ಅಸಲಿಗೆ ಮಾರ್ಕ್ ನಕಲಿಗೆ ಬ್ರೇಕ್…

‘ಶಾರ್ಟ್​ಕಟ್’ ಮಾರ್ಗದ ಮೂಲಕ ಹೆಚ್ಚು ಅಂಕ ಗಳಿಸಬೇಕೆಂಬ ತುಡಿತವುಳ್ಳ ಕೆಲವು ವಿದ್ಯಾರ್ಥಿಗಳು ಸುಲಭದಲ್ಲಿ ಕಂಡುಕೊಳ್ಳುತ್ತಿರುವ ಮಾಗೋಪಾಯವೆಂದರೆ ಪರೀಕ್ಷೆಯಲ್ಲಿ ನಕಲು ಮಾಡುವುದು. ಈ ನಕಲಿನಿಂದಾಗಿ ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು ಎನ್ನುವ ನಿಟ್ಟಿನಲ್ಲಿ ಪರೀಕ್ಷೆಯ ವೇಳೆ ಇದೀಗ ವಿದ್ಯಾರ್ಥಿಗಳ ಮೇಲೆ ‘ಮೂರನೇ ಕಣ್ಣು’ ದೃಷ್ಟಿಹಾಯಿಸಲಿದೆ!

|ದೇವರಾಜ್ ಎಲ್.

ಪರೀಕ್ಷೆಯಲ್ಲಿ ನಕಲು ಮಾಡಲು ಏನೆಲ್ಲಾ ಕಸರತ್ತು. ಷರ್ಟ್ ಹಿಂದೆ, ಶೂಸ್ ಒಳಗೆ, ಜಡೆಯ ಸೈಡಿಗೆ, ಪರ್ಸ್, ಜೇಬಿನ ಒಳಗೆ… ಅಬ್ಬಾ… ಒಂದೇ ಎರಡೇ… ಪರೀಕ್ಷೆಯ ಸಮಯದಲ್ಲಿ ಬರುವ ಪರೀಕ್ಷಕರ ಹದ್ದಿನ ಕಣ್ಣಿಗೆ ಸಿಕ್ಕಿಬೀಳುವವರು ಕೆಲವು ಸಾವಿರ ಮಂದಿಯಾದರೆ ಹಾಗೂ ಹೀಗೂ ಮಾಡಿ ಅವರನ್ನು ಯಾಮಾರಿಸಿ ಕಾಪಿ ಹೊಡೆಯುವವರ ಸಂಖ್ಯೆ ಇನ್ನೂ ಅಧಿಕ. ಇದಕ್ಕಾಗಿಯೇ ನಿಜವಾದ ಪ್ರತಿಭೆಗಳಿಗೆ ಅನ್ಯಾಯವಾಗಿ, ನಕಲು ಮಾಡಿದವರಿಗೇ ಹೆಚ್ಚು ಅಂಕ ಸಿಗುವ ಪ್ರಕರಣಗಳೇ ಹೆಚ್ಚು.

ಇನ್ನು ಇಂಜಿನಿಯರಿಂಗ್ ಎಂದ ಮೇಲೆ ಕೇಳಬೇಕೆ? ಹೇಗಾದರೂ ಸೈ. ಇಂಜಿನಿಯರ್ ಆಗಬೇಕೆಂದುಕೊಳ್ಳುವ ಆಸೆ ಕೆಲ ಯುವಕರದ್ದು. ಅದಕ್ಕಾಗಿಯೇ ಅವರು ಕಂಡುಕೊಳ್ಳುವ ಸುಲಭ ಮಾರ್ಗ ಪರೀಕ್ಷೆಯಲ್ಲಿ ನಕಲು ಮಾಡುವುದು.

ಅಕ್ರಮ ಎಸಗಲು ಹೊಂಚು ಹಾಕುವ ಭಾವಿ ಇಂಜಿನಿಯರ್ ಯುವಕರೇ ಇನ್ನು ಮುಂದೆ ಸ್ವಲ್ಪ ಹುಷಾರಾಗಿರಿ… ಏಕೆಂದರೆ ನಿಮ್ಮ ಮೇಲೀಗ ಪರೀಕ್ಷಕರ ಎರಡು ಕಣ್ಣಿನ ಹೊರತಾಗಿ ಮೂರನೇ ಕಣ್ಣು ನೆಟ್ಟಿರಲಿದೆ.

ಹೌದು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೂರನೆಯ ಕಣ್ಣಾದ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಇನ್ನು ಮುಂದೆ ಪರೀಕ್ಷೆ ಬರೆಯಬೇಕಿದೆ. ನಕಲು ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಕಾಲೇಜುಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಸೂಚನೆ ನೀಡಿದೆ.

ಹಾಗಾಗಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ 252 ಕಾಲೇಜುಗಳು ಇದೀಗ ನಿಗದಿತ ಅವಧಿಯೊಳಗೆ ಕ್ಯಾಮರಾ ಅವಳಡಿಸಬೇಕಿದೆ.

ಈಗಾಗಲೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳನ್ನು ಸಿ.ಸಿ. ಕ್ಯಾಮರಾ ಅವಳಡಿಸಿರುವ ಕೇಂದ್ರಗಳಲ್ಲೇ ನಡೆಸಲಾಗುತ್ತಿದೆ. ಈ ಪರೀಕ್ಷೆಗಳಿಗೆ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ಮೂರು ಲಕ್ಷ ಆಗಿರುವುದರಿಂದ ಸುಲಭವಾಗಿ ನಿರ್ವಹಣೆ ಮಾಡಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ.

ಆರು ತಿಂಗಳವರೆಗೆ ‘ಸೆರೆ’: ಸಿ.ಸಿ. ಕ್ಯಾಮರಾದಲ್ಲಿ ರೆಕಾರ್ಡ್ ಆಗುವ ದೃಶ್ಯಾವಳಿಗಳನ್ನು ಕನಿಷ್ಠ 6 ತಿಂಗಳು ಸಂಗ್ರಹಿಸಿಡಲಾಗುವುದು. ಏಕೆಂದರೆ, ವಿದ್ಯಾರ್ಥಿಗಳು ನಕಲು ಮಾಡಿ ಸಿಕ್ಕಿಬಿದ್ದ ಸನ್ನಿವೇಶದಲ್ಲಿ ನಕಲು ಮಾಡಿಲ್ಲವೆಂದು ವಾದಿಸುವವರೇ ಹೆಚ್ಚು. ಹೀಗಾಗಿ ಆ ಸಮಯದಲ್ಲಿ ಸಾಕ್ಷ್ಯ ಅವಶ್ಯ ಇರುವುದರಿಂದ ರೆಕಾರ್ಡ್ ಬಳಕೆ ಮಾಡಿಕೊಳ್ಳಲು ವಿಟಿಯು ತೀರ್ವನಿಸಿದೆ.

ನ.28ರ ಒಳಗೆ ಎಲ್ಲಾ ಕಾಲೇಜುಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆ ಮಾಡಬೇಕಿದೆ. ಸೂಚನೆ ಅನುಷ್ಠಾನದ ವರದಿಯನ್ನು ಪ್ರಾಂಶುಪಾಲರು ನ.30ರೊಳಗೆ ವಿಟಿಯುಗೆ ಕಳುಹಿಸಲು ನಿರ್ದೇಶನ ನೀಡಲಾಗಿದೆ.

3.14 ಲಕ್ಷ ವಿದ್ಯಾರ್ಥಿಗಳು

ಆರು ತಿಂಗಳಿಗೊಮ್ಮೆ ವಿಟಿಯು ಪರೀಕ್ಷೆ ನಡೆಸುತ್ತದೆ. ಪ್ರತಿ ಸೆಮಿಸ್ಟರ್​ನಲ್ಲಿ ಅಂದಾಜು 3.14 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 16 ಲಕ್ಷ ಉತ್ತರಪತ್ರಿಕೆ ಸಂಗ್ರಹವಾಗುತ್ತವೆ. ಪ್ರತಿ ಬಾರಿ ಪರೀಕ್ಷೆಯಲ್ಲಿ ಸರಾಸರಿ 300 ವಿದ್ಯಾರ್ಥಿಗಳು ನಕಲು ಪ್ರಕರಣದಲ್ಲಿ ಸಿಕ್ಕಿ ಬಿಳುತ್ತಾರೆ. ಎಷ್ಟೇ ಕಠಿಣ ಕ್ರಮ ಅನುಸರಿಸಿ ಪರೀಕ್ಷೆ ನಡೆಸಿದರೂ ವಿದ್ಯಾರ್ಥಿಗಳು ನಕಲು ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಹೀಗಾಗಿ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಇದು ಡಿಸೆಂಬರ್​ನಲ್ಲಿ ಆರಂಭವಾಗುವ ಪರೀಕ್ಷೆಯಿಂದಲೇ ಜಾರಿಯಾಗಲಿದೆ.

ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಸೂಚನೆ ನೀಡಿದ್ದೇವೆ. ಮುಂಬರುವ ಪರೀಕ್ಷೆ ವೇಳೆ ಎಲ್ಲ ಕೇಂದ್ರಗಳಲ್ಲೂ ಕ್ಯಾಮರಾ ಅಳವಡಿಸುವುದು ಕಡ್ಡಾಯ.

| ಡಾ.ಸತೀಶ್ ಅಣ್ಣಿಗೇರಿ ಮೌಲ್ಯಮಾಪನ ಕುಲಸಚಿವ, ವಿಟಿಯು