ಮೂಲಸೌಕರ್ಯವಿಲ್ಲದ ದಾಸನದೊಡ್ಡಿ!

ಎಸ್.ಲಿಂಗರಾಜು ಮಂಗಲ ಹನೂರು
ಕಾಂಕ್ರೀಟ್ ಕಾಣದ ರಸ್ತೆಗಳು, ಬೀದಿಯಲ್ಲಿ ಹರಿಯುವ ಕೊಳಚೆ ನೀರು, ಬೆಳೆದು ನಿಂತಿರುವ ಗಿಡಗಂಟಿಗಳು, ಪಾಚಿ ಗಟ್ಟಿದ ಕುಡಿಯುವ ನೀರಿನ ತೊಂಬೆ, ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಅನೈರ್ಮಲ್ಯದಿಂದ ರೋಗರುಜಿನದ ಭೀತಿಯಲ್ಲಿ ದಿನ ದೂಡುತ್ತಿರುವ ನಿವಾಸಿಗಳು.

ಹೌದು. ಇದು ಸಮೀಪದ ದಾಸನದೊಡ್ಡಿ ಗ್ರಾಮದ ಪ್ರಸ್ತುತ ಚಿತ್ರಣವಿದು. ಹನೂರಿನಿಂದ 7 ಕಿ.ಮೀ. ಅಂತರದಲ್ಲಿರುವ ಈ ಗ್ರಾಮ ಅಜ್ಜೀಪುರ ಗ್ರಾಮ ಪಂಚಾಯಿತಿಗೆ ಸೇರಿದ್ದು, 80ಕ್ಕೂ ಹೆಚ್ಚು ಕುಟುಂಬಗಳಿರುವ ಸುಮಾರು 400ಕ್ಕೂ ಹೆಚ್ಚು ಉಪ್ಪಾರ ಸಮುದಾಯದವರು ವಾಸಿಸುತ್ತಿದ್ದಾರೆ.

ಇಲ್ಲಿನ ಬಹುತೇಕ ಕುಟುಂಬಗಳು ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಆದರೆ, ಗ್ರಾಪಂ ನಿರ್ಲಕ್ಷ್ಯದಿಂದ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಮರೀಚಿಕೆಯಾಗಿದೆ. ಪರಿಣಾಮ ಇಲ್ಲಿನ ಜನರು ಕಷ್ಟದ ನಡುವೆ ದಿನ ದೂಡುವಂತಾಗಿದೆ. ಆದರೂ ಗ್ರಾಪಂ ಆಡಳಿತ ಕಿಂಚಿತ್ತೂ ಗಮನಹರಿಸದಿರುವುದು ವಿಪರ್ಯಾಸ.

ಚರಂಡಿ, ಸಿಸಿ ರಸ್ತೆಗಳಿಲ್ಲ: ಗ್ರಾಮದಲ್ಲಿ 3 ಬೀದಿಗಳಿದ್ದು, ಒಂದರಲ್ಲಿ ಮಾತ್ರ ಕಳೆದ ವರ್ಷ ಅರ್ಧಭಾಗ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಇನ್ನುಳಿದ ಬೀದಿಗಳಲ್ಲಿ ನಿರ್ಮಿಸಿಲ್ಲ. ಪರಿಣಾಮ ಕೊಳಚೆ ನೀರು ಬೀದಿಯಲ್ಲಿ ಹರಿಯುತ್ತಿದೆ. ಅಲ್ಲದೇ ತಗ್ಗುದಿಣೆಯಿಂದ ಕೂಡಿದ ಈ ರಸ್ತೆಗಳಲ್ಲಿ ಮಳೆ ಬಂದ ವೇಳೆ ನೀರು ಹಲವು ದಿನಗಳವರೆಗೆ ನಿಲ್ಲುತ್ತದೆ. ಇದರಿಂದ ಸಂಚರಿಸಲು ತೊಂದರೆಯಾಗುತ್ತಿದೆ.

ರಸ್ತೆಯ ಅಲ್ಲಲ್ಲಿ ಗಿಡಗಂಟಿಗಳು ಬೆಳೆದು ಅನೈರ್ಮಲ್ಯ ಮನೆ ಮಾಡಿದೆ. ರಾತ್ರಿ ಸೊಳ್ಳೆಗಳ ಕಾಟ ವೀಪರೀತವಾಗಿದ್ದು, ರೋಗರುಜಿನಗಳ ಭೀತಿ ನಿವಾಸಿಗಳನ್ನು ಕಾಡುತ್ತಿದೆ. ಸಮರ್ಪಕ ಮೂಲಸೌಕರ್ಯವಿಲ್ಲದ ಪರಿಣಾಮ ಜನತೆ ತುಂಬಾ ತೊಂದರೆ ಪಡುವಂತಾಗಿದೆ.

ಕಲುಷಿತ ನೀರೇ ಗತಿ: ಗ್ರಾಮದಲ್ಲಿ 3 ಕುಡಿಯುವ ನೀರಿನ ತೊಂಬೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ರಸ್ತೆಬದಿಗೆ ಹೊಂದಿಕೊಂಡಂತಿರುವ ತೊಂಬೆಯನ್ನು ಇದುವರೆಗೂ ಒಂದು ಬಾರಿಯಾದರೂ ಸ್ವಚ್ಛಗೊಳಿಸಿಲ್ಲ. ಆಗಾಗ್ಗೆ ನೀರಿನಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದು, ಕಲುಷಿತ ನೀರನ್ನೇ ಬಸಿದು ಕುಡಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ತೊಂಬೆಯ ಸುತ್ತಲು ಗಿಡಗಂಟಿಗಳು ಬೆಳೆದು ಅನೈರ್ಮಲ್ಯ ಮನೆ ಮಾಡಿದೆ. ಬೆಳಗಿನ ವೇಳೆಯೇ ಸೊಳ್ಳೇಗಳ ಕಾಟದಿಂದ ನೀರನ್ನು ಹಿಡಿಯಲು ತೊಂದರೆ ಪಡುವಂತಾಗಿದೆ. ಕೆಲವು ವೇಳೆ ನಾವೇ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದ್ದೇವೆ. ಈ ಬಗ್ಗೆ ಗ್ರಾಪಂಗೆ ತಿಳಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎದು ಇಲ್ಲಿನ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಥಿಲಾವಸ್ಥೆಯ ಅಂಗನವಾಡಿ ಕೇಂದ್ರ: ಗ್ರಾಮದಲ್ಲಿ ಅಂಗನವಾಡಿಯನ್ನು ಹಲವು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು, ಪ್ರಸ್ತುತ 15 ಮಕ್ಕಳಿಗೆ ಅಕ್ಷರಭ್ಯಾಸಿಸಲಾಗುತ್ತಿದೆ. ಆದರೆ, ಈ ಕಟ್ಟಡ 2 ವರ್ಷದಿಂದ ಶಿಥಿಲಾವಸ್ಥೆ ತಲುಪಿ ಬಿರುಕು ಬಿಟ್ಟಿದೆ. ಮಳೆ ನೀರು ಸೋರುತ್ತದೆ. ಇದರಿಂದ ಮಕ್ಕಳು ತುಂಬಾ ತೊಂದರೆ ಪಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ: ಗ್ರಾಮದಲ್ಲಿ ನೆಲೆನಿಂತು ದಶಕಗಳೇ ಕಳೆದಿದೆ. ಆದರೆ, ಗ್ರಾಪಂ ಆಡಳಿತ ಗ್ರಾಮವನ್ನು ಕಡೆಗಣಿಸಿದ್ದು, ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಸಿಸಿ ರಸ್ತೆ, ಚರಂಡಿ, ಸಮರ್ಪಕ ಬೀದಿ ದೀಪ ಸೇರಿದಂತೆ ಇನ್ನಿತರ ಮೂಲಸೌಕರ್ಯವಿಲ್ಲದೆ ತೊಂದರೆ ಪಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಗ್ರಾಪಂಗೆ ಮನವಿ ಸಲ್ಲಿಸಲಾಗಿದೆ. ಯಾವುದೇ ಕ್ರಮಕೈಗೊಂಡಿಲ್ಲ. ಮುಂಬರುವ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂದು ಗ್ರಾಮಸ್ಥರಾದ ಮಹದೇವಮ್ಮ, ಮಂಗಳಮ್ಮ, ಪುಟ್ಟಲಕ್ಷ್ಮಮ್ಮ, ಮಾದೇವ, ನಾಗರಾಜು, ದಾಸಶೆಟ್ಟಿ, ನಂಜಪ್ಪ ಇನ್ನಿತರರು ಎಚ್ಚರಿಸಿದ್ದಾರೆ.
ಗ್ರಾಮದಲ್ಲಿ ಇಷ್ಟೆಲ್ಲ ಮೂಲಸೌಕರ್ಯದ ಕೊರತೆ ಇದ್ದರೂ ಗ್ರಾಪಂ ಗಮನಹರಿಸಿದಿರುವುದು ಆಡಳಿತದ ನಿರ್ಲಕ್ಷ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಮುಂದಾದರೂ ಈ ಬಗ್ಗೆ ಗಮನಹರಿಸುವರೇ ಕಾದು ನೋಡಬೇಕಿದೆ.


ಗ್ರಾಮದಲ್ಲಿ ಮೂಲಸೌಕರ್ಯ ಇಲ್ಲದೆ ತೊಂದರೆ ಪಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ತುಂಬಾ ಬೇಸರವಾಗಿದೆ. ಮೂಲಸೌಕರ್ಯ ಒದಗಿಸದಿದ್ದಲ್ಲಿ ಮುಂಬರುವ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಲಾಗುವುದು.
ದಾಸಶೆಟ್ಟಿ, ಗ್ರಾಮದ ಯಜಮಾನ

ಗ್ರಾಮದಲ್ಲಿ ಕಳೆದ ವರ್ಷ ಗ್ರಾಮ ವಿಕಾಸ್ ಯೋಜನೆಯಡಿ ಒಂದು ಸಿಸಿ ರಸ್ತೆ ನಿರ್ಮಿಸಲಾಗಿದೆ. ಉಳಿದ ರಸ್ತೆಗಳಿಗೆ ಕಾಂಕ್ರೀಟ್ ಹಾಗೂ ಚರಂಡಿ ನಿರ್ಮಿಸಲು ಈಗಾಗಲೇ ಕ್ರಿಯಾ ಯೋಜನೆಯ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆಯಲಿದೆ. ಈ ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು.
ಎಂ.ನಂದೀಶ್, ಪಿಡಿಒ, ಅಜ್ಜೀಪುರ ಗ್ರಾಪಂ

 

Leave a Reply

Your email address will not be published. Required fields are marked *