ರಾಜಧಾನಿಯಲ್ಲಿ ಪಾದಚಾರಿಗಳಿಗಿಲ್ಲ ದಾರಿ!

ಬೆಂಗಳೂರು: ರೊಯ್ಯನೆ ಹೋಗುವ ಬೈಕ್​ಗಳು, ಕಿತ್ತುಹೋದ ಸ್ಲ್ಯಾಬ್​ಗಳು, ಬಲಿಗಾಗಿ ಕಾದಿರುವ ಚರಂಡಿಗಳು, ಹೆಜ್ಜೆಯಿಡದಂತೆ ಹರಡಿರುವ ತ್ಯಾಜ್ಯ, ಓಡಾಡುವ ಜಾಗದಲ್ಲಿ ತಲೆಎತ್ತಿದ ಅಂಗಡಿ, ಅದರ ಮುಂದೆ ಒಂದಷ್ಟು ಸಾಮಾನು, ಹಲವು ವರ್ಷಗಳಿಂದ ನಿಂತಲ್ಲೇ ನಿಂತು ತುಕ್ಕು ಹಿಡಿದಿರುವ ವಾಹನಗಳು…!

ಇದು ರಾಜಧಾನಿ ಫುಟ್​ಪಾತ್​ಗಳ ಸ್ಥಿತಿಗತಿ. ಪಾದಚಾರಿಗಳ ಓಡಾಟಕ್ಕೆ ಮೀಸಲಾಗಿರುವ ಮಾರ್ಗಗಳು ಬೈಕ್ ಸಂಚಾರ, ವಾಣಿಜ್ಯ ಚಟುವಟಿಕೆಗೆ, ಕಸದ ರಾಶಿ ಸುರಿಯಲು, ಹಳೇ ವಾಹನಗಳನ್ನು ನಿಲ್ಲಿಸುವ ತಾಣಗಳಾಗಿವೆ. ಇನ್ನುಳಿದ ಫುಟ್​ಪಾತ್​ಗಳು ರಸ್ತೆ ವಿಸ್ತರಣೆ, ಜಲಮಂಡಳಿ, ವೈಟ್​ಟಾಪಿಂಗ್, ಬೆಸ್ಕಾಂ ಕಾಮಗಾರಿಗಳು ನುಂಗಿಕೊಂಡಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಸಿಲಿಕಾನ್ ಸಿಟಿಯಲ್ಲಿ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದೆ. ನಗರದ ಶೇ.70 ಫುಟ್​ಪಾತ್​ಗಳು ಒತ್ತುವರಿಯಾಗಿವೆ ಎಂಬುದು ಅಂದಾಜು. ಒತ್ತುವರಿ ತೆರವು ಮಾಡಿ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕಾದ ಸಂಚಾರ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಏನೂ ಮಾಡ ಲಾಗದೆ ಕಣ್ಮುಚ್ಚಿ ಕುಳಿತಿದ್ದಾರೆ.

ಮೈಸೂರು ರಸ್ತೆ, ಮಾಗಡಿ ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ವೈಟ್​ಟಾಪಿಂಗ್ ಮತ್ತು ರಸ್ತೆ ವಿಸ್ತರಣೆ ಹಿನ್ನೆಲೆ ಫುಟ್​ಪಾತ್ ಕಿರಿದಾಗಿದೆ. ಇದರ ಜತೆಗೆ, ಕಾಮಗಾರಿ ಬಳಿಕ ಅಳಿದುಳಿದ ಅವಶೇಷಗಳನ್ನು ಫುಟ್​ಪಾತ್ ಮೇಲೆ ಎಸೆದು ಮತ್ತಷ್ಟು ಅಡ್ಡಿಪಡಿಸುತ್ತಿದ್ದಾರೆ. ಮೈಸೂರು ರಸ್ತೆ ಇದಕ್ಕೆ ಸೂಕ್ತ ಉದಾಹರಣೆ.

ಬಡಾವಣೆ ಮತ್ತು ವಸತಿ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಂಗಡಿಗಳು ಮತ್ತು ವಾಹನಗಳು ಅತಿಕ್ರಮಿಸಿವೆ. ರ್ಪಾಂಗ್​ಗೆ ಜಾಗ ಇಲ್ಲದೆ ಮನೆ ಮುಂದೆ, ರಸ್ತೆಬದಿ ವಾಹನ ನಿಲ್ಲಿಸುತ್ತಿರುವುದು ಎಲ್ಲೆಡೆ ನೋಡಬಹುದು. ಇನ್ನು, ವಾಣಿಜ್ಯ ಪ್ರದೇಶಗಳಲ್ಲಿ ಅಂಗಡಿ ಮತ್ತು ಮಳಿಗೆಗಳ ಮಾಲೀಕರು ಫುಟ್​ಪಾತ್ ಮೇಲೆ ವಸ್ತುಗಳನ್ನು ಇಟ್ಟು ತೊಂದರೆ ಕೊಡುತ್ತಿದ್ದಾರೆ. ಇದರಿಂದ ಪಾದಚಾರಿಗಳು ಕೇವಲ 500 ಮೀಟರ್ ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ.

ಇದು ಫುಟ್​ಪಾತ್​ವಿದ್ದ ಕಡೆಗಳ ಕಥೆಯಾದರೆ ಇನ್ನು ಚರಂಡಿಗಳ ಮೇಲೆಯೇ ಪಾದಚಾರಿ ಮಾರ್ಗವಿರುವುದು ಮತ್ತೊಂದು ವ್ಯಥೆ. ಚರಂಡಿ ಮೇಲೆ ಸ್ಲಾ್ಯಬ್ ಅಥವಾ ಚಪ್ಪಡಿ ಮುಚ್ಚಿಲ್ಲ. ಇವು ಮೃತ್ಯುಕೂಪವಾಗಿ ಪರಿಣಮಿಸಿವೆ. ಮಳೆಗಾಲದಲ್ಲಿ ಇಂತಹ ಫುಟ್​ಪಾತ್​ಗಳು ಅಮಾಯಕರ ಜೀವ ತೆಗೆದಿರುವ ಹಲವು ಉದಾಹರಣೆಗಳು ನಗರದಲ್ಲಿ ಇವೆ.

ಪೊಲೀಸರಿಗೂ ಜಗ್ಗದ ಜನ

ಪಾದಚಾರಿ ಮಾರ್ಗದಲ್ಲಿ ಬೈಕ್ ಓಡಿಸುವವರ, ಅಂಗಡಿ ಇಟ್ಟು ಕೊಂಡವರ ವಿರುದ್ಧ ಪೊಲೀಸರು ಕೇಸ್ ದಾಖಲಿಸುತ್ತಿದ್ದಾರೆ. ಫುಟ್​ಪಾತ್ ಮೇಲೆ ವಾಹನ ಚಲಾಯಿಸಿದರೆ ದಂಡ ವಸೂಲಿ ಮಾಡಲಾಗುತ್ತದೆ. ಅತಿಕ್ರಮ ಪ್ರವೇಶ ಮಾಡಿರುವರ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ. ಇದ್ಯಾವುದಕ್ಕೂ ಜನರು ಜಗ್ಗುತ್ತಿಲ್ಲ. ಒಂದೆಡೆೆಯಿಂದ ಪಾದಚಾರಿ ತೆರವು ನಡೆಸಿದರೆ ಮತ್ತೊಂದು ಕಡೆಯಿಂದ ಎಂದಿನಂತೆ ವ್ಯಾಪಾರಕ್ಕೆ ಮುಂದಾಗುತ್ತಿರುವುದು ಕಾಣಬಹುದಾಗಿದೆ.

ನಿರ್ವಹಣೆಯಲ್ಲಿ ವಿಫಲ

ಪಾದಚಾರಿಗೆ ಸುರಕ್ಷಿತ ಫುಟ್​ಪಾತ್ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಬಿಬಿಎಂಪಿಗೆ ಸೇರಿದೆ. ಪ್ರತಿವರ್ಷ ಟೆಂಡರ್ ಕರೆದು ಫುಟ್​ಪಾತ್ ನವೀಕರಣ ಮಾಡಬೇಕು. ಜತೆಗೆ ಅತಿಕ್ರಮ ಪ್ರವೇಶ ಮಾಡಿರುವ ಅಂಗಡಿ, ಮಳಿಗೆ, ಕಾಂಪೌಂಡ್​ಗಳನ್ನು ತೆರವು ಮಾಡಬೇಕು. ಆದರೆ, ಪಾಲಿಕೆ ಅಧಿಕಾರಿಗಳು ಬೇಕಾಬಿಟ್ಟಿ ತೆರವು ಮಾಡುವುದರಿಂದ ಫುಟ್​ಪಾತ್ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ.

ಪಾದಚಾರಿಗೆ ಸುರಕ್ಷತೆ

ವಾಹನ ಸಂಚಾರಕ್ಕೆ ಸುರಕ್ಷಿತ ರಸ್ತೆ ಎಷ್ಟು ಮುಖ್ಯವೋ ಅಷ್ಟೇ ಪ್ರಧಾನ ಪಾದಚಾರಿ ಮಾರ್ಗ. ಜನರಿಗೆ ಓಡಾಡಲು ಫುಟ್​ಪಾತ್ ಇಲ್ಲದಿದ್ದರೆ ರಸ್ತೆಗಿಳಿದು ವಾಹನಕ್ಕೆ ಬಲಿ ಆಗುತ್ತಾರೆ. ಜತೆಗೆ ಸಂಚಾರ ದಟ್ಟಣೆಗೂ ಕಾರಣ ಆಗುತ್ತಾರೆ.

ಫೋಟೋ ತೆಗೆದು ನಮಗೆ ಕಳುಹಿಸಿ

ನಿಮ್ಮ ಏರಿಯಾ, ಮನೆ ಸುತ್ತಮುತ್ತ, ನೀವು ಓಡಾಡುವ ಜಾಗಗಳಲ್ಲಿ ಫುಟ್​ಪಾತ್ ಒತ್ತುವರಿಯಾಗಿ ಪಾದಚಾರಿಗಳು ಓಡಾಡಲು ಸ್ಥಳವಿಲ್ಲದಿರುವುದು ಕಂಡುಬಂದರೆ ನಿಮ್ಮ ಮೊಬೈಲ್​ನಲ್ಲೇ ಫೋಟೋ ತೆಗೆದು ವಿವರದೊಂದಿಗೆ ದೂ: 8884432666 ಸಂಖ್ಯೆಗೆ ವಾಟ್ಸ್​ಆಪ್ ಮಾಡಿ ಅಥವಾ ಡಜ್ಜಿಚಢಚಡಚ್ಞಜ್ಞಿಛಿಡಿಠಃಜಞಚಜ್ಝಿ.ಟಞ ಗೆ ಮೇಲ್ ಮಾಡಿ. ನೀವು ಕಳುಹಿಸಿದ ಫೋಟೋವನ್ನು ಸಂಚಾರ ಪೊ ಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು. 

Leave a Reply

Your email address will not be published. Required fields are marked *