More

  ದಳ-ಕಮಲ ವಿಲೀನವಲ್ಲ; ವಿಶ್ವಾಸ ಮಾತ್ರ…

  ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಶೀಘ್ರ ಧ್ರ್ರುವೀಕರಣ ನಡೆಯಲಿದೆ ಎಂಬ ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಹೇಳಿಕೆ ಬಿಜೆಪಿಯಲ್ಲಿ ಜೆಡಿಎಸ್ ವಿಲೀನಗೊಳ್ಳುವುದಕ್ಕೆ ವೇದಿಕೆ ಎಂಬ ತಿರುವು ಪಡೆದುಕೊಂಡು ಭಾನುವಾರ ಇಡೀ ದಿನ ಸಂಚಲನ ಸೃಷ್ಟಿಸಿತು. ಆದರೆ ಎರಡೂ ಪಕ್ಷಗಳ ನಡುವಿನ ಸಂಬಂಧ ವಿಶ್ವಾಸಪೂರ್ವಕ ನಡೆಯಷ್ಟೇ ಹೊರತು ವಿಲೀನದ ಮಾತೇ ಇಲ್ಲ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಸ್ಪಷ್ಟನೆ ಗೊಂದಲಗಳಿಗೆ ತೆರೆ ಎಳೆಯಿತು. ಆದರೆ ಈ ವಿಚಾರವಾಗಿ ಎರಡೂ ಪಕ್ಷಗಳ ಪಡಸಾಲೆಯಲ್ಲಿ ಚರ್ಚೆ ಮುಂದುವರಿದಿರುವುದು ಕುತೂಹಲವನ್ನು ಹಾಗೆಯೇ ಉಳಿಸಿದೆ.

  ಲಿಂಬಾವಳಿ ಹೇಳಿಕೆಯಿಂದಾಗಿ ಪಕ್ಷದೊಳಗೆ ಏಳಬಹುದಾದ ಗೊಂದಲ ಮತ್ತು ಕಾಂಗ್ರೆಸ್​ಗೆ ವ್ಯಂಗ್ಯಾಸ್ತ್ರ ಸಿಗುವುದನ್ನು ತಪ್ಪಿಸುವುದಕ್ಕಾಗಿ ಇಬ್ಬರೂ ನಾಯಕರು ತಕ್ಷಣದ ಪ್ರತಿಕ್ರಿಯೆ ನೀಡಿ ಚರ್ಚೆಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ಈ ಬೆಳವಣಿಗೆ ನಡುವೆಯೇ ಜೆಡಿಎಸ್ ಶಾಸಕರು ಪಕ್ಷದ ನಾಯಕರ ನಡೆಯ ವಿರುದ್ಧ ಬಹಿರಂಗವಾಗಿ ದನಿ ಎತ್ತುವ ಮೂಲಕ ಪರ್ಯಾಯ ನಡೆಯ ಸುಳಿವು ನೀಡಿದ್ದಾರೆ. ಬಿಜೆಪಿ ಜತೆ ಹೋಗಲು ಸಿದ್ಧರಿಲ್ಲದ ಶಾಸಕರು ತಮ್ಮ ನಡೆ ಬದಲಿಸಬಹುದೆಂಬ ಸೂಚ್ಯ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ.

  ಎಚ್.ಡಿ.ಕುಮಾರಸ್ವಾಮಿ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದಿಯಾಗಿ, ಕೇಂದ್ರ ಸಚಿವರು, ಸಂಸದರೆಲ್ಲ ಶುಭಾಶಯ ಕೋರಿದ್ದರು. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಹೊಸ ಹೊಳಪು ಮೂಡಿಸಿತ್ತು. ಎಚ್​ಡಿಕೆ ಕೇಂದ್ರೀಕೃತವಾಗಿ ಚರ್ಚೆಗಳಿಗೂ ಕಾರಣವಾಯಿತು. ಈ ವಿಷಯ ಇನ್ನೂ ಬಿಸಿಯಾಗಿರುವಾಗಲೇ ಲಿಂಬಾವಳಿ ನೀಡಿದ ಹೇಳಿಕೆ ಮತ್ತೊಂದು ರೂಪಕೊಟ್ಟಿತ್ತು. ಎಚ್ಡಿಕೆ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಜೆಡಿಎಸ್ ಅನ್ನು ಬಿಜೆಪಿ ಜತೆ ವಿಲೀನಗೊಳಿಸುತ್ತಾರೆಂಬ ಮಾತು ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಈ ವಾದಗಳಿಗೆ ಪೂರಕವಾಗಿ ಇತ್ತೀಚಿನ ಅವರ ಬಿಜೆಪಿಪರ ನಿಲುವು, ಹೇಳಿಕೆಗಳೂ ಅವರದೇ ಪಕ್ಷದ ಶಾಸಕರನ್ನು ಕಂಗಾಲಾಗಿಸಿತ್ತು. 2018ರ ವಿಧಾನಸಭೆ ಚುನಾವಣೆ ಬಳಿಕ ಎಚ್​ಡಿಕೆ ಬಿಜೆಪಿ ಜತೆ ಕೈ ಜೋಡಿಸಿದ್ದಲ್ಲಿ ಸರ್ಕಾರದ ಪಾಲುದಾರನಾಗಿರಬಹುದಿತ್ತು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಎರಡೂ ಪಕ್ಷಗಳ ನಾಯಕರ ಸ್ಪಷ್ಟನೆ ಹೊರತಾಗಿಯೂ ಬಿಜೆಪಿ- ಜೆಡಿಎಸ್ ನಡುವೆ ರಾಜಕೀಯ ಸಂಬಂಧ ಬೆಸೆದಿರುವುದನ್ನು ಅವರು ಒಪ್ಪಿಕೊಂಡಿರುವುದು ಜೆಡಿಎಸ್ ಕಾಂಗ್ರೆಸ್​ನಿಂದ ದೂರ ಸರಿದಿರುವ ಸಂದೇಶವನ್ನು ನಾಡಿಗೆ ಕಳಿಸಿದೆ.

  ಹರಿಬಿಟ್ಟಿದ್ಯಾರು?

  ಅಸಲಿಗೆ ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಲಿದೆ ಎಂಬ ಸುದ್ದಿ ಹರಿಬಿಟ್ಟವರ್ಯಾರೆಂಬ ಬಗ್ಗೆ ಎರಡೂ ಪಕ್ಷದ ನಾಯಕರು ಶೋಧ ಆರಂಭಿಸಿದ್ದಾರೆ. ಅಂತಹ ಯಾವುದೇ ಬೆಳವಣಿಗೆ ನಡೆಯದಿದ್ದರೂ ಏಕೆ ಇಷ್ಟೊಂದು ಚರ್ಚೆ? ಗೊಂದಲ ಎಂಬ ಅಭಿಪ್ರಾಯ ನಾಯಕರನ್ನು ಕಾಡುತ್ತಿದೆ. ರಾಜಕೀಯ ಕಾರಣಕ್ಕಾಗಿ ಜೆಡಿಎಸ್ ವಿಲೀನ ಮಾಡಿಕೊಳ್ಳುವುದಕ್ಕೆ ಬಿಜೆಪಿ ಸಿದ್ಧವಿಲ್ಲ, ಬಿಜೆಪಿಯನ್ನು ತಬ್ಬಿಕೊಳ್ಳಲು ಜೆಡಿಎಸ್ ಕೂಡ ಸಿದ್ಧವಿಲ್ಲ.

  ಜೆಡಿಎಸ್​ನ ಯಾವುದೇ ಶಾಸಕರು ಬಿಜೆಪಿಗೆ ಬರುವುದಾಗಲಿ ಅಥವಾ ಆ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಗೊಳಿಸುತ್ತಾರೆಂಬ ಗೊಂದಲಕಾರಿ ವರದಿಗಳಾಗಲೀ ಎಲ್ಲವೂ ಶುದ್ಧ ಸುಳ್ಳು.

  | ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

  ಸ್ವಾಭಿಮಾನಿ ಕನ್ನಡಿಗರ ಪಕ್ಷ ಜೆಡಿಎಸ್ ಎಂದಿಗೂ ವಿಲೀನದ ಆಲೋಚನೆ ಮಾಡುವುದಿಲ್ಲ. ಜನರ ಗಟ್ಟಿಧ್ವನಿಯಾದ ಪಕ್ಷ ಅಂತಹ ಅವಿವೇಕತನ ಪ್ರದರ್ಶಿಸುವುದಿಲ್ಲ.

  | ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

  ಜೆಡಿಎಸ್ ಲೆಕ್ಕಾಚಾರ

  1. ಪೂರ್ಣ ಬಹುಮತದ ಸರ್ಕಾರ ಕಷ್ಟ. ಹೀಗಾಗಿ ಬಿಜೆಪಿ ಜತೆ ಮಿಲಾಪಿ

  2. ರಾಜಕೀಯ ಭವಿಷ್ಯಕ್ಕಾಗಿ ಈಗಲೇ ಹೊಂದಾಣಿಕೆ ಮಾಡಿಕೊಂಡರೆ ಅನುಕೂಲ

  3. ಸರ್ಕಾರದೊಂದಿಗಿದ್ದರೆ, ಸರ್ಕಾರದ ನಿಲುವು ಬೆಂಬಲಿಸಿ ದರೆ ತಮ್ಮ ಕ್ಷೇತ್ರದ ಕೆಲಸ ಸಲೀಸು

  4. ಪಕ್ಷದ ಶಾಸಕರು ಬಿಜೆಪಿ ಅಥವಾ ಕಾಂಗ್ರೆಸ್​ಗೆ ಸೇರ್ಪಡೆ ಆಗುವುದನ್ನು ತಡೆಯುವುದು

  5. ರಾಷ್ಟ್ರೀಯ ಪಕ್ಷದ ಜತೆಗೆ ಗುರುತಿಸಿಕೊಂಡರೆ ರಾಷ್ಟ್ರ ರಾಜಕಾರಣದಲ್ಲೂ ಅನುಕೂಲ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts