ನವದೆಹಲಿ: ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ, ಆದರೆ ಉತ್ತರ ಭಾರತದ ಅಭ್ಯರ್ಥಿಗಳು ಉದ್ಯೋಗಕ್ಕೆ ಅಗತ್ಯವಾದ ಅರ್ಹತೆಯ ಕೊರತೆಗಳಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.
ದೇಶದಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆಯಿಲ್ಲ ಎಂದು ಹೇಳಬಯಸುತ್ತೇನೆ. ಉತ್ತರ ಭಾರತದಲ್ಲಿ ನೇಮಕಾತಿಗಾಗಿ ಆಗಮಿಸುವವರು ಇಲ್ಲಿನ ಅಭ್ಯರ್ಥಿಗಳಲ್ಲಿ ತಮ್ಮಲ್ಲಿರುವ ಉದ್ಯೋಗಕ್ಕೆ ಅಗತ್ಯವಾದ ಅರ್ಹತೆಗಳು ಇಲ್ಲ ಎಂದು ಸಾಮಾನ್ಯವಾಗಿ ದೂರುತ್ತಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ (ಸ್ವತಂತ್ರ) ಸಂತೋಷ್ ಗಂಗ್ವಾರ್ ಹೇಳಿದ್ದಾರೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವನಾಗಿ ನಾನು ದಿನನಿತ್ಯ ಗಮನಿಸಿದಂತೆ ದೇಶದಲ್ಲಿ ಉದ್ಯೋಗಗಳಿಗೆ ಕೊರತೆಯಿಲ್ಲ. ನಮ್ಮಲ್ಲಿ ಉದ್ಯೋಗ ವಿನಿಮಯಕ್ಕೆ ಒಂದು ವ್ಯವಸ್ಥೆ ಇದೆ ಜತೆಗೆ ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಕಾರ್ಮಿಕ ಸಚಿವಾಲಯ ದೇಶದ ಔದ್ಯೋಗಿಕ ಪರಿಸ್ಥಿತಿಯನ್ನು ಕಾಲಕಾಲಕ್ಕೆ ಅವಲೋಕಿಸುತ್ತಿದೆ ಎಂದಿದ್ದಾರೆ.
ಪ್ರಿಯಾಂಕಾ ತರಾಟೆ: ಉತ್ತರ ಭಾರತೀಯರ ಕುರಿತ ಕೀಳರಿಮೆ ಹೇಳಿಕೆಗೆ ಪ್ರಿಯಾಂಕ ಗಾಂಧಿ ವಾದ್ರಾ, ಗಂಗ್ವಾರ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂತ್ರಿಗಳೇ ನಿಮ್ಮದೇ ಸರ್ಕಾರ ಕಳೆದ 5 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಉದ್ಯೋಗಗಳನ್ನು ಸೃಷ್ಟಿಸಿಲ್ಲ. ಸರ್ಕಾರದ ನೀತಿಗಳಿಂದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿದ್ದು, ಇದ್ದ ಉದ್ಯೋಗಗಳೂ ಕಣ್ಮರೆಯಾಗುತ್ತಿವೆ. ಸರ್ಕಾರ ಏನಾದರೂ ಉತ್ತಮವಾದದ್ದು ಮಾಡುತ್ತದೆ ಎಂದು ಯುವಜನತೆ ಭರವಸೆಯಿಂದ ಕಾಯುತ್ತಿದೆ. ಉತ್ತರ ಭಾರತೀಯರನ್ನು ಹೀಯಾಳಿಸಿ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ವಿಟರ್ನಲ್ಲಿ ಕೆಂಡ ಕಾರಿದ್ದಾರೆ.
ದೇಶದ ಆರ್ಥಿಕ ಬೆಳವಣಿಗೆ ಶೇ.5 ಕ್ಕೆ ಕುಸಿದಿರುವ ಸಂದರ್ಭದಲ್ಲಿ ಕೇಂದ್ರ ಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.