ಬೈಲಕುಪ್ಪೆ: ರಾಜ್ಯ ಸೇರಿದಂತೆ ತಾಲೂಕಿನಾದ್ಯಂತ ಕೆರೆ-ಕಟ್ಟೆಗಳು ತುಂಬಿರುವ ಕಾರಣ ಈ ಬಾರಿ ತಾಲೂಕಿನಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಚೆನ್ನಕಲ್ ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಪುರ, ಕುರುಬರ ಹಾಡ್ಯ ಗ್ರಾಮದಲ್ಲಿ ಶನಿವಾರ ಹಾರಂಗಿ ಬಲದಂಡೆ ನಾಲೆಯ ಕುರುಬರ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ವರ್ಷ ರಾಜ್ಯಾದ್ಯಂತ ಉತ್ತಮ ಮಳೆಯಾಗಿರುವ ಕಾರಣ ನದಿಗಳು ಸೇರಿದಂತೆ ತಾಲೂಕಿನಾದ್ಯಂತ ಕೆರೆ-ಕಟ್ಟೆ ತುಂಬಿದ್ದು, ಲೋಡ್ ಶೆಡ್ಡಿಂಗ್ ಅಗತ್ಯವಿಲ್ಲ ಎಂಬುದನ್ನು ಇಂಧನ ಸಚಿವರು ಸ್ಪಷ್ಟಪಡಿಸಿದ್ದಾರೆ.ಹಾಗಾಗಿ ತಾಲೂಕಿನ ಕೆರೆ-ಕಟ್ಟೆಗಳಲ್ಲಿ ನೀರು ಇರುವ ಕಾರಣ ಪಂಪ್‌ಸೆಟ್‌ಗಳ ಮೇಲಿನ ವಿದ್ಯುತ್ ಬೇಡಿಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೆ ರೈತರು ಅಕ್ರಮವಾಗಿ ತೆಗೆದಿರುವ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಅವಕಾಶ ಇದ್ದು, ಈ ಸೌಲಭ್ಯವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಖಜಾನೆ ಸುಭದ್ರವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ವಿರೋಧ ಪಕ್ಷಗಳು ಅಭಿವೃದ್ಧಿ ಸಹಿಸದೆ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡಬೇಡಿ. ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿರುವುದು ಬಡ ಹಾಗೂ ದಲಿತರಿಗಾಗಿ. ಈ ಯೋಜನೆಗಳು ಬಡಜನರ ಕಣ್ಣಿರು ಒರೆಸಲು ಸಹಕಾರಿಯಾಗಿವೆ. ನಮ್ಮ ಸರ್ಕಾರ ಇರುವವರೆಗೂ ಈ ಯೋಜನೆಗಳು ಮುಂದುವರಿಯುತ್ತವೆ. ಬಿಜೆಪಿ-ಜೆಡಿಎಸ್ ನಾಯಕರು ಎಷ್ಟೇ ಕಿರುಚಿದರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ತಾಲೂಕಿನಲ್ಲಿ ನಾನ್ಯಾವತ್ತೂ ಸರ್ಕಾರದಿಂದ ಮಂಜೂರಾತಿ ಪಡೆಯದೆ ಯಾವುದೇ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿಲ್ಲ. ನರೇಗಾ ಯೋಜನೆ ಕೆಲಸಗಳಿಗೆ ಭೂಮಿಪೂಜೆ ನೆರವೇರಿಸಿದವರು ನಾನೇ ತಾಲೂಕನ್ನು ಅಭಿವೃದ್ಧಿ ಮಾಡಿದ್ದು ಎಂದು ಬೊಬ್ಬೆ ಹೊಡೆಯುತ್ತಿದ್ದರು. ಅವರಿಗೆ ತಾಲೂಕಿನ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಹಿಂದೆ ಗ್ರಾಮಕ್ಕೊಂದು ಸಮುದಾಯ ಭವನಕ್ಕೆ ಬೇಡಿಕೆ ಇಡುತ್ತಿದ್ದ ಜನ ಈಗ ಕೋಮಿಗೊಂದು ಸಮುದಾಯ ಭವನ, ದೇವಾಲಯ ಬೇಕು ಎನ್ನುತ್ತಿದ್ದಾರೆ. ಇದು ಕಷ್ಟ ಸಾಧ್ಯ, ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ಜನತೆ ಇಡುವ ಪ್ರತಿ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸುವ ಭರವಸೆ ನೀಡಿದರು. ಕೆ. ವೆಂಕಟೇಶ್ ಗ್ರಾಮಕ್ಕೆ ಬರುತ್ತಿದ್ದಂತೆ ಹಾಡಿ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು.
ವಿವಿಧೆಡೆ ಭೂಮಿಪೂಜೆ: ದಿಂಡ ಗಾಡು, ಮರಡಿಯೂರು, ಸುಂಕದಳ್ಳಿ, ಬೆಣಗಾಲು, ಆವರ್ತಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಾಲೂಕು ಪಂಚಾಯಿತಿ ಇಒ ಸುನೀಲ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ವೆಂಕಟೇಶ್, ದಿನೇಶ್, ಡಾ.ಸೋಮಯ್ಯ, ರೋಹಿತ್,ಪ್ರಸಾದ್, ಮಲ್ಲಿಕಾರ್ಜುನ್, ಗುರು ಬಸವರಾಜ್, ಪ್ರಸಾದ್, ಮಮತಾ, ಪದ್ಮಿನಿ, ಕುಮಾರ್, ಕೃಷ್ಣೇಗೌಡ, ಕೃಷ್ಣಮೂರ್ತಿ, ಮಂಜುನಾಥ್, ಮುಖಂಡರಾದ ರೆಹಮತ್ ಜಾನ್ ಬಾಬು, ಶೇಖರ್, ಪಿ.ಮಹದೇವ್, ಶಂಕರಪ್ಪ, ಲಕ್ಷ್ಮೀನಾರಾಯಣ, ಧನರಾಜ್, ಸೇಕ್ ಅಸ್ಲಾಂ, ಎಂ.ಬಿ.ಶಿವಕುಮಾರ್, ವಿನಯ್ ಕುಮಾರ್, ಎಂ.ಕೆ.ಶಿವು, ನವಿಲೂರು ಚೆನ್ನಪ್ಪ, ಜಾರ್ಜ್ ಇತರರು ಇದ್ದರು.