ಇಮ್ರಾನ್‌ ಖಾನ್‌ ಪದಗ್ರಹಣಕ್ಕೆ ನರೇಂದ್ರ ಮೋದಿಗಿಲ್ಲ ಆಹ್ವಾನ!

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಯಾವುದೇ ವಿದೇಶಿ ನಾಯಕರನ್ನು ಆಹ್ವಾನಿಸಿಲ್ಲ ಎಂದು ಪಾಕಿಸ್ತಾನ ತಿಳಿಸಿದೆ.

ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಇಮ್ರಾನ್‌ ಖಾನ್‌ ಅವರ ತೆಹ್ರೀಕ್‌ ಇ ಇನ್ಸಾಫ್‌(PTI) ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಹುಮತ ದೊರೆತಿಲ್ಲವಾದ್ದರಿಂದ ಸಮ್ಮಿಶ್ರ ಸರ್ಕಾರದ ರಚನೆಯ ಕಸರತ್ತಿನಲ್ಲಿ ತೊಡಗಿದೆ.

ಈ ಮೊದಲು ಸಾರ್ಕ್‌ ದೇಶಗಳ ನಾಯಕರನ್ನು ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ ಎಂಬ ಊಹಾಪೋಹ ಎದ್ದಿತ್ತು. ಸದ್ಯ ವಿದೇಶಿ ನಾಯಕರನ್ನು ಆಹ್ವಾನಿಸುವುದಿಲ್ಲ ಎಂಬ ಬೆನ್ನಲ್ಲೇ ಪ್ರಧಾನಿ ಮೋದಿ ಭಾಗವಹಿಸುತ್ತಾರೆ ಎಂಬ ಊಹಾಪೋಹಕ್ಕೂ ತೆರೆಬಿದ್ದಿದೆ.

ಪಿಟಿಐ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಇಮ್ರಾನ್‌ ಖಾನ್‌ ಅವರನ್ನು ಅಭಿನಂದಿಸಿದ್ದರು. ಪಾಕಿಸ್ತಾನ ಮತ್ತು ಭಾರತದ ದ್ವಿಪಕ್ಷೀಯ ಸಂಬಂಧದ ಹೊಸ ಅಧ್ಯಾಯ ತೆರೆಯಲು ಕಾರ್ಯನಿರ್ವಹಿಸುವುದಾಗಿ ಹೇಳಿದ್ದರು. ಇಮ್ರಾನ್‌ ಖಾನ್‌ ಕೂಡ ಜಯದ ನಂತರ ಮಾತನಾಡಿ, ಭಾರತ ಮತ್ತು ಪಾಕ್‌ ಸಂಬಂಧ ಉತ್ತಮಗೊಳ್ಳುವಂತೆ ಮಾಡುವ ಮಾತುಗಳನ್ನಾಡಿದ್ದರು.

ಆಗಸ್ಟ್‌ 11ರಂದು ನಡೆಯುವ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾರತೀಯ ನಟ ಅಮೀರ್‌ ಖಾನ್‌, ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌, ಕಪಿಲ್‌ ದೇವ್‌ ಮತ್ತು ನವಜೋತ್‌ ಸಿಂಗ್‌ ಸಿಧು ಅವರನ್ನು ಆಹ್ವಾನಿಸಿದ್ದಾರೆ. (ಏಜೆನ್ಸೀಸ್)