ಕೋಲ್ಕತ: ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ನಡೆಯುವ ಪೆಂಡಾಲ್ಗಳಿಗೆ ಆಯೋಜಕರಿಗಷ್ಟೇ ಅವಕಾಶ ನೀಡಬೇಕು. ಹೊರಗಿನವರಿಗೆ ಅಲ್ಲಿ ಪ್ರವೇಶ ಕಲ್ಪಿಸಬಾರದು ಎಂಬುದಾಗಿ ಹೈಕೋರ್ಟ್ ಆದೇಶ ನೀಡಿದೆ.
ಚಿಕ್ಕ ಪೆಂಡಾಲ್ಗಳಲ್ಲಿ ಜನರಿಗೆ ಐದು ಮೀಟರ್ ಹಾಗೂ ದೊಡ್ಡ ಪೆಂಡಾಲ್ಗಳಲ್ಲಿ ಹತ್ತು ಮೀಟರ್ ದೂರದಿಂದಲೇ ದೇವರ ದರ್ಶನ ಪಡೆಯುವಂತೆ ಸೂಚಿಸಬೇಕು. ಮಾತ್ರವಲ್ಲ ಪೂಜೆ ಹಿನ್ನೆಲೆಯಲ್ಲಿ ನಡೆಯುವ ಜನಜಂಗುಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಆಯೋಜಕರು ಮುಂಚಿತವಾಗಿಯೇ ಒಂದು ಬ್ಲೂಪ್ರಿಂಟ್ ನೀಡಬೇಕು ಎಂದು ಕೋಲ್ಕತದ ಉಚ್ಚ ನ್ಯಾಯಾಲಯ ಆದೇಶಿಸಿದೆ.
ಆಯೋಜಕರಷ್ಟೇ ಪೆಂಡಾಲ್ಗೆ ಪ್ರವೇಶಿಸಬಹುದಾಗಿದ್ದು, ಅಂಥವರ ಹೆಸರನ್ನು ಪೆಂಡಾಲ್ ಹೊರಗೆ ನಮೂದಿಸಿರಬೇಕು. ಪೆಂಡಾಲ್ ಆವರಣದಲ್ಲಿ ಗರಿಷ್ಠ 25 ಜನರಿಗಷ್ಟೇ ಅವಕಾಶ ಇರಲಿದೆ ಎಂಬುದಾಗಿ ಕೋರ್ಟ್ ನಿರ್ದೇಶನ ನೀಡಿದೆ. ಈ ಆದೇಶ ಕೋಲ್ಕತದ 34 ಸಾವಿರ ನೋಂದಾಯಿತ ದುರ್ಗಾ ಪೂಜಾ ಪೆಂಡಾಲ್ಗಳಿಗೆ ಅನ್ವಯಿಸಲಿದ್ದು, ಈ ವರ್ಷ ಅಲ್ಲಿ ಅಕ್ಟೋಬರ್ 23ರಿಂದ 26ರವರೆಗೆ ದುರ್ಗಾಪೂಜೆ ನಡೆಯಲಿದೆ. (ಏಜೆನ್ಸೀಸ್)