ಒಬ್ಬ ಮೋದಿಗೇ ಹೆದರಿದ್ದಾರೆ, ಇನ್ನೊಬ್ಬ ಯಾಕೆ?

ಮಂಗಳೂರು: ಒಬ್ಬ ಮೋದಿ ರಾಜಕೀಯಕ್ಕೆ ಬಂದೇ ವಿರೋಧಿಗಳ ಸ್ಥಿತಿ ಹೀಗಾಗಿದೆ, ಇನ್ನು ನಾನೂ ಬಂದರೆ ಏನಾಗಬೇಡ… ಇದು ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಹೇಳಿಕೆ.

ದೇವಸ್ಥಾನಗಳಿಗೆ ಭೇಟಿ ನೀಡಲು ಮಂಗಳೂರಿಗೆ ಮಂಗಳವಾರ ಆಗಮಿಸಿದ ಅವರು, ನಾನು ರಾಜಕೀಯಕ್ಕೆ ಬರುವುದಿಲ್ಲ, ನಮ್ಮ ಪರಿವಾರದಿಂದ ನರೇಂದ್ರ ಭಾಯ್ ಒಬ್ಬರೇ ಸಾಕು, ಅವರಿಗೇ ಕೆಲವರು ಅಷ್ಟೊಂದು ಹೆದರುತ್ತಾರೆ, ಇನ್ನು ನಾನು ಯಾಕೆ? ನಾನು ಆ ಬಗ್ಗೆ ಯೋಚಿಸಿಲ್ಲ, ಅದು ಸರಿಯಾಗುವುದೂ ಇಲ್ಲ ಎಂದು ಸುದ್ದಿಗಾರರಿಗೆ ಹೇಳಿದರು.

ರಾಷ್ಟ್ರಮಟ್ಟದಲ್ಲಿ ಕೆಲವು ನಾಯಕರು ರಾಜಕೀಯ ಘಟಬಂಧನ್ ರಚಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಘಟಬಂಧನ್ ಹಿಂದೆಯೂ ಎಷ್ಟೋ ಆಗಿದೆ ಹೋಗಿದೆ, ಇದರಿಂದ ಏನೂ ಬದಲಾಗದು. ಆದರೆ ವಾಜಪೇಯಿಯವರಿದ್ದಾಗ ಎನ್‌ಡಿಎ ರಚನೆಯಾಗಿದೆ, ಈಗಲೂ ಇದೆ, ಸದೃಢವಾಗಿದೆ ಎಂದು ಹೇಳಿದರು.
ಅವರ ಜತೆ ತೆಲಂಗಾಣ ತೇಲಿ ಸಮಾಜದ ಕವಿನ್ ಕೊರಲ್ಪೆ ಇದ್ದರು. ವಿಮಾನ ನಿಲ್ದಾಣದಲ್ಲಿ ದ.ಕ ಜಿಲ್ಲಾ ಗಾಣಿಗರ ಸಂಘದ ವತಿಯಿಂದ ಹಾರ್ದಿಕವಾಗಿ ಸ್ವಾಗತಿಸಲಾಯಿತು. ಅಧ್ಯಕ್ಷ ತಾರಾನಾಥ ಸುವರ್ಣ, ಉಪಾಧ್ಯಕ್ಷ ಭಾಸ್ಕರ ಎಡಪದವು, ಅಖಿಲ ಕರ್ನಾಟಕ ಗಾಣಿಗರ ಸಂಘದ ನಿರ್ದೇಶಕ ಮಹೇಶ್ ತುಪ್ಪೆಕಲ್ಲು, ಯುವ ಗಾಣಿಗರ ಸಂಘದ ಅಧ್ಯಕ್ಷ ತಿಲಕ್ ತುಪ್ಪೆಕಲ್ಲು, ಮಹಿಳಾ ಸಂಘದ ಅಧ್ಯಕ್ಷೆ ಸಂಧ್ಯಾ ವೆಂಕಟೇಶ್, ಬಂಟ್ವಾಳ ಗಾಣಿಗರ ಸಂಘದ ಅಧ್ಯಕ್ಷ ರಘು ಸಫಲಿಗ, ಮುಖಂಡರಾದ ಹರೀಶ್‌ಕುಮಾರ್ ಕುತ್ತಾರ್, ಸಂದೀಪ್ ಮೆಂಡನ್, ಮಿಥುನ್ ಸುವರ್ಣ ಹಾಗೂ ಸವಿತಾ ರೋಹಿತ್‌ಕಾಜಿಲ,ಭರತ್‌ಕುಮಾರ್,ಶೋಭಾ ಅತ್ತಾವರ್, ಎ.ಎಸ್.ವೆಂಕಟೇಶ್,ದೇವಿಪ್ರಸಾದ್ ಎಂ, ದೇವರಾಜ್ ಎಡಪದವು ಮತ್ತಿತರರಿದ್ದರು.

ದೀದಿಗೆ ಬೆಂಬಲ ಕೊಟ್ಟಿಲ್ಲ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನಾನೆಂದೂ ಬೆಂಬಲ ಕೊಟ್ಟಿಲ್ಲ, ಕೊಡುವುದೂ ಇಲ್ಲ. ನರೇಂದ್ರ ಭಾಯರ್‌ರನ್ನು ಬಿಡುವ ಪ್ರಶ್ನೆಯೇ ಬರುವುದಿಲ್ಲ, ಯಾರೋ ಮಾಧ್ಯಮದವರು ಹಿಂದೆ ನನ್ನ ಹೇಳಿಕೆ ತಿರುಚಿ ಬರೆದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರಹ್ಲಾದ್ ಮೋದಿ ಸ್ಪಷ್ಟನೆ ನೀಡಿದರು. ನಾನು ರೇಷನ್ ಅಂಗಡಿ ಡೀಲರುಗಳ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ, ಆ ನೆಲೆಯಲ್ಲಿ ಕೆಲವೊಂದು ವಿಚಾರ ಮಾತನಾಡುತ್ತೇನೆ, ಕೇಂದ್ರ ಸರ್ಕಾರದ ವಿರುದ್ಧವೂ ಮಾತನಾಡಿರುವುದು ಹೌದು, ಹಾಗೆಂದು ಎನ್‌ಡಿಎ ಸರ್ಕಾರದ ವಿರೋಧಿಯಲ್ಲ ಎಂದರು.

ಮೋದಿ ಆಯ್ಕೆ ತಪ್ಪಿಸಲಾಗದು: ಪ್ರಿಯಾಂಕಾ ಗಾಂಧಿ ಬರಲಿ, ಪ್ರಿಯದರ್ಶಿನಿಯೇ ಬರಲಿ, 2019ರಲ್ಲೂ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಜನರ ಮನಸ್ಸಿನಲ್ಲಿದ್ದರೆ ಅದನ್ನು ಯಾರೂ ತಪ್ಪಿಸಲಾಗದು, ಜನರ ಆಶೀರ್ವಾದ ಅವರ ಮೇಲಿದೆ ಎಂದು ಪ್ರಹ್ಲಾದ್ ಮೋದಿ ಹೇಳಿದರು. ಕಳೆದ ಐದು ವರ್ಷಗಳಲ್ಲಿ ಮೋದಿಜೀ ಏನು ಮಾಡಿಲ್ಲ ಕೇಳಿ? ಅವರ ಕಾರ್ಯಗಳನ್ನು ಜನರು ಸ್ವೀಕರಿಸಿದ್ದಾರೆ. ಕಾಂಗ್ರೆಸಿಗರ ಮನೆಗೆ ಏನೂ ಹೋಗಿಲ್ಲ ಎಂಬ ಕಾರಣಕ್ಕಾಗಿ ಅವರು ಪ್ರತಿಭಟನೆ ಮಾಡುತ್ತಿದ್ದಾರೆ, ಚಿಕ್ಕ ವಿಚಾರಗಳನ್ನೇ ದೊಡ್ಡದು ಮಾಡುತ್ತಿದ್ದಾರೆ. ನಾನು ನನ್ನ ಸಂಘಟನೆಗಾಗಿ ದೇಶ ಸುತ್ತುತ್ತೇನೆ, ನನಗೆ ಜನರ ಮನಸ್ಸು ಗೊತ್ತಾಗುತ್ತದೆ, ಈ ಬಾರಿಯೂ ಎನ್‌ಡಿಎ 300ಕ್ಕೂ ಹೆಚ್ಚು ಸೀಟು ಗಳಿಸುವುದು ನಿಶ್ಚಿತ ಎಂದರು.