ಸರ್ಕಾರಿ ಸಾರಿಗೆ ಸಾರಥಿಗಳಿಗಿಲ್ಲ ಮತದಾನ ಭಾಗ್ಯ!

ಪ್ರಕಾಶ್ ಮಂಜೇಶ್ವರ ಮಂಗಳೂರು

ಸರ್ಕಾರಿ ಸ್ವಾಮ್ಯದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಹುತೇಕ ಸಿಬ್ಬಂದಿ ಎಲ್ಲ ಚುನಾವಣೆಗಳಲ್ಲಿ ಮತದಾನವೇ ಮಾಡುವುದಿಲ್ಲ. ಅದರಲ್ಲೂ ದ.ಕ, ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಎಸ್‌ಆರ್‌ಟಿಸಿ ನೌಕರರ ಮತದಾನದ ಪ್ರಮಾಣ ಆಡಳಿತ ವರ್ಗಕ್ಕೇ ಕಳವಳ ಉಂಟು ಮಾಡಿದೆ.

ಕೆಎಸ್‌ಆರ್‌ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಮುಖ್ಯವಾಗಿ ಬಸ್ ಚಾಲಕರು, ನಿರ್ವಾಹಕರು ಮತ್ತು ಮೆಕಾನಿಕ್ ವಿಭಾಗಗಳಲ್ಲಿ ದುಡಿಯುವವರಲ್ಲಿ ಶೇ.80ರಿಂದ 90ರಷ್ಟು ಉತ್ತರ ಕರ್ನಾಟಕದವರು. ಅವರು ಮತದಾನದ ವಿಳಾಸ ಬದಲಿಸಿಕೊಂಡಿಲ್ಲ. ಸ್ವಂತ ಊರಿಗೆ ಮತದಾನಕ್ಕೆ ಹೋಗಬೇಕೆಂದರೆ ಏಕಕಾಲದಲ್ಲಿ ರಜೆ ಸಿಗುವುದಿಲ್ಲ.

ಚುನಾವಣೆಗೆ ನಿಯೋಜನೆಗೊಳ್ಳುವ ಸಿಬ್ಬಂದಿಗೆ ಮಾತ್ರ ಅಂಚೆ ಮತದಾನ ನಡೆಸಲು ಅವಕಾಶವಿದ್ದು, ಇತರ ಸಂಚಾರ ಸೇವೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಈ ಅವಕಾಶ ದೊರೆಯುವುದಿಲ್ಲ. ಹಾಗಾಗಿ ಇತರ ಸಿಬ್ಬಂದಿ ಮತದಾನದಿಂದ ದೂರ ಉಳಿದಿದ್ದಾರೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸೆಲ್ವಮಣಿ ಆರ್. ಇತ್ತೀಚೆಗೆ ಕೆಎಸ್‌ಆರ್‌ಟಿಸಿ ನೌಕರರ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದ್ದು, ಪರಿಸ್ಥಿತಿಯ ಗಂಭೀರತೆ ಕುರಿತು ಜಿಲ್ಲಾ ಚುನಾವಣಾ ಅಧಿಕಾರಿಯವರ ಗಮನ ಸೆಳೆದಿದ್ದಾರೆ. ಶೀಘ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸೆಲ್ವಮಣಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಎಷ್ಟು ನೌಕರರು?: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಲ್ಲಿ 1800 ಚಾಲಕರು ಮತ್ತು ನಿರ್ವಾಹಕರು ಸೇರಿ ಒಟ್ಟು ಸುಮಾರು 2500 ಸಿಬ್ಬಂದಿ, ಪುತ್ತೂರು ವಿಭಾಗದಲ್ಲಿ 1824 ಚಾಲಕರು, ನಿರ್ವಾಹಕರು ಒಳಗೊಂಡು ಒಟ್ಟು 2423 ಸಿಬ್ಬಂದಿ ಇದ್ದಾರೆ. ಈ ಪೈಕಿ ಶೇ.90ರಷ್ಟು ಮತದಾರರು ಉತ್ತರ ಕರ್ನಾಟಕದವರು. ಅಂದರೆ ಅವರಲ್ಲಿ ಹೆಚ್ಚಿನವರು ಮತದಾನವೇ ಮಾಡುವುದಿಲ್ಲ ಎನ್ನುವುದು ಸ್ಪಷ್ಟ. ಉಳಿದ ಶೇ.10 ಸಿಬ್ಬಂದಿ ಕೂಡ ಚಾಲಕರು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ (ಚುನಾವಣೆ ಜವಾಬ್ದಾರಿಗೆ ನಿಯೋಜಿತರಾಗಿರುವವರು ಹೊರತುಪಡಿಸಿ) ಸಮಯ ಹೊಂದಾಣಿಕೆ ಸಮಸ್ಯೆಯಿಂದ ಮತದಾನ ಸಾಧ್ಯವಾಗುತ್ತಿಲ್ಲ. ಚುನಾವಣೆ ಸಂದರ್ಭ ಸಾಮಾನ್ಯವಾಗಿ ರಜೆ ಸಿಗುವುದು ಕಷ್ಟ. ಆದ್ದರಿಂದ ನಿಗಮಕ್ಕೆ ಸೇರ್ಪಡೆಯಾದ ಬಳಿಕ ಹೆಚ್ಚಿನ ಚುನಾವಣೆಗಳಲ್ಲಿ ಮತದಾನ ಸಾಧ್ಯವಾಗಿಲ್ಲ ಎಂದು ವಿಜಾಪುರ ಮೂಲದ ಬಸ್ ನಿರ್ವಾಹಕರೋರ್ವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ದೀರ್ಘಕಾಲದಿಂದ ಮಂಗಳೂರು, ಪುತ್ತೂರು ವಿಭಾಗಗಳಲ್ಲಿ ಕೆಲಸ ನಿರ್ವಹಿಸುವ ಉತ್ತರ ಕರ್ನಾಟಕದ ಸಿಬ್ಬಂದಿ ಕೂಡ ತಮ್ಮ ಎಪಿಕ್ ಕಾರ್ಡ್ ವಿಳಾಸವನ್ನು ತಾವು ದುಡಿಯುವ ಪ್ರದೇಶಗಳಿಗೆ ವರ್ಗಾವಣೆ ಮಾಡಿಕೊಳ್ಳದಿರುವುದು ಹೆಚ್ಚು ಸಮಸ್ಯೆಯಾಗಿದೆ.
| ದೀಪಕ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಪುತ್ತೂರು

ಉತ್ತರ ಕರ್ನಾಟಕ ಮತ್ತು ಮಂಗಳೂರು ನಡುವೆ ಸಂಚರಿಸುವ ಹೆಚ್ಚಿನ ಬಸ್‌ಗಳಲ್ಲಿ ಉತ್ತರ ಕರ್ನಾಟಕದ ನೌಕರರೇ ಚಾಲಕರು, ನಿರ್ವಾಹಕರಾಗಿ ದುಡಿಯುತ್ತಿದ್ದಾರೆ. ಎಲ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಮತಗಟ್ಟೆಗಳನ್ನು ತೆರೆದರೆ ಅವರ ಮತದಾನ ಪ್ರಮಾಣ ಹೆಚ್ಚಿಸಬಹುದು.
| ಪದ್ಮನಾಭ ಮೂಡುಬಿದಿರೆ, ಕಾರ್ಮಿಕ ಮುಖಂಡರು, ಕೆಎಸ್‌ಆರ್‌ಟಿಸಿ