More

    ಸೊರಗಿ ಹೋಗಿದೆ ಉದ್ಯಾನವನ

    ಭಾಗ್ಯವಾನ್ ಸನಿಲ್ ಮೂಲ್ಕಿ 
    ಒತ್ತಡದಿಂದ ಮುಕ್ತವಾಗಲು ಹಾಗೂ ಉತ್ತಮ ಪ್ರಕೃತಿ ಕಣ್ತುಂಬಿಕೊಳ್ಳಲು ಮೂಲ್ಕಿ ನಗರ ಪಂಚಾಯಿತಿ ಇಲ್ಲಿನ ಕಾರ್ನಾಡು ಗ್ರಾಮದ ಕೆ.ಎಸ್.ರಾವ್ ನಗರದ ಲಿಂಗಪಯ್ಯ ಕಾಡಿನಲ್ಲಿ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್‌ರಾಮ್ ಹೆಸರಿನಲ್ಲಿ ನಿರ್ಮಿಸಿರುವ ಉದ್ಯಾನವನ ಸೊರಗಿ ಹೋಗಿದೆ. ಈ ಪಾರ್ಕ್ ಪುಂಡು ಪೋಕರಿಗಳ, ಅಮಲು ವ್ಯಸನಿಗಳ ಅಡ್ಡೆಯಾಗಿದ್ದು ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
    ಆರು ವರ್ಷಗಳ ಹಿಂದೆ ಪಂಚಾಯಿತಿಯಲ್ಲಿ ನಿರ್ಣಯ ಮಾಡಿ ಲಕ್ಷಾಂತರ ರೂ. ವಿನಿಯೋಗಿಸಿ ನಿರ್ಮಿಸಲಾದ ಉದ್ಯಾನವನದತ್ತ ಮತ್ತೆ ಪಂಚಾಯಿತಿ ತಲೆ ಹಾಕಿಲ್ಲ. ಉದ್ಘಾಟನೆಗಷ್ಟೇ ಸೀಮಿತವಾದ ಕಾರ್ಯಕ್ರಮದ ಬಳಿಕ ಗಿಡಗಳು ನೀರಿಲ್ಲದೆ ಸೊರಗಿ ಹೋಗಿದ್ದು ಬಹುತೇಕ ಗಿಡಗಳು ಸತ್ತಿವೆ. ಗೇಟುಗಳು ಮುರಿದು ಹೋಗಿವೆ. ಒಂದೆರಡು ಸಿಮೆಂಟ್ ಬೆಂಚ್ ಮತ್ತು ಜಾರು ಬಂಡಿ ಬಿಟ್ಟರೆ ನೀರಿನ ಟ್ಯಾಂಕಿಂದ ಬೀಳುತ್ತಿರುವ ನೀರಿನಿಂದ ಬದುಕಿಕೊಂಡ ಕ್ರೋಟನ್ ಗಿಡಗಳು ಮಾತ್ರ ಕಾಣಸಿಗುತ್ತಿವೆ.

    ನೀರಿನ ಟ್ಯಾಂಕಿಗೂ ಅಪಾಯ: ಉದ್ಯಾನವನದ ಅಂಚಿನಲ್ಲಿ ಲಿಂಗಪ್ಪಯ್ಯ ಕಾಡಿನ ವಾಸಿಗಳಿಗೆ ಕುಡಿಯುವ ನೀರು ಪೂರೈಸುವ ಟ್ಯಾಂಕ್ ಇದೆ. ಕೆಲವು ಕಿಡಿಗೇಡಿಗಳು ಈ ಟ್ಯಾಂಕ್ ಮೇಲೆ ಹತ್ತಿ ಕೂರುವುದು, ಕಸಕಡ್ಡಿ ಹಾಕುವುದು, ಅಲ್ಲೇ ಅಮಲು ವ್ಯಸನ ಪಾರ್ಟಿ ಮಾಡುವುದು ಮುಂತಾದ ಕೃತ್ಯಗಳು ನಡೆದರೂ ನಗರ ಪಂಚಾಯಿತಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಪಂಚಾಯಿತಿಗೆ ತಿಳಿಸಿದ್ದರೂ ಸ್ಪಂದನೆ ತೋರಿಸುತ್ತಿಲ್ಲ ಎನ್ನುತ್ತಾರೆ ಜನ. ಇಲ್ಲಿ ನಡೆಯುವ ಕಾನೂನುಬಾಹಿರ ಕೃತ್ಯಗಳ ನಿಯಂತ್ರಣಕ್ಕೆ ಪೊಲೀಸರೂ ವಿಫಲರಾಗಿರುವುದು ವಿಪರ್ಯಾಸ ಎಂದು ಸ್ಥಳೀಯರು ತಿಳಿಸಿದ್ದಾರೆ. ಉದ್ಯಾನವನ ಕಿಡಿಗೇಡಿಗಳಿಂದ ಮುಕ್ತವಾಗಿ, ಸೂಕ್ತ ನಿರ್ವಹಣೆಯೊಂದಿಗೆ ಅಭಿವೃದ್ಧಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

     ಸಾಯಂಕಾಲವಾಗುತ್ತಲೇ ಉದ್ಯಾನವನ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತದೆ. ಕೆಲವರಂತೂ ಸಂಪ್ ಮೇಲೆ ಹತ್ತಿ ಕುಳಿತಿರುತ್ತಾರೆ. ಏನಾದರೂ ವಿಷಯುಕ್ತ ವಸ್ತು ಕುಡಿಯುವ ನೀರಿಗೆ ಬಿದ್ದರೆ ಮುಂದೆ ಆಗುವ ಅನಾಹುತಕ್ಕೆ ಯಾರು ಹೊಣೆ? ಈ ಬಗ್ಗೆ ಪಂಚಾಯಿತಿ ತಕ್ಷಣ ಕ್ರಮ ಕೈಗೊಳ್ಳಬೇಕು.
    ಅಶೋಕ್ ಪೂಜಾರ್
    ಮಾಜಿ ನಾಮನಿರ್ದೇಶಿತ ಸದಸ್ಯ ಮೂಲ್ಕಿ ನಗರ ಪಂಚಾಯಿತಿ

     ಕೊಳಚೆ ಕಸಗಳ ಬೀಡಾಗಿದ್ದ ಸ್ಥಳವನ್ನು ಉದ್ಯಾನವನವಾಗಿ ಮಾರ್ಪಡಿಸಲು ಬಹಳಷ್ಟು ಹೋರಾಟ ನಡೆಸಿದ್ದೇವೆ ಪ್ರಸಕ್ತ ಉದ್ಯಾನವನ ನಿರ್ವಹಣೆಯೂ ಇಲ್ಲ. ಇಲ್ಲಿ ಪುಂಡು ಪೋಕರಿಗಳು ಸುಖಾಸುಮ್ಮನೆ ಸಮಯ ವ್ಯರ್ಥ ಮಾಡುತ್ತಿರುವುದರಿಂದ ಪಾರ್ಕ್ ಸ್ಥಾಪನೆಯ ಮೂಲ ಉದ್ದೇಶವೇ ಹಾಳಾಗಿದೆ.
    ಭೀಮಾ ಶಂಕರ್ ಆರ್.ಕೆ
    ಸಮಾಜ ಸೇವಕ ಲಿಂಗಪ್ಪಯ್ಯನ ಕಾಡು

    ಕ್ವೋಟ್
    ಉದ್ಯಾನವನದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರಿಗೆ ಪಂಚಾಯಿತಿ ವತಿಯಿಂದ ದೂರು ನೀಡಲಾಗುವುದು. ನೀರಿನ ಸಂಪ್ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ಚಂದ್ರ ಪೂಜಾರಿ
    ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts