ಸೌಲಭ್ಯ ವಂಚಿತ ಸಾಂತ್ವನ ಕೇಂದ್ರ

ಗೋಪಾಲಕೃಷ್ಣ ಪಾದೂರು
ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದಡಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಸ್ವಂತ ಸೂರಿಲ್ಲದೆ ಸೌಲಭ್ಯಗಳಿಂದ ವಂಚಿತವಾಗಿದ್ದು, ಹಳೇ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ 2001ರಲ್ಲಿ ಸಾಂತ್ವನ ಯೋಜನೆ ಜಾರಿಗೆ ತಂದಿದ್ದು, ದೌರ್ಜನ್ಯಕ್ಕೆ ಮಹಿಳೆಯರಿಗೆ ಕಾನೂನು ಸಲಹೆ, ಆರ್ಥಿಕ ಪರಿಹಾರ, ತಾತ್ಕಾಲಿಕ ಆಶ್ರಯ ರಕ್ಷಣೆ ನೀಡುವುದರ ಜತೆಗೆ ಸ್ವ ಉದ್ಯೋಗಕ್ಕೆ ತರಬೇತಿ ನೀಡುವುದು ಸಾಂತ್ವನ ಯೋಜನೆಯ ಮುಖ್ಯ ಉದ್ದೇಶ. ಆದರೆ ಉಡುಪಿ ಸಾಂತ್ವನ ಕೇಂದ್ರ ಮಾತ್ರ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿದೆ.

ಉಡುಪಿಯಲ್ಲಿದ್ದ ಜಿಲ್ಲಾಧಿಕಾರಿ ಕಚೇರಿ ಮಣಿಪಾಲಕ್ಕೆ ವರ್ಗವಾದ ಬಳಿಕ 2008ರಿಂದ ಜಿಲ್ಲಾ ನ್ಯಾಯಾಲಯ ಸಮೀಪ ಹಳೇ ಸಣ್ಣ ಹೆಂಚಿನ ಕಟ್ಟಡದಲ್ಲಿ ಸಾಂತ್ವನ ಕೇಂದ್ರ ಕಾರ್ಯಾಚರಿಸುತ್ತಿದ್ದು, 2010ರಲ್ಲಿ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಮಹಿಳಾ ಮಂಡಳಿ ನಗರದಲ್ಲಿ 3 ಸೆಂಟ್ಸ್ ಜಾಗ ಒದಗಿಸುವಂತೆ ಪ್ರಸ್ತಾವನೆ ಕಳುಹಿಸಿದ್ದು, ಇದುವರೆಗೆ ಮಂಜೂರಾತಿ ದೊರೆತಿಲ್ಲ. 2014ರಲ್ಲಿ ಕಾರ್ಕಳ ಮತ್ತು ಕುಂದಾಪುರದ ಸಾಂತ್ವನ ಕೇಂದ್ರಗಳು ಪ್ರಾರಂಭವಾಗಿದ್ದು, ಸುಸಜ್ಜಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಉಡುಪಿ ಕೇಂದ್ರಕ್ಕೆ ಮಾತ್ರ ಈ ಭಾಗ್ಯ ಲಭಿಸಿಲ್ಲ.

ಅಲ್ಪಾವಧಿ ವಸತಿಗೃಹ: ತುರ್ತು ಕಾರಣಗಳಿಗಾಗಿ ಮಹಿಳೆಯರಿಗೆ ತಾತ್ಕಾಲಿಕ ನೆರವು ನೀಡಲು ಅಲ್ಪಾವಧಿ ವಸತಿಗೃಹ ಅಗತ್ಯವಿದ್ದು, ಈಗಿರುವ ಕೇಂದ್ರದಲ್ಲಿ ಯಾವುದೇ ಸೌಲಭ್ಯವಿಲ್ಲ. ಮಹಿಳಾ ಮಂಡಳಿ ಪ್ರಸ್ತಾವನೆಯಲ್ಲಿ ಮಂಡಳಿ ಕಚೇರಿ, ಕೌನ್ಸೆಲಿಂಗ್ ಸೆಂಟರ್, ಅಲ್ಪಾವಧಿ ವಸತಿ ಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಜಾಗ ಮಂಜೂರಾಗದೆ ಎಲ್ಲವೂ ನನೆಗುದಿಗೆ ಬಿದ್ದಿದೆ.
18ರಿಂದ 60 ವರ್ಷದೊಳಗಿನ ಮಹಿಳೆಯರನ್ನು ನಿಟ್ಟೂರಿನ ಸ್ಟೇಟ್ ಹೋಂ, ಸಖಿ ಕೇಂದ್ರಕ್ಕೆ ದಾಖಲಿಸಬಹುದು. ಮಕ್ಕಳನ್ನು ಬಾಲ ಮಂದಿರಕ್ಕೆ ಸೇರಿಸಬಹುದು. ಆದರೆ ಜಿಲ್ಲೆಯಲ್ಲಿ ವೃದ್ಧರಿಗೆ ಮತ್ತು ಮಾನಸಿಕ ಅಸ್ವಸ್ಥರಿಗೆ ಪುನರ್ವಸತಿ ಕಲ್ಪಿಸಲು ಪರ್ಯಾಯ ಮಾರ್ಗೋಪಾಯಗಳು ಇಲ್ಲದಿರುವುದು ಖೇದಕರ ಎನ್ನುತ್ತಾರೆ ನಾಗರಿಕ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಒಳಕಾಡು.

 1794 ಪ್ರಕರಣಗಳು: 2002ರಿಂದ ಉಡುಪಿಯಲ್ಲಿ ಪ್ರಾರಂಭವಾದ ಸಾಂತ್ವನ ಕೇಂದ್ರದಲ್ಲಿ ಈವರೆಗೆ 1794 ಪ್ರಕರಣಗಳು ದಾಖಲಾಗಿದ್ದು, 1675 ಪ್ರಕರಣಗಳು ಇತ್ಯರ್ಥವಾಗಿವೆ. 119 ಪ್ರಕರಣ ವಿಚಾರಣೆ ಹಂತದಲ್ಲಿದೆ. ಮಹಿಳಾ ದೌರ್ಜನ್ಯ ಕೇಸುಗಳನ್ನು ನಿಭಾಯಿಸಲು ಸಹಾಯವಾಣಿಯಲ್ಲಿ 3 ಮಂದಿ ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ 4 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಂಚಾಂಗದಲ್ಲೇ ನಿಂತ ಮಹಿಳಾ ವಸತಿಗೃಹ: ಸಾಂತ್ವನ ಯೋಜನೆಯಡಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ 4 ಸಾವಿರ ಚದರಡಿ ನಿವೇಶನದಲ್ಲಿ ಉದ್ಯೋಗಸ್ಥ ಮಹಿಳಾ ವಸತಿಗೃಹ ನಿರ್ಮಿಸಲು ನೋಂದಾಯಿತ ಖಾಸಗಿ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳಿಗೆ 25 ಲಕ್ಷ ರೂ. ನೆರವನ್ನು ರಾಜ್ಯ ಸರ್ಕಾರ ಒದಗಿಸುತ್ತದೆ. ಆದರೆ ಕಟಪಾಡಿಯಲ್ಲಿ ಮಹಿಳಾ ಒಕ್ಕೂಟದ 22 ಸೆಂಟ್ಸ್ ಜಾಗದಲ್ಲಿ ನಿರ್ಮಿಸುತ್ತಿರುವ ಮಹಿಳಾ ವಸತಿ ಗೃಹಕ್ಕೆ ಕೇವಲ 6.5 ಲಕ್ಷ ರೂ. ಬಿಡುಗಡೆಯಾಗಿದ್ದು, ನಿರ್ಮಿತಿ ಕೇಂದ್ರದವರು ಪಂಚಾಂಗ ಹಾಕಿ ತೆರಳಿದ್ದಾರೆ. ಬೇರೆ ಅನುದಾನವಿಲ್ಲದೆ ಕಾಮಗಾರಿ ನಿಂತಿದೆ. 61 ಲಕ್ಷ ರೂ. ಯೋಜನೆ ಈಗ 71ಕ್ಕೆ ಏರಿಕೆಯಾಗಿದ್ದು, 50 ಲಕ್ಷ ರೂ. ಹೊಂದಿಸಿಕೊಳ್ಳಲು ಒಕ್ಕೂಟದ ಸದಸ್ಯರು ಪರದಾಡುವಂತಾಗಿದೆ.

ಸಾಂತ್ವನ ಕೇಂದ್ರಕ್ಕೆ 2010ರಲ್ಲೇ 3 ಸೆಂಟ್ಸ್ ಸ್ವಂತ ನಿವೇಶನ ಒದಗಿಸುವಂತೆ ಮನವಿ ಮಾಡಿದ್ದರೂ, ನಗರಸಭೆ ವ್ಯಾಪ್ತಿಯಲ್ಲಿ ಎನ್‌ಜಿಒಗೆ ನಿವೇಶನ ಕೊಡುವಂತಿಲ್ಲ ಎಂಬ ನಿಯಮದಿಂದ ಪ್ರಸ್ತಾವನೆ ತಿರಸ್ಕರಿಸಲಾಗಿತ್ತು. ನಗರಕ್ಕೆ ಹೊಂದಿಕೊಂಡಿರುವ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ನೀಡಲು ಅರ್ಜಿ ಸಲ್ಲಿಸಿದರೆ ಸಾಂತ್ವನ ಕೇಂದ್ರ ನಗರದಲ್ಲೇ ಇರಬೇಕು ಎನ್ನುತ್ತಿದ್ದಾರೆ. ಈ ಗೊಂದಲದಿಂದ ಸ್ವಂತ ಸೂರಿನ ಯೋಜನೆ ನನೆಗುದಿಗೆ ಬಿದ್ದಿದೆ.
ವಸಂತಿ ರಾವ್ ಕೊರಡ್ಕಲ್ ಕಾರ್ಯದರ್ಶಿ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ