ನೋ ಹಾರ್ನ್ ಜಾಗೃತಿಗೆ ಯಶಸ್ಸು


* ಕಾಲೇಜು ವಿದ್ಯಾರ್ಥಿ, ಆಸ್ಪತ್ರೆ ರೋಗಿಗಳಿಗೆ ಒಂದಷ್ಟು ನೆಮ್ಮದಿ>

ಹರೀಶ್ ಮೋಟುಕಾನ ಮಂಗಳೂರು

ನಗರದಲ್ಲಿ ಬಸ್ ಹಾಗೂ ಇತರ ವಾಹನಗಳು ಬಳಸುತ್ತಿದ್ದ ಕರ್ಕಶ ಹಾರ್ನ್‌ಗಳ ವಿರುದ್ಧ ಪೊಲೀಸ್ ಇಲಾಖೆ, ಸಾರ್ವಜನಿಕರು ಮೂಡಿಸಿದ ಜಾಗೃತಿಗೆ ಒಂದಷ್ಟು ಯಶಸ್ಸು ಲಭಿಸಿದೆ.

ಸ್ಟೇಟ್‌ಬ್ಯಾಂಕ್, ಅಂಬೇಡ್ಕರ್ ವೃತ್ತ, ಹಂಪನಕಟ್ಟೆ ಮೊದಲಾದ ಜನನಿಬಿಡ ಪ್ರದೇಶಗಳಲ್ಲಿ ಎರಡು ತಿಂಗಳ ಹಿಂದೆ ಸಿಟಿ ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳಿಂದ ಕೇಳಿ ಬರುತ್ತಿದ್ದ ಕರ್ಕಶ ಹಾರ್ನ್ ಶಬ್ದ ಬಹಳಷ್ಟು ಕಡಿಮೆಯಾಗಿವೆ. ಇದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆಯ ರೋಗಿಗಳಿಗೆ ಒಂದಷ್ಟು ನೆಮ್ಮದಿ ಲಭಿಸಿದೆ.\

ಸಂಚಾರಿ ಪೊಲೀಸರು ನಿರಂತರವಾಗಿ ಕರ್ಕಶ ಹಾರ್ನ್ ತೆರವು ಕಾರ್ಯಾಚರಣೆ ನಡೆಸಿರುವುದು ಮತ್ತು ದಂಡ ವಿಧಿಸಿ ಎಚ್ಚರಿಕೆ ನೀಡಿರುವುದು ಕರ್ಕಶ ಹಾರ್ನ್ ಬಳಕೆ ಕಡಿಮೆಯಾಗಲು ಪ್ರಮುಖ ಕಾರಣ. ರಸ್ತೆ ಸುರಕ್ಷತಾ ಸಪ್ತಾಹದ ಸಂದರ್ಭ ನಡೆಸಿದ ಜಾಗೃತಿ, ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನೋ ಹಾರ್ನ್ ಡೇ ಕಾರ್ಯಕ್ರಮ ಯಶಸ್ಸು ಪಡೆದಿದೆ.

ಆಸ್ಪತ್ರೆ, ಶಾಲಾ ಕಾಲೇಜು ಮುಂಭಾಗದಲ್ಲಿ ಹಾರ್ನ್ ಹಾಕಬಾರದು ಎಂಬ ನಿಯಮವಿದ್ದರೂ ಹಂಪನಕಟ್ಟೆ, ಬಲ್ಮಠ ರಸ್ತೆಯಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಿ ಬಸ್ ಚಾಲಕರು ಅನವಶ್ಯಕವಾಗಿ ಕರ್ಕಶ ಹಾರ್ನ್ ಹಾಕುತ್ತಿದ್ದರು. ಇದರಿಂದ ವೆನ್ಲಾಕ್ ಆಸ್ಪತ್ರೆ ರೋಗಿಗಳು, ಹಂಪನಕಟ್ಟೆ ವಿವಿ ಹಾಗೂ ಬಲ್ಮಠ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು.

 ಹೂವಿಗೆ ಬಗ್ಗದ ಮನಸ್ಸು: ಬಲ್ಮಠ ಹೆಣ್ಣು ಮಕ್ಕಳ ಕಾಲೇಜು ಬಳಿ ಬಸ್ ತಂಗುದಾಣ ಇರುವುದರಿಂದ ಪ್ರತಿ ದಿನ ಸಾವಿರಾರು ಬಸ್‌ಗಳು ಈ ಮೂಲಕ ಸಂಚರಿಸುತ್ತವೆ. ಕರ್ಕಶ ಹಾರ್ನ್‌ಗಳಿಂದ ರೋಸಿ ಹೋದ ವಿದ್ಯಾರ್ಥಿನಿಯರು ಕೆಲವು ಸಮಯದ ಹಿಂದೆ ಚಾಲಕರಿಗೆ ಹೂವು ನೀಡಿ ಹಾರ್ನ್ ಹಾಕದಂತೆ ಮನವಿ ಮಾಡಿದ್ದರು. ಆದರೆ ಚಾಲಕರು ಅವರ ಮನವಿಗೆ ಸ್ಪಂದಿಸದೆ ಅವರ ಚಾಳಿಯನ್ನು ಮುಂದುವರಿಸಿದ್ದರು. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆಯುತ್ತಿರುವ ಪೊಲೀಸ್ ಫೋನ್‌ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕರ್ಕಶ ಹಾರ್ನ್ ಮತ್ತು ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿದ್ದವು. ಪೊಲೀಸ್ ಆಯುಕ್ತರ ಸೂಚನೆಯಂತೆ ಸಂಚಾರಿ ಎಸಿಪಿ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ನಗರದ ವಿವಿಧ ಕಡೆ ನಿರಂತರ ಕಾರ್ಯಾಚರಣೆ ನಡೆಸಿ ಕರ್ಕಶ ಹಾರ್ನ್‌ಗಳನ್ನು ಕಿತ್ತು, ದಂಡ ವಿಧಿಸಿದ್ದರು.

ನೋ ಹಾರ್ನ್ ಡೇ ಗೆ ಕೈ ಜೋಡಿಸಿ: ನಗರದಲ್ಲಿ ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟ್ರಾಫಿಕ್ ಸಮಸ್ಯೆ ತಲೆದೋರುತ್ತಿದೆ. ಆ ಕಾರಣದಿಂದ ಶಬ್ದಮಾಲಿನ್ಯವೂ ಹೆಚ್ಚಾಗುತ್ತಿದೆ. ಇದಕ್ಕಾಗಿ ಮಂಗಳೂರು ದಕ್ಷಿಣದ ಶಾಸಕರ ನೇತೃತ್ವದಲ್ಲಿ ಬುಧವಾರ ನೋ ಹಾರ್ನ್ ಡೇ ಯನ್ನು ನಡೆಸಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರು ಬೆಂಬಲ ಸೂಚಿಸಬೇಕಾಗಿದೆ. ವಾರದಲ್ಲಿ ಒಂದು ದಿನವಾದರೂ ಹಾರ್ನ್ ಹಾಕದೆ ವಾಹನದಲ್ಲಿ ಸಂಚರಿಸಿದರೆ ಶಬ್ದಮಾಲಿನ್ಯ ಕಡಿಮೆಯಾಗಬಹುದು ಎಂಬ ಕಾರಣಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅನವಶ್ಯಕವಾಗಿ ಎಲ್ಲಿಯೂ ಹಾರ್ನ್ ಬಳಸಬಾರದು ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಈ ಕಾರಣದಿಂದ ಹಾರ್ನ್‌ಗಳಿಂದಾಗಿ ಶಬ್ದಮಾಲಿನ್ಯವಾಗುತ್ತಿದೆ. ಕೆಲವು ವಾಹನ ಚಾಲಕರು ಅನಗತ್ಯವಾಗಿ ಕರ್ಕಶ ಹಾರ್ನ್ ಹಾಕುತ್ತಿದ್ದಾರೆ. ಇಂತಹವರ ವಿರುದ್ಧ ದಂಡ ಹಾಕುವ ಜತೆಗೆ, ಅವುಗಳನ್ನು ತೆರವುಗೊಳಿಸಿ ಜನರಲ್ಲಿ ಶಬ್ದಮಾಲಿನ್ಯದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜಾಗೃತಿ ಹಾಗೂ ಕಾನೂನು ಕ್ರಮ ಯಶಸ್ಸು ಪಡೆಯುತ್ತಿದೆ.
ಮಂಜುನಾಥ್ ಶೆಟ್ಟಿ ಎಸಿಪಿ, ಸಂಚಾರ ವಿಭಾಗ, ಮಂಗಳೂರು

Leave a Reply

Your email address will not be published. Required fields are marked *