ಬೆಳಗಾವಿ : ಚುನಾವಣೆಗೂ ಐಟಿ ದಾಳಿಗೂ ಸಂಬಂಧ ಇಲ್ಲ

ಬೆಳಗಾವಿ : ರಾಜ್ಯದ ವಿವಿಧ ಕಡೆ ನಡೆದಿರುವ ಐಟಿ ದಾಳಿಗೂ ಲೋಕಸಭಾ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಆಸ್ತಿ, ತೆರಿಗೆ ವಂಚನೆ ಇನ್ನಿತರರ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ವಿಷಯಗಳನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುವುದು ಸರಿಯಾದುದಲ್ಲ ಎಂದರು.
ಐಟಿ ದಾಳಿ ವಿಷಯದಲ್ಲಿ ರಾಜಕೀಯ ಪಕ್ಷಗಳ ಹೆಸರುಗಳನ್ನು ಬಳಕೆ ಮಾಡಬಾರದು.ಕೇಂದ್ರ ಸಚಿವ ಹಾಗೂ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಕಚೇರಿ ಮತ್ತು ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು.ಅದಕ್ಕೆ ನಾವ್ಯಾರೂ ವಿರೋಧಿಸಿ ಪ್ರತಿಭಟನೆ ನಡೆಸಲಿಲ್ಲ.ಅಕ್ರಮವಾಗಿ ಹಣ ಸಂಪಾದನೆ ಮಾಡಿದವರು, ತೆರಿಗೆ ಕಟ್ಟದವರು, ದುಡ್ಡು ಇದ್ದವರ ನಿವಾಸಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಕೇವಲ ರಾಜಕಾರಣಿಗಳು ಅಷ್ಟೇ ಅಲ್ಲದೆ ಉದ್ಯಮಿಗಳು, ನಟರು ಇನ್ನಿತರರ ಮೇಲೂ ಐಟಿ ದಾಳಿ ನಡೆಯುತ್ತಿವೆ. ಹಾಗಂತ ಪ್ರತಿಭಟನೆ ನಡೆಸಿಲ್ಲ, ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದರು.

ಕಳೆದ ಹಲವು ದಶಕಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ನಿರಂತರವಾಗಿ ಐಟಿ ದಾಳಿ ನಡೆಯುತ್ತಿದ್ದವು. ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿಗಳು ನಡೆದಿವೆ. ಹಾಗಾಗಿ ವಿರೋಧ ಪಕ್ಷದವರು ಕೇಂದ್ರ ಸರ್ಕಾರದ ಮೇಲೆ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಎಲ್ಲದಕ್ಕೂ ರಾಜಕೀಯ ಬಣ್ಣ ಹಚ್ಚಿ ಜನರನ್ನು ದಾರಿ ತಪ್ಪಿಸುತ್ತಿರುವುದು ಸರಿಯಾದುದಲ್ಲ ಎಂದರು.