More

  ವಿಶೇಷ ವರ್ಗಕ್ಕಿಲ್ಲ ಸೂರು; ಅನುದಾನ ಕೊರತೆಯಿಂದ 1,286 ಕುಟುಂಬಗಳಿಗೆ ಸಿಕ್ಕಿಲ್ಲ ಮನೆ  

  ರಾಜ್ಯದಲ್ಲಿರುವ ಅಂಗವಿಕಲರು, ಎಚ್​ಐವಿ ಸೋಂಕಿತರು, ದೇವದಾಸಿಯರು, ತೃತೀಯ ಲಿಂಗಿಗಳು ಹಾಗೂ ಅಲೆಮಾರಿ ಜನಾಂಗದವರಿಗೆ ಸೂರು ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮನೆ ನಿರ್ವಿುಸಿಕೊಡಲು ಫಲಾನುಭವಿಗಳ ಆಯ್ಕೆ ಪಟ್ಟಿ ಸಿದ್ಧವಾಗಿದ್ದರೂ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬ ವಾಗಿರುವ ಹಿನ್ನೆಲೆ ನಿರ್ಮಾಣ ಕಾಮಗಾರಿ ಇನ್ನೂ ಶುರುವಾಗಿಲ್ಲ.

  ದೇವರಾಜು ಅರಸು ವಸತಿ ಯೋಜನೆಯಲ್ಲಿ ಅನುದಾನ ಕಲ್ಪಿಸಲು ವಿಶೇಷ ವರ್ಗಕ್ಕೆ ಸೇರಿದ 67,570 ಕುಟುಂಬಗಳನ್ನು 5 ವರ್ಷಗಳ ಅವಧಿಯಲ್ಲಿ ಆಯ್ಕೆ ಮಾಡಲಾಗಿದೆ. 40,162 ಕುಟುಂಬಗಳಿಗಾಗಿ ಹಣ ಬಿಡುಗಡೆಯೂ ಆಗಿದೆ. ಉಳಿದ 11,286 ಕುಟುಂಬಗಳಿಗೆ ಅನುದಾನ ನೀಡದ ಹಿನ್ನೆಲೆ ಮನೆ ನಿರ್ಮಾಣ ಕೆಲಸ ಈವರೆಗೂ ಆರಂಭವಾಗಿಲ್ಲ. ಫಲಾನುಭವಿಗಳ ಸಂಖ್ಯೆ ಕಡಿಮೆಯಿದ್ದರೂ ನಿಗದಿತ ಸಮಯಕ್ಕೆ ಯೋಜನೆ ಪೂರ್ಣಗೊಂಡಿಲ್ಲ.

  1.20 ಲಕ್ಷ ರೂ. ಅನುದಾನ: ಈ ವರ್ಗದಲ್ಲಿ ಸ್ವಂತ ಮನೆ ಹೊಂದದೆ ಇರುವವರನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆಯ್ಕೆ ಮಾಡಲಾಗುತ್ತದೆ. ನಂತರ ಫಲಾನುಭವಿಗಳಿಗೆ ಹಂತ ಹಂತವಾಗಿ 1.20 ಲಕ್ಷ ರೂ. ಅನ್ನು ರಾಜ್ಯ ಸರ್ಕಾರ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ.

  ಆದರೆ, ಫಲಾನುಭವಿಗಳ ಆಯ್ಕೆ, ಅನುದಾನ ಬಿಡುಗಡೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ವಿಶೇಷ ಅಂಚಿನಲ್ಲಿರುವ ವಿಶೇಷ ವರ್ಗದ ಜನಾಂಗದವರಿಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿರುವ ಫಲಾನುಭವಿಗಳೇ ಹೆಚ್ಚಾಗಿದ್ದು, ನಗರ ಪ್ರದೇಶದವರ ಸಂಖ್ಯೆ ವಿರಳವಾಗಿದೆ.

  ವಿಶೇಷ ಸವಲತ್ತುಗಳು: ಎಲ್ಲ ಸ್ಥಳೀಯ ಸಂಸ್ಥೆಗಳ ಅರ್ಹ ವಸತಿ ರಹಿತರ ಪಟ್ಟಿ ಕ್ರೋಡಿಕರಿಸಿ, ಜಿಲ್ಲಾ ಸಮಿತಿಯಲ್ಲಿ ಅನುಮೋದಿಸಿ ನಿಗಮಕ್ಕೆ ಪ್ರಸ್ತಾವನೆ ಕಳಿಸಲಾಗುತ್ತದೆ. ವಸತಿ ರಹಿತರು ನಿವೇಶನ ರಹಿತರಾಗಿದ್ದಲ್ಲಿ ಸೂಕ್ತವಾದ ಸರ್ಕಾರಿ ಅಥವಾ ಖಾಸಗಿ ಜಮೀನು ನೀಡಲಾಗುತ್ತದೆ. ಜಿಲ್ಲಾ ಸಮಿತಿಯಿಂದ ಸ್ವೀಕೃತವಾದ ಫಲಾನುಭವಿಗಳ ಮಾಹಿತಿಯನ್ನು ಸ್ಥಳೀಯ ಸಂಸ್ಥೆಗಳು ಆನ್​ಲೈನ್​ನಲ್ಲಿ ನಮೂದಿಸಿದರೆ ಇತರ ವಸತಿ ಯೋಜನೆಗಳಂತೆ ಅನುಷ್ಠಾನಗೊಳಿಸಲಾಗುತ್ತದೆ.

  ಮಧ್ಯವರ್ತಿಗಳ ಹಾವಳಿ

  ಸರ್ಕಾರದಿಂದ ಜಾರಿಯಾದ ಹಲವಾರು ಯೋಜನೆಗಳಲ್ಲಿ ಅನುದಾನ ಪಡೆಯಲು ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ದೇವರಾಜು ಅರಸು ವಸತಿ ಯೋಜನೆಯಲ್ಲೂ ಮಧ್ಯವರ್ತಿಗಳ ಹಾವಳಿ ಜೋರಾಗಿದೆ ಎಂಬ ಆರೋಪ ಕೇಳಿಬಂದಿದೆ. ಫಲಾನುಭವಿಗಳಿಂದ ಮಧ್ಯವರ್ತಿಗಳು ಅಕ್ರಮವಾಗಿ ಹಣ ಪಡೆದು, ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದ ಬಳಿಕ ಅನುದಾನ ಬಿಡುಗಡೆಯಾಗುತ್ತದೆ. ಮಧ್ಯವರ್ತಿಗಳಿಗೆ ಇಂತಿಷ್ಟು ಹಣ ನೀಡದಿದ್ದರೆ, ಫಲಾನುಭವಿಗಳಿಗೆ ಅನುದಾನ ಸಿಗುವಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

  ಫಲಾನುಭವಿಗಳು ಯಾರ್ಯಾರು? 

  ರಸ್ತೆಬದಿ, ಅಂಗಡಿಗಳ ಜಗುಲಿಯಲ್ಲಿ ಮಲಗುವ ನಿರ್ಗತಿಕರು, ಅಂಗವಿಕಲರು, ಕುಷ್ಠ ರೋಗದಿಂದ ಗುಣಮುಖರಾದವರು, ಎಚ್​ಐವಿ ಸೋಂಕಿತರು, ತೃತೀಯ ಲಿಂಗಿಗಳು, ಲೈಂಗಿಕ ಕಾರ್ಯಕರ್ತೆಯರು, ದೇವದಾಸಿಯರು, ವಿಧವೆಯರು, ಜೀತಮುಕ್ತರು, ಸಫಾಯಿ ಕರ್ಮಚಾರಿಗಳು, ದೌರ್ಜನ್ಯಕ್ಕೊಳಗಾದವರು, ಮತೀಯ ಗಲಭೆ ಹಾಗೂ ಚಳವಳಿಗಳಿಂದ ಹಾನಿಗೊಳಗಾದವರು, ತಾತ್ಕಾಲಿಕ ಟೆಂಟ್​ಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರು, ವಿಶೇಷ ವೃತ್ತಿಪರ ಗುಂಪುಗಳಾದ ಹಮಾಲರು, ನೇಕಾರರು, ಕುಶಲಕರ್ವಿುಗಳು ಸೇರಿ ಒಟ್ಟು 14 ವರ್ಗಗಳ ಜನಾಂಗದವರಿಗೆ ಈ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಲು ಪ್ರಾಮುಖ್ಯತೆ ನೀಡಲಾಗಿದೆ.

  ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರ ಹಂತ-ಹಂತವಾಗಿ ಅನುದಾನ ಜಮಾ ಮಾಡುತ್ತದೆ. ಈ ಯೋಜನೆಯಿಂದ ವಿಶೇಷ ವರ್ಗದ ಹಲವು ಜನರಿಗೆ ಅನುಕೂಲಗಳಾಗಿದೆ.

  | ಡಾ.ವಿ.ರಾಮ್​ ಪ್ರಸಾಥ್ ಮನೋಹರ್ ಎಂಡಿ, ರಾಜೀವ್​ಗಾಂಧಿ ವಸತಿ ನಿಗಮ ನಿಯಮಿತ  

  |ಅವಿನಾಶ ಮೂಡಂಬಿಕಾನ ಬೆಂಗಳೂರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts