ಕೆಂಪುಕಲ್ಲು ಗಣಿಗಿಲ್ಲ ಕಾನೂನು ಕುಣಿಕೆ!


ಶ್ರೀಪತಿ ಹೆಗಡೆ ಹಕ್ಲಾಡಿ ಆಲೂರು
ಉಡುಪಿ ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಪರವಾನಗಿ ಹೊಂದಿರುವುದು ಪೆರ್ಡೂರು ಗ್ರಾಮದಲ್ಲಿನ ಗಣಿ ಮಾತ್ರ. ಆದರೆ ಜಿಲ್ಲೆಯಲ್ಲಿ 221 ಕೆಂಪುಕಲ್ಲು ಗಣಿಗಳು ಚಾಲ್ತಿಯಲ್ಲಿವೆ! ಗಣಿಗಾರಿಕೆ, ಸಾಗಾಟ, ದಾಸ್ತಾನುಗಳೆಲ್ಲವೂ ಕಾನೂನುಬಾಹಿರ. ಪ್ರತಿದಿನ ಸರ್ಕಾರದ ಬೊಕ್ಕಸಕ್ಕೆ ಐದು ಲಕ್ಷ ರೂ. ನಷ್ಟವಾಗುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಎಚ್ಚೆತ್ತಿಲ್ಲ.

ಆಲೂರು ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲಾ ಪರಿಸರದಲ್ಲೇ ಕೆಂಪುಕಲ್ಲು ಗಣಿ ನಡೆಯುತ್ತಿದ್ದು, ವಿದ್ಯಾರ್ಥಿಗಳ ಓದಿಗೂ ಭಂಗ ಉಂಟಾಗುತ್ತಿದೆ. ಶಾಲೆ ಸುತ್ತಮುತ್ತ ಗಣಿ ಹೊಂಡಗಳದ್ದೇ ಕಾರುಬಾರು. ಮಳೆಗಾಲದಲ್ಲಿ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಸಾವಿನ ಕೂಪಗಳು: ಅತಿ ಹೆಚ್ಚು ಗಣಿಗೆ ನಲುಗಿರುವ ಪ್ರದೇಶ ಅರೆಮಲೆ ನಾಡು, ಪಶ್ಚಿಮ ಘಟ್ಟದ ಸಾಲು. ಅರಣ್ಯ ಭೂಮಿ, ಡೀಮ್ಡ್ ಫಾರೆಸ್ಟ್, ಕುಮ್ಕಿ, ಅಕ್ರಮ ಸಕ್ರಮದಲ್ಲಿ ಮಂಜೂರಾದ ಸ್ಥಳಗಳು. ಗಣಿಗಾರಿಕೆ ಸಾರ್ವಜನಿಕರ ನೆಮ್ಮದಿ ಹಾಳು ಮಾಡುವ ಜತೆಗೆ ವನ್ಯಜೀವಿಗಳ ಜೀವಕ್ಕೂ ಕುತ್ತು ತರುತ್ತಿವೆ. ಇಷ್ಟಾದರೂ ಕಾನೂನು ಪಾಲಕರು, ಜಿಲ್ಲಾಡಳಿತ ಸುಮ್ಮನಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜನಪ್ರತಿನಿಧಿಗಳು, ಉಳ್ಳವರ ದುಡ್ಡಿನ ದಾಹಕ್ಕೆ ಭೂಮಿ ಬರಿದಾಗಬೇಕೆ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಆಲೂರಿಗೆ ಮೊದಲ ಸ್ಥಾನ: ಕೆಂಪುಕಲ್ಲು ಗಣಿಗೆ ಅತಿ ಹೆಚ್ಚು ಬಲಿಯಾಗುತ್ತಿರುವ ಪ್ರದೇಶಗಳಲ್ಲಿ ಆಲೂರು ಮೊದಲ ಸ್ಥಾನದಲ್ಲಿದೆ. ಶಾಲೆ ವಠಾರದ ಅಂಚಿನವರೆಗೂ ಗಣಿ ಧೂಳಿಗೆ ನಲುಗುತ್ತಿದೆ. ಆಲೂರಿನಲ್ಲಿ ಎಲ್ಲಿ ನೋಡಿದರೂ ಕಲ್ಲು ಕಿತ್ತ ಹೊಂಡಗಳೇ ಕಾಣಸಿಗುವುದು. ಗಣಿಗಾರಿಕೆಗೆ ಇಡೀ ಆಲೂರು ಹಾಳೂರಿನಂತೆ ಕಂಡು ಬರುತ್ತದೆ. ಅನಂತರದ ಸ್ಥಾನದಲ್ಲಿ ಹಳ್ಳಿಹೊಳೆ, ಯಡಮೊಗೆ, ಸಿದ್ದಾಪುರ, ಶಿರೂರು, ಮುದೂರು, ಹೊಸಂಗಡಿ ಇದೆ.

ನಿಯಮಗಳು ಗಾಳಿಗೆ: ಕೆಂಪುಕಲ್ಲು ಗಣಿಗಾರಿಕೆ ಹಾಗೂ ಸಾಗಾಟಕ್ಕೆ ಪರವಾನಗಿ ಕಡ್ಡಾಯ. ಕೆಂಪುಕಲ್ಲು ಖರೀದಿಗೆ ಲೆಕ್ಕ ಕೊಡಬೇಕು. ಮನೆ ಕೆಲಸಕ್ಕೆ ಪಟ್ಟಾ ಜಾಗದಲ್ಲಿ ಕಲ್ಲು ತೆಗೆಯಲು ಪರವಾನಗಿ ಅವಶ್ಯ. ಕಲ್ಲಿನ ಬಳಕೆ ಬಗ್ಗೆ ಗಣಿಗಾರಿಕೆ ಇಲಾಖೆಗೆ ಸ್ಪಷ್ಟ ಮಾಹಿತಿ ನೀಡಬೇಕು. ಕೆಂಪುಕಲ್ಲು ಬೇಕಾಬಿಟ್ಟಿ ದಾಸ್ತಾನು ಮಾಡುವಂತಿಲ್ಲ. ಕಲ್ಲು ಸಾಗಾಟ ಮಾಡುವಾಗ ಟ್ರಿಪ್‌ಶೀಟ್‌ನಲ್ಲಿ ಕಲ್ಲು ಪಡೆದ ಸ್ಥಳ, ಸಾಗಾಟ ಮಾಡುವ ಸ್ಥಳ, ಯಾರಿಗೆ ಕಲ್ಲು ಪೂರೈಕೆ ಮಾಡಲಾಗುತ್ತದೆ, ಕಲ್ಲು ತುಂಬಿ ಬಿಟ್ಟ ಸಮಯ, ಸೇರಬೇಕಾದ ಸ್ಥಳ ಹಾಗೂ ಮುಟ್ಟಿದ ಸಮಯ ಇವೆಲ್ಲವನ್ನೂ ನಮೂದಿಸಬೇಕು. ಈ ನಿಯಮ ಮೀರಿದಲ್ಲಿ ಇಲಾಖೆಗೆ ಕ್ರಮ ಕೈಗೊಳ್ಳುವ ಅಧಿಕಾರವಿದ್ದರೂ ಅಕ್ರಮ ಚಟುವಟಿಕೆ ನಡೆಯುತ್ತಲೇ ಇದೆ.

ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?: ಆಲೂರು ಕಲ್ಲು ಕ್ವಾರಿ ಬಗ್ಗೆ ‘ವಿಜಯವಾಣಿ’ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದು, ಸ್ಥಳಕ್ಕೆ ಪತ್ರಿಕೆ ಪ್ರತಿನಿಧಿ ಹೋದ ಸಂದರ್ಭ ಗಣಿ ಕೆಲವು ಕಡೆ ಸ್ತಬ್ಧವಾಗಿದ್ದು, ಮತ್ತೆ ಕೆಲವು ಕಡೆ ಗಣಿ ನಡೆಸುತ್ತಿದ್ದವರು ಪರಾರಿಯಾಗಿದ್ದಾರೆ. ಅಕ್ರಮ ನಡೆಯುತ್ತಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

ಜಿಲ್ಲೆಯಲ್ಲಿ ಗಣಿಗಾರಿಕೆ ಬಗ್ಗೆ ಬಹಳಷ್ಟು ದೂರುಗಳಿವೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರವಾದರೆ ಗಣಿಗಾರಿಕೆ ಸಮಸ್ಯೆಯೂ ತಗ್ಗುತ್ತದೆ. ಮಾನವ ಸಂಪನ್ಮೂಲದ ಕೊರತೆಯಿದೆ. ಗಣಿಗಾರಿಕೆ ಇಲಾಖೆಯಲ್ಲಿ ಮೂರೇ ಜನರಿದ್ದಾರೆ. ಸಮಸ್ಯೆ ಸಂಬಂಧ ಇಲಾಖೆಗೆ ಸೂಚನೆ ಕೊಡುತ್ತೇನೆ. ಒಂದು ಕಡೆಯಿಂದ ದಾಳಿ ನಡೆಸುತ್ತ ಅಕ್ರಮಕ್ಕೆ ತಡೆ ಹಾಕುತ್ತೇವೆ. ಇದಕ್ಕೆ ಸ್ವಲ್ಪ ಸಮಯಾವಕಾಶ ಬೇಕು.
|ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉಡುಪಿ ಜಿಲ್ಲಾಧಿಕಾರಿ

ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ಬಗ್ಗೆ ನಮಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಕ್ರಮ, ಪರವಾನಗಿ ಬಗ್ಗೆ ಬರವಣಿಗೆ ಅಥವಾ ಮಾಹಿತಿ ನೀಡಲಿ. ಮರಳು ಗಣಿಗಾರಿಕೆ ಸಂಬಂಧಪಟ್ಟಂತೆ ಮಾಹಿತಿ ಇರುತ್ತದೆ. ಹಾಗೆ ಕೆಂಪುಕಲ್ಲು ಗಣಿ ಬಗ್ಗೆ ಮಾಹಿತಿ ನೀಡಿದರೆ ಇಲಾಖೆ ಕ್ರಮ ಜರುಗಿಸಲು ಸಿದ್ಧ.
| ಲಕ್ಷ್ಮಣ ನಿಂಬರಗಿ ಉಡುಪಿ ಎಸ್ಪಿ

ಉಡುಪಿ ಜಿಲ್ಲೆಯಲ್ಲಿ ಪೆರ್ಡೂರು ಹೊರತುಪಡಿಸಿ ಮತ್ಯಾವ ಕಡೆಯಲ್ಲೂ ಕೆಂಪುಕಲ್ಲು ಗಣಿಗೆ ಅನುಮತಿ ಕೊಟ್ಟಿಲ್ಲ. ಇಲಾಖೆ ಯಡಮೊಗೆ ಹಳ್ಳಿಹೊಳೆ ಹೊಸಂಗಡಿ, ಕರ್ಕುಜೆ, ಹಳ್ಳಿಹೊಳೆ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿ ಮೇಲೆ ದಾಳಿ ನಡೆಸಿ, ಕ್ರಮ ಕೈಗೊಂಡಿದೆ. ಅನಧಿಕೃತ ಗಣಿಗಾರಿಕೆಗಳು ಎಷ್ಟಿವೆ ಎಂಬ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ. ದೂರು ಬಂದ ಕಡೆ ದಾಳಿ ನಡೆಸಿ ಕೇಸ್ ಹಾಕಿದ್ದೇವೆ. ಸಾರ್ವಜನಿಕರು ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ.
|ಮಹೇಶ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ