ಕಾಲುಸಂಕದ ಹಾದಿಗೆ ಪ್ರಾಣವೇ ಸುಂಕ..!

ಇದು ಹೈಟೆಕ್ ಯುಗ. ಆದರೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲ ಗ್ರಾಮಗಳಲ್ಲಿ ಹೈಟೆಕ್ ಇರಲಿ, ಸಣ್ಣ ಮೂಲಸೌಕರ್ಯಗಳೂ ಮರೀಚಿಕೆಯಾಗಿವೆ. ಮಳೆಗಾಲದಲ್ಲಿ ಈ ಗ್ರಾಮಗಳ ಜನರ ಸಂಚಾರಕ್ಕೆ ಇರುವುದು ಕಟ್ಟಿಗೆ, ಹಗ್ಗ, ಕಲ್ಲುಚಪ್ಪಡಿಗಳಿಂದ ತಯಾರಿಸಿದ ತೂಗುಸೇತುವೆ-ಕಾಲುಸಂಕಗಳಷ್ಟೆ. ತುಂಬಿ ಹರಿಯುವ ನದಿ ಮೇಲಿನ ಈ ತೂಗುಸೇತುವೆಗಳಲ್ಲಿ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಾಗುತ್ತಾರೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ತೀರ್ಥಹಳ್ಳಿಯ ದೊಡ್ಲಿಮನೆಯಲ್ಲಿ ಸೋಮವಾರ ಕಾಲುಸಂಕ ದಾಟುವಾಗ ಬಿದ್ದು ಮೃತಪಟ್ಟ ವಿದ್ಯಾರ್ಥಿನಿ ಆಶಿಕಾ ಪ್ರಕರಣವೇ ನಿದರ್ಶನ. ಆದರೆ, ಸ್ಥಳೀಯ ಜನ ಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ಇಂತಹ ಪ್ರಾಣಕಂಟಕ ಸೇತುವೆಗಳ ಕಡೆ ಗಮನಹರಿಸದಿರುವುದು ಶೋಚನೀಯ. ಸದ್ಯ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾಲುಸಂಕಗಳ ಸ್ಥಿತಿಗತಿ ಕುರಿತ ವಿಸõತ ವರದಿ ಇಲ್ಲಿದೆ.

6 ವರ್ಷಗಳಲ್ಲಿ 4 ವಿದ್ಯಾರ್ಥಿಗಳ ಸಾವು

ಸುರಕ್ಷಿತ ಕಾಲುಸಂಕಗಳಿಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ 6 ವರ್ಷಗಳಲ್ಲಿ 4 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಕಾರ್ಗಲ್ ಸಮೀಪದ ಇಂದ್ರೋಡಿಮನೆ ಗ್ರಾಮದಲ್ಲಿ ಬಾಲಕಿ, ಹೊಸನಗರ ತಾಲೂಕು ಚಿಕ್ಕಜೇನಿ ಸಮೀಪ ಇಬ್ಬರು ಮಕ್ಕಳು ಕಾಲುಸಂಕದಿಂದ ಜಾರಿ ಬಿದ್ದು ಮೃತಪಟ್ಟಿದ್ದರು. ತೀರ್ಥಹಳ್ಳಿ ತಾಲೂಕು ಹೊನ್ನೇತಾಳು ಸಮೀಪದ ದೊಡ್ಲಿಮನೆ ಹಳ್ಳದಲ್ಲಿ ಸೋಮವಾರ ವಿದ್ಯಾರ್ಥಿನಿ ಆಶಿಕಾ ಕೊಚ್ಚಿ ಹೋಗಿದ್ದಾಳೆ. ಮುರಿದುಹೋಗಿದ್ದ ಸಿಮೆಂಟ್ ಕಾಲುಸಂಕದ ಮೇಲೆ ಅಡಕೆ ಮರದ ತುಂಡುಗಳನ್ನು ಹಾಕಿ ಜನ ಓಡಾಡುತ್ತಿದ್ದರು. ಆದರೆ, ಶಾಶ್ವತ ಪರಿಹಾರಕ್ಕೆ ಯಾರೂ ಮುಂದಾಗಿಲ್ಲ. ತೀರ್ಥಹಳ್ಳಿ ತಾಲೂಕಿನ ಅತ್ತಿಕೂಡಿಗೆ ಸಮೀಪ ಮರಡಿಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ವಿುಸಿರುವ ಕಾಲುಸಂಕ ಕೂಡ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಕಾಲುಸಂಕ ಅಂಕುಡೊಂಕು

ಉಡುಪಿ ಜಿಲ್ಲೆಯ ಬೈಂದೂರು ತಾಲೂಕು, ಕಾಲ್ತೋಡು ಗ್ರಾಮ ಬೊಳಂಬಳ್ಳಿ-ಹೊಸಾಡು ನಡುವೆ ಹಾದು ಹೋಗುವ ಹೊಳೆಗೆ ಕಾಲುಸಂಕವಿದ್ದು, ನಾಲ್ಕಾರು ಊರಿನ ಮಂದಿ ಇದನ್ನೇ ಅವಲಂಬಿಸಿದ್ದಾರೆ. 25ಕ್ಕೂ ಹೆಚ್ಚು ಮಕ್ಕಳು ಇಲ್ಲೇ ಕ್ರಮಿಸಬೇಕಿದ್ದು, ಮಕ್ಕಳು ಹೋಗುವಾಗ, ಬರುವಾಗ ಪಾಲಕರೇ ದಾಟಿಸುತ್ತಿದ್ದಾರೆ. ಬಹಳಷ್ಟು ಜಾನುವಾರುಗಳು ಇಲ್ಲಿ ಕೊಚ್ಚಿ ಹೋಗಿವೆ. ಕೃಷಿ ಪರಿಕರ, ಕೋಣಗಳನ್ನು ಹೊಳೆ ದಾಟಿಸಲು ಆಗದೆ ಹಲವರು ಕೃಷಿಯನ್ನೇ ಬಿಟ್ಟಿದಾರೆ.

ಜೊಯಿಡಾದಲ್ಲಿ ಕಾಲುಸಂಕಗಳದ್ದೇ ದರ್ಬಾರು

ಉತ್ತರಕನ್ನಡ ಜಿಲ್ಲೆಯಲ್ಲೇ ಬಹು ವಿಸ್ತಾರ ಅರಣ್ಯದಿಂದ ಕೂಡಿದ ತಾಲೂಕು ಜೊಯಿಡಾ. ಇಲ್ಲಿನ ವಿದ್ಯಾರ್ಥಿಗಳಿಗೆ, ಜನರಿಗೆ ಮರದ ಕಾಲುಸಂಕಗಳೇ ಹೊರ ಜಗತ್ತಿನ ಸಂಪರ್ಕಕ್ಕೆ ಆಸರೆ. ಮಳೆಗಾಲದ 3-4 ತಿಂಗಳ ಆಹಾರ ಇತ್ಯಾದಿ ಸಾಮಗ್ರಿಗಳನ್ನು ಮೊದಲೇ ಶೇಖರಿಸಿಡುತ್ತಾರೆ. ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಕಣೆ, ಕೋಡತಳ್ಳಿ, ಮಾಲೆ ಚಂದ್ರಾಳಿ, ಶಿವಪೂರ, ಸಿದ್ದೋಲಿ, ಅಣಶಿ ಗ್ರಾಪಂ ವ್ಯಾಪ್ತಿಯ ಬೀಕಾಪಂಡ, ನಾರಗಾಳಿ, ಸಾವಂತಮಾತಕರ್ಣಿ, ಕುಂಬಾರವಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ, ಅಜಗಾಂವ, ಜಾಮಗಾಳಿ ಬಾಜಾರಕುಣಗಂ ಗ್ರಾಪಂ ವ್ಯಾಪ್ತಿಯ ಬಾಮಣೆ, ಸಿಸೈ, ಬೊಂಡೋಲಿ, ಕರಂಜೆ, ಸೋಲಿಯೆ, ಸುಲಾವಳಿ, ಕ್ಯಾಸಲ್​ರಾಕ್ ಗ್ರಾ.ಪಂ. ವ್ಯಾಪ್ತಿಯ ಅವೇಡಾದಲ್ಲಿ ಮರದ ಕಾಲುಸಂಕಗಳಿವೆ. ಇವುಗಳನ್ನು ಸ್ಥಳೀಯರೇ ನಿರ್ವಿುಸಿಕೊಳ್ಳುತ್ತಾರೆ. ಕೆಲವು ಕಡೆ ಗ್ರಾಮ ಪಂಚಾಯಿತಿಯವರು ಮರದ ಕಾಲುಸಂಕಗಳ ನಿರ್ವಹಣೆಗೆ ವಾರ್ಷಿಕವಾಗಿ 2-3 ಸಾವಿರ ರೂ. ನೀಡುತ್ತಾರೆ.

ಕಟ್ಟಿಗೆ ಸೇತುವೆ!

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಶಿರೋಲಿ ಮತ್ತು ನೇರಸಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾನಾಪುರದ ಗವ್ವಾಳಿ ಬಳಿ ಬಂಡೂರ ಉಪನದಿಗೆ ಅಡ್ಡಲಾಗಿ ನಿರ್ವಿುಸಿರುವ ಕಟ್ಟಿಗೆಯ ತೂಗುಸೇತುವೆ ಇದೆ. ಭೀಮಗಡ ಅಭಯಾರಣ್ಯ ವ್ಯಾಪ್ತಿಗೊಳಪಡುವ ಈ ಪ್ರದೇಶದಲ್ಲಿ ಶಾಶ್ವತ ಸೇತುವೆ ಬೇಕಿದೆ. ಶಾಲೆ, ದಿನಸಿ, ವೈದ್ಯಕೀಯ ನೆರವು ಹೀಗೆ ಏನು ಬೇಕಿದ್ದರೂ ಸೇತುವೆ ದಾಟಬೇಕು, ಬಳಿಕ 8ರಿಂದ 10 ಕಿಲೋ ಮೀಟರ್ ದುರ್ಗಮ ರಸ್ತೆಯಲ್ಲಿ ಸಂಚರಿಸಬೇಕು. ಕನ್ನಡ ಮತ್ತು ಮರಾಠಿ ಮಾಧ್ಯಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದ್ದು, ಮಕ್ಕಳು 5ನೇ ತರಗತಿ ಪೂರೈಸುತ್ತಲೇ ಕೆಲ ಪಾಲಕರು ಅವರ ಶಿಕ್ಷಣ ಮೊಟಕುಗೊಳಿಸಿದ್ದಾರೆ. ಇದಕ್ಕೆ ಕಾರಣ ತೂಗುಸೇತುವೆ.

ಮೊಗ್ರ ತುಂಬಿದರೆ ಶಾಲೆಗೆ ರಜೆ!

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುವ ಮಕ್ಕಳಿಗೆ ಶಾಲೆಗೆ ತೆರಳಲು ಹೊಳೆ ದಾಟಲೇಬೇಕು. ಮೊಗ್ರ ಹೊಳೆ ತುಂಬಿದರೆ ಶಾಲೆಗೆ ಅಘೊಷಿತ ರಜೆ! 1943ರಂದು ಶಾಲೆ ಆರಂಭವಾಗಿದ್ದು, ಅಂದಿನಿಂದಲೂ ಸೇತುವೆ ನಿರ್ಮಾಣ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಶಾಲೆಗೆ ಬರುವ 39 ಮಕ್ಕಳ ಪೈಕಿ 20 ಮಕ್ಕಳು ಹೊಳೆ ದಾಟಿಯೇ ಬರಬೇಕು. ಈ ಹೊಳೆಗೆ ಮಳೆಗಾಲದಲ್ಲಿ ಗ್ರಾಮ ಪಂಚಾಯಿತಿ ಹಾಕುವ ಮರದ ಹಲಗೆ ಮೇಲೆ ಮಕ್ಕಳು ನಡಿಯಬೇಕು!

ದಾರಿಯೇ ಮಾಯ!

ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಗುತ್ತಿಗಾರು ಗ್ರಾ.ಪಂ. ವ್ಯಾಪ್ತಿಯ ನಾಲ್ಕೂರು ಉಜಿರಡ್ಕ ಕಾಲನಿ ಸೇರಿ ಈ ಭಾಗದ ಹಲವಾರು ಪ್ರದೇಶಗಳಿಗೆ ಕೈಯಳತೆಯಷ್ಟು ಹತ್ತಿರದಲ್ಲಿರುವ ಏನೆಕಲ್​ಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ಬರುವ ಕಲ್ಲಾಜೆ ನದಿ ದಾಟಬೇಕಿದ್ದು, ಇದಕ್ಕೆ ಸೇತುವೆ ಇಲ್ಲ. ಈ ಸ್ಥಳಕ್ಕೆ ತಾಗಿಕೊಂಡು ಏನೆಕಲ್ ಎಂಬ ಪುಟ್ಟ ಊರಿದೆ. ಉಜಿರಡ್ಕದ ಜನತೆ ಮೂಲ ಅಗತ್ಯಗಳಿಗಾಗಿ ಏನೆಕಲ್​ಗೆ ಬರುವುದು ಅನಿವಾರ್ಯ. ಇಲ್ಲಿರುವ 1 ಕಿ.ಮೀ. ವ್ಯಾಪ್ತಿಗೆ ಮಳೆಗಾಲದಲ್ಲಿ 20 ಕಿ.ಮೀ. ಸುತ್ತಿಬರಬೇಕು. ಕೆಲವೊಮ್ಮೆ ಮಕ್ಕಳನ್ನು ಹಿರಿಯರು ಹೆಗಲಲ್ಲಿ ಹೊತ್ತು ದಡ ಸೇರಿಸುತ್ತಾರೆ. ನದಿ ದಾಟಲು ತಾತ್ಕಾಲಿಕವಾಗಿ ಜನರೇ ಮರವೊಂದನ್ನು ಹಾಕಿ ದಡ ಸೇರುತ್ತಿದ್ದಾರೆ.

ತೂಗು ಸರ್ಕಸ್

ಮಡಿಕೇರಿ ತಾಲೂಕಿನ ಕರಿಕೆ ಸಮೀಪದ ‘ಆಲತ್ತಿಕಾಡವಿ’ಯ ನಿವಾಸಿಗಳು ಮುರಿದ ತೂಗುಸೇತುವೆ ಯಲ್ಲೇ ಸರ್ಕಸ್ ಮಾಡುತ್ತ ನಗರಕ್ಕೆ ಬರಬೇಕಾಗಿದೆ. ಇಲ್ಲಿ 60ಕ್ಕೂ ಹೆಚ್ಚು ಕುಟುಂಬಗಳಿವೆ. 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ತೆರಳುತ್ತಾರೆ.

ನನಸಾಗದ ಕನಸು

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಮದ್ದೋಡಿ, ಕಲ್ಲಣ್ಕಿ, ಕೊಂಜಳ್ಳಿ, ಒಣಕೊಡ್ಲು, ತೋಂಕ್ತಿ, ಗಂಗನಾಡು, ಕೊಡುವಳ್ಳಿ ಪ್ರದೇಶದ ಜನರಿಗೆ ಹೊಳೆ ಎಂದರೆ ಅಪಾಯವೇ. ಇಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿವೆ. ಕೆಲ ವರ್ಷಗಳ ಹಿಂದೆ ಕಲ್ಲಣ್ಕಿ ಕಾಲುಸಂಕ ಮಳೆಗೆ ಕೊಚ್ಚಿ ಹೋಗಿತ್ತು.

ಇರಾಸೆಗೆ ನಿರಾಸೆ

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರಾಸೆ ಹೊಳೆಗೆ ಮರದ ಸಂಕವೇ ಹೆದ್ದಾರಿ. ನಾಣಿಕಟ್ಟಾ- ಮತ್ತಿಹಳ್ಳಿ-ಬೆಣ್ಣೆಕೇರಿ-ಇರಾಸೆ- ಮಾವಿನಕೊಪ್ಪದವರೆಗೆ 9 ಕಿ.ಮೀ. ಇದರ ನಡುವೆ ಇರಾಸೆ ಹೊಳೆ ಇದ್ದು ಮಳೆಗಾಲದಲ್ಲಿ ನಡುಗಡ್ಡೆಯಂತಾಗುತ್ತದೆ. ಈ ಭಾಗದಲ್ಲಿ 300ಕ್ಕೂ ಅಧಿಕ ಮಂದಿ ಇದ್ದು, ಆರೋಗ್ಯ ಕೆಟ್ಟರೆ ಪಟ್ಟಣಕ್ಕೆ ಹೋಗಲು ಸಾಹಸವನ್ನೇ ಮಾಡಬೇಕು. ಕೆಲವೊಮ್ಮೆ ಕಂಬಳಿ ಜೋಲಿಯ ಮೇಲೆ ಕರೆದುಕೊಂಡು ಹೋಗಿದ್ದೂ ಇದೆ. ಮಕ್ಕಳೂ ಇದಕ್ಕೆ ಹೊರತಾಗಿಲ್ಲ.

300 ಕುಟುಂಬದ ಪರದಾಟ

ಉತ್ತರಕನ್ನಡದ ಹೊನ್ನಾವರ ತಾಲೂಕಿನ ಮಂಕಿ, ಚಿತ್ತಾರ ಗ್ರಾ.ಪಂ. ವ್ಯಾಪ್ತಿಯ ಅಡಕೆಕುಳಿಯ ಹೊಳೆಗೆ ಸಮರ್ಪಕ ಸೇತುವೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಈ ಭಾಗದಲ್ಲಿ 310ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಕಾಲುಸಂಕದ ಮೇಲೆ ಸಂಚರಿಸುತ್ತಾರೆ.

ಅಘನಾಶಿನಿ ತಂತಿ ನಡಿಗೆ

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾಳೂರಿನ ಬಳಿ ಅಘನಾಶಿನಿ ನದಿಗೆ ಸ್ಥಳೀಯರೇ ನಿರ್ವಿುಸಿಕೊಂಡ ಕಾಲುಸಂಕ ಅವಘಡಕ್ಕೆ ಆಹ್ವಾನಿಸುವಂತಿದೆ. 50 ಮೀಟರ್ ಉದ್ದದ ಈ ಸೇತುವೆಯನ್ನು ಮಧ್ಯೆ ಯಾವುದೇ ಆಧಾರವಿಲ್ಲದೆ ತಂತಿ ಸಹಾಯದಿಂದ ನಿರ್ವಿುಸಲಾಗಿದೆ. ಕೆಂದಿಗೆತೋಟ, ಹಂಚಳ್ಳಿ, ಹಿರೇಕೈ, ಬಣಗಿ ಸೇರಿ ಹಲವು ಹಳ್ಳಿಗಳ 75 ಕುಟುಂಬ ಈ ಸೇತುವೆ ಯನ್ನು ಅವಲಂಬಿಸಿದೆ. ಮಕ್ಕಳು ಶಾಲೆಗೆ ಹೋಗಲೂ ಇದುವೇ ದಾರಿ.