ಮದುವೆಯಾದರೂ ಇಲ್ಲ ಶಾದಿ ಭಾಗ್ಯ!

ಕಾರವಾರ: ಶಾದಿ ಭಾಗ್ಯಕ್ಕಾಗಿ ಮಂಜೂರಾಗಿ ಖರ್ಚಾಗದೇ ಉಳಿದ ಹಣವನ್ನು ರೈತರ ಸಾಲ ಮನ್ನಾಕ್ಕಾಗಿ ಸರ್ಕಾರವು ಕೆಲ ಜಿಲ್ಲೆಗಳಿಂದ ವಾಪಸ್ ಪಡೆದಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಯೋಜನೆಯ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಿದ ಸಾಕಷ್ಟು ಫಲಾನುಭವಿಗಳಿಗೆ ಇನ್ನೂ ಸವಲತ್ತು ದೊರಕಿಲ್ಲ.

ಕಳೆದ ವರ್ಷವೇ ಅರ್ಜಿ ಸಲ್ಲಿಸಿದವರು ಈಗಾಗಲೇ ಮದುವೆಯಾಗಿದ್ದಾರೆ. ಆದರೆ, ಸರ್ಕಾರದ ಸೌಲಭ್ಯ ಮಾತ್ರ ಇನ್ನೂ ಬಂದಿಲ್ಲ. ಇನ್ನೂ ಹಲವರು ಮದುವೆಯಾದ ನಂತರ ಅರ್ಜಿ ಸಲ್ಲಿಸಿದವರೂ ಇದ್ದಾರೆ.

2013-14 ರಲ್ಲಿ ಯೋಜನೆ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 2514 ಅರ್ಜಿಗಳು ಸ್ವೀಕೃತವಾಗಿವೆ. 1784 ಅರ್ಜಿಗಳಿಗೆ ಶಾದಿ ಭಾಗ್ಯ ಯೋಜನೆಯ ಸೌಲಭ್ಯ ಒದಗಿಸಲಾಗಿದೆ. ಕಳೆದ ವರ್ಷ ಅರ್ಜಿ ಸಲ್ಲಿಸಿದವರೂ ಸೇರಿ 730 ಜನರಿಗೆ ಇನ್ನೂ ಸೌಲಭ್ಯ ಕೊಡುವುದು ಬಾಕಿ ಇದೆ. 93 ಅರ್ಜಿಗಳನ್ನು ಇದುವರೆಗೆ ತಿರಸ್ಕರಿಸಲಾಗಿದೆ.

ಯಾವ ತಾಲೂಕಿನಲ್ಲೆಷ್ಟು ?: ಇದುವರೆಗೆ ಕಾರವಾರದಿಂದ 132 ಅರ್ಜಿಗಳು ಬಂದಿದ್ದು, 115 ಅರ್ಜಿಗಳು ಮಂಜೂರಾಗಿವೆ. ಅಂಕೋಲಾದಲ್ಲಿ 62 ರಲ್ಲಿ 45, ಕುಮಟಾ-239 ರಲ್ಲಿ 175, ಹೊನ್ನಾವರ- 434 ರಲ್ಲಿ 335, ಭಟ್ಕಳ- 221 ರಲ್ಲಿ 140, ಶಿರಸಿ- 394 ರಲ್ಲಿ 247, ಸಿದ್ದಾಪುರ- 108 ರಲ್ಲಿ 74, ಯಲ್ಲಾಪುರ- 145 ರಲ್ಲಿ 101, ಮುಂಡಗೋಡ- 417 ರಲ್ಲಿ 286, ಹಳಿಯಾಳ- 430 ರಲ್ಲಿ 245, ಜೊಯಿಡಾ- 25 ರಲ್ಲಿ 23 ಅರ್ಜಿಗಳು ಮಂಜೂರಾಗಿವೆ.

ಮುಸ್ಲಿಂ ಸಮುದಾಯಕ್ಕೆ ಹೆಚ್ಚು: ಮತೀಯ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿದ ಸಮುದಾಯಗಳಲ್ಲಿ ಜಿಲ್ಲೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಜನಸಂಖ್ಯೆ ಹೆಚ್ಚಿದೆ. ಜೈನ ಸಮುದಾಯದವರು ಸ್ವಲ್ಪ ಜನರಿದ್ದಾರೆ. ಮುಂಡಗೋಡ ಟಿಬೆಟಿಯನ್ ಕಾಲನಿಯಲ್ಲಿ ಬೌದ್ಧ ಧರ್ಮದ ಜನರಿದ್ದರೂ ಅವರು ಇಲಾಖೆಯ ಸೌಲಭ್ಯ ಪಡೆದುಕೊಳ್ಳುತ್ತಿಲ್ಲ. ಜಿಲ್ಲೆಯ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಮುಸ್ಲಿಂ ಸಮುದಾಯದವರಿಗೆ ಇದುವರೆಗೆ 1372, ಕ್ರಿಶ್ಚಿಯನ್ ಸಮುದಾಯದವರಿಗೆ 397, ಜೈನ ಸಮುದಾಯವರಿಗೆ 17 ಶಾದಿ ಭಾಗ್ಯ ಸೌಲಭ್ಯ ಒದಗಿಸಲಾಗಿದೆ.

ಸರ್ಕಾರದಿಂದ ಮಂಜೂರಾದ ಹಣಕ್ಕೆ ಅನುಗುಣವಾಗಿ ಶಾದಿ ಭಾಗ್ಯ ಫಲಾನುಭವಿಗಳಿಗೆ ಆದ್ಯತೆಯ ಮೇರೆಗೆ ಸೌಲಭ್ಯ ವಿತರಿಸಲಾಗುತ್ತಿದೆ. ಆಸಕ್ತರು ಇನ್ನೂ ಇಲಾಖೆಯನ್ನು ಸಂರ್ಪಸಿ ಅರ್ಜಿ ಸಲ್ಲಿಸಬಹುದು. -ಗುಡ್ಡಪ್ಪ ಜಿಗಳಿಕೊಪ್ಪ, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ

2 ಮೌಲಾನಾ ಆಜಾದ್ ಶಾಲೆ ಸ್ಥಳಾಂತರ: ಶಾದಿ ಭಾಗ್ಯ ಬೇಕು ಎಂದು ಅರ್ಜಿ ಸಲ್ಲಿಸಿದರೂ ಇಲಾಖೆಯಲ್ಲಿ ಕೊಡಲು ಹಣವಿಲ್ಲ. ಆದರೆ, ಶಾಲೆ ಕಲಿಸುತ್ತೇನೆ ಬನ್ನಿ ಎಂದರೂ ಅದಕ್ಕೆ ಜನ ಬರುತ್ತಿಲ್ಲ. ಇದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪರಿಸ್ಥಿತಿಯಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ನಾಲ್ಕು ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸುವಂತೆ ಸರ್ಕಾರ ಸೂಚಿಸಿತ್ತು. ಕಾರವಾರ ಹಾಗೂ ಭಟ್ಕಳದಲ್ಲಿ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಪಾಲಕರು ಒಪ್ಪದ ಹಿನ್ನೆಲೆಯಲ್ಲಿ ಶಾಲೆ ಹಾವೇರಿ ಜಿಲ್ಲೆಗೆ ಸ್ಥಳಾಂತರಗೊಂಡಿದೆ.2017ರಲ್ಲಿ ಮುಂಡಗೋಡಿನಲ್ಲಿ ಮಾತ್ರ 54 ವಿದ್ಯಾರ್ಥಿಗಳನ್ನು ಸೇರಿಸಿ ಆಜಾದ್ ಶಾಲೆ ಪ್ರಾರಂಭಿಸಲಾಯಿತು. 2018ರಲ್ಲಿ ಹಳಿಯಾಳದಲ್ಲಿ 25 ವಿದ್ಯಾರ್ಥಿಗಳೊಂದಿಗೆ ಶಾಲೆ ಪ್ರಾರಂಭಿಸಲಾಗಿದೆ. 2018ರಲ್ಲಿ ಕುಮಟಾ ತಾಲೂಕಿಗೆ ಒಂದು ಶಾಲೆ ಮಂಜೂರಾಗಿದ್ದು, ಅದನ್ನು ಬೆಟ್ಕುಳಿಯಲ್ಲಿ 40 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸಲಾಗಿದೆ. 6 ರಿಂದ 10ನೇ ತರಗತಿಯವರೆಗೆ ಇರುವ ಆಂಗ್ಲ ಮಾಧ್ಯಮದ ಈ ಶಾಲೆಯಲ್ಲಿ ಶೇ. 75ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಶೇ. 25ರಷ್ಟು ಇತರ ಸಮುದಾಯದ ವಿದ್ಯಾರ್ಥಿಗಳನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಉಚಿತ ಗುಣಮಟ್ಟದ ಶಿಕ್ಷಣದ ಜತೆಗೆ ಸಮವಸ್ತ್ರ, ಶೂ, ಪಠ್ಯ, ಪುಸ್ತಕ ಎಲ್ಲವನ್ನೂ ಉಚಿತವಾಗಿ ನೀಡಲಾಗುವುದು ಎನ್ನುತ್ತಾರೆ ಇಲಾಖೆ ಅಧಿಕಾರಿ ಗುಡ್ಡಪ್ಪ ಜಿಗಳಿಕೊಪ್ಪ.