More

  ಅಕ್ಷರ ಜಾತ್ರೆಗೆ ಅನುದಾನದ ಬರ, ಬಿಡಿಗಾಸು ಬಿಚ್ಚದ ಸರ್ಕಾರ: ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ಧತೆಗೆ ಅಡ್ಡಿ ಆತಂಕ 

  ಜ್ಞಾನಗಂಗೆ ಪರಿಸರದಲ್ಲಿ ಫೆ. 5ರಿಂದ ನಡೆಯಲಿರುವ ಮೂರು ದಿನಗಳ ಅಕ್ಷರ ಜಾತ್ರೆಗೆ ಅನುದಾನದ ಬರ ಉಂಟಾಗುವ ಆತಂಕ ಎದುರಾಗಿದೆ. ಸಮ್ಮೇಳನಕ್ಕೆ ಎರಡು ವಾರ ಬಾಕಿಯಿದ್ದು, ಸರ್ಕಾರ ಬಿಡಿಗಾಸು ನೀಡಿಲ್ಲ. ಸರ್ಕಾರದ ಈ ಧೋರಣೆಗೆ ಸಾಹಿತ್ಯ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

  ಈ ಮಧ್ಯೆ ಸಮ್ಮೇಳನಕ್ಕೆ ಅನುದಾನ ಒದಗಿಸಲು ಸಿಎಂ ಯಡಿಯೂರಪ್ಪ ಹಣಕಾಸು ಇಲಾಖೆಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಸಮ್ಮೇಳನಕ್ಕೆ 14 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು, ನೆರವು ಕೋರಿ ಜಿಲ್ಲಾಧಿಕಾರಿ ಬಿ. ಶರತ್ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ.

  ಅನುದಾನ ಬರದಿದ್ದರೂ ವೇದಿಕೆ ನಿರ್ಮಾಣ ಸೇರಿ ವಿವಿಧ ಸಿದ್ಧತೆಗಳು ಭರದಿಂದ ಸಾಗಿದೆ. ಲಭ್ಯ ಮಾಹಿತಿ ಪ್ರಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ ಐದು ಲಕ್ಷ ರೂ. ಒದಗಿಸಿದೆ. ಆದರೂ ಸದ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಕೈಯಲ್ಲಿ  ಕಾಸಿಲ್ಲದಿರುವುದು ಸಿದ್ಧತೆಗೆ ಹಿನ್ನಡೆಯಾಗಿದೆ.

  ಕನ್ನಡ ಸಾಹಿತ್ಯ ಲೋಕಕ್ಕೆ ಮೊದಲ ಗ್ರಂಥ ಕವಿರಾಜ ಮಾರ್ಗ ನೀಡಿದ ಕಲಬುರಗಿ ನೆಲದಲ್ಲಿ 33 ವರ್ಷದ ನಂತರ ನಡೆಯುವ ನುಡಿ ಜಾತ್ರೆಗೆ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ಸಿದ್ಧತೆ ನಡೆದಿದೆ. ಇದಕ್ಕೆ ಸೂಕ್ತ ಸಮಯದಲ್ಲಿ ಹಣ ಕೊಡದಿದ್ದರೆ ತೊಂದರೆ ಆಗುತ್ತದೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು. ಈ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಹೊತ್ತಿರುವ ಡಿಸಿಎಂ ಗೋವಿಂದ ಕಾರಜೋಳ ಮತ್ತು ಶಾಸಕರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ.

  ಶಾಸಕರಿಂದಲೂ ದೇಣಿಗೆ: ಸಮ್ಮೇಳನಕ್ಕೆ ಒಂದು ತಿಂಗಳ ಗೌರವಧನ ನೀಡುವುದಾಗಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಿ.ಜಿ. ಪಾಟೀಲ್, ಬಸವರಾಜ ಮತ್ತಿಮೂಡ, ತಿಪ್ಪಣ್ಣಪ್ಪ ಕಮಕನೂರ, ಎಂ.ವೈ. ಪಾಟೀಲ್, ಡಾ. ಅವಿನಾಶ ಜಾಧವ್, ಕನೀಜ್ ಫಾತಿಮಾ ಘೊಷಿಸಿದ್ದಾರೆ. ಸಮ್ಮೇಳನದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುವವರಿಗೆ 4000 ಟಿ-ಶರ್ಟ್ ಕೊಡಲು ಎಸ್.ಬಿ. ಪಾಟೀಲ್ ಗ್ರೂಪ್ ಅಧ್ಯಕ್ಷರಾದ ಎಂಎಲ್ಸಿ ಬಿ.ಜಿ. ಪಾಟೀಲ್ ಮುಂದಾಗಿದ್ದಾರೆ. ಸರ್ಕಾರ ಆದಷ್ಟು ಬೇಗ ಸೂಕ್ತ ಅನುದಾನ ಒದಗಿಸಲಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಮೊದಲ ಚೆಕ್ ಕೊಟ್ಟ ಡಿಸಿ

  ಸಮ್ಮೇಳನಕ್ಕೆ ಎಲ್ಲರೂ ಕೈಲಾದಷ್ಟು ನೆರವು ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಡಿದ್ದ ಮನವಿಗೆ ಜಿಲ್ಲಾಧಿಕಾರಿ ಶರತ್ ಮೊದಲಿಗೆ ಸ್ಪಂದಿಸಿ ಕನ್ನಡ ಪ್ರೀತಿ ಮೆರೆದಿದ್ದಾರೆ. ಶರತ್ ಒಂದು ತಿಂಗಳ ಸಂಬಳ 97 ಸಾವಿರ ರೂ.ಗಳ ಚೆಕ್ ಅನ್ನು ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಅವರಿಗೆ ಹಸ್ತಾಂತರಿಸಿದ್ದಾರೆ.

  ಸಮ್ಮೇಳನಕ್ಕೆ 14 ಕೋಟಿ ರೂ. ಖರ್ಚು-ವೆಚ್ಚ ತಗಲುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೇನು ಸರ್ಕಾರ ಹಣ ಬಿಡುಗಡೆ ಮಾಡಲಿದೆ. ಕನ್ನಡ ಸಾಹಿತ್ಯ ಪರಿಷತ್ ಐದು ಲಕ್ಷ ರೂ. ನೀಡಿದೆ. ಇದುವರೆಗೆ 2.87 ಲಕ್ಷ ರೂ. ಬಂದಿದೆ. ನೆರವು ನೀಡುವಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೂ ಕೋರುತ್ತೇನೆ. ಸಮ್ಮೇಳನದ ಸಿದ್ಧತೆ ಸುಸೂತ್ರ ನಡೆದಿದೆ. ಇದಾವುದಕ್ಕೂ ಗೊಂದಲವಿಲ್ಲ.

  | ಬಿ. ಶರತ್ ಕಲಬುರಗಿ ಜಿಲ್ಲಾಧಿಕಾರಿ  

  | ವಾದಿರಾಜ ವ್ಯಾಸಮುದ್ರ ಕಲಬುರಗಿ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts