ ಅನ್‌ಲೈನ್ ಮೂಲಕ ವರದಿ ಮಾಡಬೇಕು. ಈ ವ್ಯವಸ್ಥೆಯಿಂದ ಇನ್ಮುಂದೆ ಈ ಹಿಂದಿನಂತೆ ಕಚೇರಿಯಲ್ಲಿ ಕಡತ ನಿರ್ವಹಣೆ ಮಾಡುವ ಅಗತ್ಯ ಇರುವುದಿಲ್ಲ.
ಆದರೆ, ಟ್ಯಾಬ್‌ಗೆ ಜಿಪಿಎಸ್ ಅಳವಡಿಸುವುದರಿಂದ ಆರೋಗ್ಯ ಸಹಾಯಕಿಯರ ಚಲನವಲನದ ಮೇಲೆ ಸಂಪೂರ್ಣ ನಿಗಾ ವಹಿಸಲು ಸಾಧ್ಯವಾಗುತ್ತದೆ. ತಮ್ಮ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸದ ಸಹಾಯಕಿಯರಿಗೆ ಇನ್ಮುಂದೆ ಸಂಕಷ್ಟ ಎದುರಾಗಲಿದೆ. ಪ್ರತಿಯೊಂದು ಕಾರ್ಯಕ್ರಮದ ಛಾಯಾಚಿತ್ರಗಳನ್ನು ತಕ್ಷಣ ಅಪ್‌ಲೋಡ್ ಮಾಡಬೇಕಾಗುತ್ತದೆ.

ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಿಯಂತ್ರಣ ಘಟಕ ಕಾರ್ಯನಿರ್ವಹಿಸುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿಯೋಜಿತ ಒಬ್ಬರು ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರ ಪ್ರತಿನಿತ್ಯ ಆರೋಗ್ಯ ಸಹಾಯಕಿಯರ ಕಾರ್ಯವೈಖರಿ ಬಗ್ಗೆ ನಿಗಾ ವಹಿಸುತ್ತಾರೆ.

ಆರೋಗ್ಯ ಮಹಿಳಾ ಸಹಾಯಕಿಯರಿಗೆ ಟ್ಯಾಬ್ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ಅನ್‌ಲೈನ್‌ನಲ್ಲಿ ಅಪ್ ಲೋಡ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಟ್ಯಾಬ್ ನಿರ್ವಹಣೆ ಬಗ್ಗೆ ಗೊಂದಲ ಇರುವವರಿಗೆ ತಿಳಿಸಿಕೊಡುವ ಕಾರ್ಯ ನಡೆಯುತ್ತಿದೆ. ಜನವರಿ 1ರಿಂದ ಅನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಲಿದೆ. ಆರೋಗ್ಯ ಸಹಾಯಕಿಯರು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆಂಬ ಕುತೂಹಲ ಮೂಡಿದೆ.