ಅರ್ಬಿಕೋಡಿ ಜಲಪಾತದಲ್ಲಿ ಸೌಕರ್ಯ ಕೊರತೆ

ಗೋಪಾಲಕೃಷ್ಣ ಪಾದೂರು ಉಡುಪಿ
ಮಳೆಗಾಲದಲ್ಲಿ ವಾರಾಂತ್ಯ ಪ್ರವಾಸಕ್ಕೆ ಪ್ರಶಸ್ತ ಸ್ಥಳವಾದ ಮಣಿಪಾಲ ಅರ್ಬಿಕೋಡಿ ಮಿನಿ ಜಲಪಾತ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸುವ ಅಗತ್ಯವಿದೆ.
ಶಿಕ್ಷಣ ನಗರಿ ಮಣಿಪಾಲದಿಂದ ಕೇವಲ ಎರಡು ಕಿಲೋ ಮೀಟರ್ ದೂರದಲ್ಲಿರುವ ಅರ್ಬಿ ಜಲಪಾತ ನಿಸರ್ಗ ಮಧ್ಯ ಮಳೆಯ ನೀರಿನಿಂದ ಸೃಷ್ಟಿಯಾಗುತ್ತದೆ. ಜೂನ್‌ನಿಂದ ಸೆಪ್ಟಂಬರ್‌ವರೆಗೆ ಪ್ರಕೃತಿಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಹಚ್ಚ ಹಸಿರಿನ ರಮಣೀಯ ಬೆಟ್ಟ ಗುಡ್ಡಗಳ ಸಮೃದ್ಧ ವನರಾಶಿ ನಡುವೆ ಇರುವ ಜಲಪಾತದ ಸೌಂದರ್ಯ ಸವಿಯಲು ಮಳೆಗಾಲದಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ವಾರಾಂತ್ಯದಲ್ಲಿ 200ಕ್ಕೂ ಅಧಿಕ ಜನ ಭೇಟಿ ನೀಡುತ್ತಾರೆ.

ಬಂಡೆಕಲ್ಲು ನೀರಿನ ಒರತೆ: ಬಂಡೆಕಲ್ಲುಗಳ ನಡುವಿನಿಂದ ಹರಿದು ಬರುವ ನೀರಿನ ಒರತೆಯೇ ಈ ಜಲಪಾತದ ಮೂಲ. ಮಳೆಗಾಲ ಆರಂಭದಿಂದ ಅಕ್ಟೋಬರ್‌ವರೆಗೆ ಉಕ್ಕಿ ಹರಿಯುತ್ತದೆ. ಅನಂತರ ನೀರಿನ ಭೋರ್ಗರೆತ ಸ್ವಲ್ಪ ಕಡಿಮೆಯಾಗಿ ಫೆಬ್ರವರಿಯಲ್ಲಿ ನೀರಿನ ಹರಿಯುವಿಕೆ ಸಂಪೂರ್ಣ ಕಡಿಮೆಯಾಗುತ್ತದೆ.
ಎಲ್ಲ ವಯೋಮಿತಿಯವರಿಗೂ ಆಕರ್ಷಕ

ಜಲಪಾತದ ಬಳಿ ಮೈಮರೆತರೆ ಅಪಾಯ ಸಹಜ. ಆದರೆ ಮಣಿಪಾಲ ಅರ್ಬಿಕೋಡಿ ಮಿನಿ ಜಲಪಾತ ಮಾತ್ರ ಇದಕ್ಕೆ ತದ್ವಿರುದ್ಧ. ನೀರು ನೆಲ ಮಟ್ಟದಲ್ಲಿ ಹರಿದು ಬರುವುದರಿಂದ ಪ್ರಾಣಾಪಾಯವಿಲ್ಲ. ಕಡಿಮೆ ಎತ್ತರದಿಂದ ಬೀಳುವ ನೀರಿನ ಚಂದ ಸವಿಯಬಹುದು. ಸ್ವಲ್ಪ ಜಾಗರೂಕತೆಯಿಂದ ಹೆಜ್ಜೆಯಿಡಬೇಕು. ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗಿನವರು ಪ್ರತಿ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.
ಮಣಿಪಾಲದಿಂದ ಅಲೆವೂರು ಮಾರ್ಗವಾಗಿ ಎರಡು ಕಿ.ಮೀ ಸಾಗಿದರೆ ದಶರಥನಗರ ಸಿಗುತ್ತದೆ. ಅಲ್ಲಿಂದ ಕೆಳಗಡೆ ಇರುವ ವೈಷ್ಣವಿ ದುರ್ಗಾ ದೇವಸ್ಥಾನ ಮಾರ್ಗವಾಗಿ ಒಂದು ಕಿ.ಮೀ. ಸಾಗಿದರೆ ದೇವಸ್ಥಾನದ ಪಕ್ಕದಲ್ಲೇ ಜಲಪಾತವಿದೆ. ಶ್ರೀ ಬ್ರಹ್ಮ ರಾಮೇಶ್ವರ ಭಜನಾ ಮಂದಿರದ ಹಿಂಭಾಗದ ಗುಡ್ಡದಿಂದ ಈ ಜಲಪಾತ ಹರಿಯುತ್ತದೆ.

ಕಾಡುತ್ತಿದೆ ಸ್ವಚ್ಛತೆ ಕೊರತೆ: ಹೆಚ್ಚು ಅಪಾಯಕಾರಿಯಲ್ಲದ ಜಲಪಾತ ಪಕ್ಕದಲ್ಲೇ ವೈಷ್ಣವಿದುರ್ಗಾ ದೇವಸ್ಥಾನ ಇದೆ. ಭಕ್ತರು ದೇವರ ದರ್ಶನ ಪಡೆದು ಈ ಜಲಪಾತದ ಸೊಬಗು ಸವಿಯುತ್ತಾರೆ. ಅರ್ಬಿ ಜಲಪಾತದಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಕಸದ ರಾಶಿ ತುಂಬಿಕೊಂಡು ಜಲಪಾತದ ಅಂದಗೆಡುತ್ತಿದೆ. ದೂರದ ಊರುಗಳಿಂದ ಬರುವ ಪ್ರವಾಸಿಗರು ಮಧ್ಯ ಸೇವಿಸಿದ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನೇರವಾಗಿ ನೀರಿಗೆ ಎಸೆಯತ್ತಿದ್ದಾರೆ. ಹೀಗೆ ಮುಂದುವರಿದರೆ ಇನ್ನೂ ಕೆಲವು ವರ್ಷದಲ್ಲಿ ಅರ್ಬಿಕೋಡಿ ಜಲಪಾತ ಪ್ಲಾಸ್ಟಿಕ್ ತ್ಯಾಜ್ಯ ಜಲಪಾತವಾಗಿ ಮಾರ್ಪಾಡಾಗಲಿದೆ.

ಗಮನ ಹರಿಸಬೇಕು ಜಿಲ್ಲಾಡಳಿತ: ಜಲಪಾತ ಸ್ಥಳಕ್ಕೆ ತಲುಪಲು ಉತ್ತಮ ರಸ್ತೆಗಳಿವೆ. ಆದರೆ ಇಲ್ಲಿಗೆ ಬರುವವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ವ್ಯವಸ್ಥೆಯಿಲ್ಲ. ಜಿಲ್ಲಾಡಳಿತ ಮನಸ್ಸು ಮಾಡಿದರೆ ಈ ಪ್ರದೇಶ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಪರಿವರ್ತನೆ ಮಾಡಬಹುದು. ಪ್ರೇಮಿಗಳು ಈ ಪ್ರದೇಶದಲ್ಲಿ ಅತಿರೇಕದಿಂದ ವರ್ತಿಸಿ ಬಂದಿರುವ ಪ್ರವಾಸಿಗರಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಅರ್ಬಿ ಜಲಪಾತ ಅನೈತಿಕ ಚಟುವಟಿಕಗಳ ತಾಣವಾಗಲಿದೆ ಎಂಬ ಆತಂಕ ಸ್ಥಳೀಯರಲ್ಲಿದೆ. ಈ ನಿಟ್ಟಿನಲ್ಲಿ ಮಳೆಗಾಲದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ.

Leave a Reply

Your email address will not be published. Required fields are marked *