ನಾನಾ ಸಾಹೇಬ್ ವಾರ್ಡ್‌ನಲ್ಲಿ ಹಬ್ಬಿದೆ ದುರ್ಗಂಧ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಅತಿ ಹೆಚ್ಚು ವಿದ್ಯಾವಂತರು, ಗಣ್ಯರು ವಾಸವಿರುವ ಕುಂದಾಪುರದ ನಾನಾ ಸಾಹೇಬ್ ವಾರ್ಡ್ ಪರಿಸರದಲ್ಲಿ ತ್ಯಾಜ್ಯ ನೀರು ಕಸದ ರಾಶಿಯಿಂದಾಗಿ ದುರ್ಗಂಧ ಹರಡಿದೆ.  ಶಿಕ್ಷಣ ಸಂಸ್ಥೆ, ಹೋಟೆಲ್ ಹಾಗೂ ಪಿಜಿಯೊಂದರ ತ್ಯಾಜ್ಯ ನೀರು ನೇರವಾಗಿ ಚರಂಡಿ ಸೇರುತ್ತಿದ್ದು, ಇದರಿಂದಲೇ ಪರಿಸರದಲ್ಲಿ ದುರ್ವಾಸನೆ ಬರಲು ಕಾರಣವಾಗಿದೆ. ವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು, ಗಣ್ಯರು ನೆಲೆಸಿದ್ದರೂ ಸ್ವಚ್ಛತೆ ಕುರಿತು ಜಾಗೃತಿ ಮೂಡಿಲ್ಲ ಎಂಬುದು ವಿಷಾದದ ವಿಷಯ.

ವಾಸರಾಯರ ಮಠ, ವೇಣುಗೋಪಾಲ ದೇವಸ್ಥಾನ, ಹೆಂಚು ಕಾರ್ಮಿಕರ ಭವನ ಒಳಗೊಂಡ ಪ್ರದೇಶ ಈ ವಾರ್ಡ್‌ನಲ್ಲಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆ ಹಾಗೂ ವಸತಿ ಸಮುಚ್ಚಯವೊಂದು ತ್ಯಾಜ್ಯ ನೀರನ್ನು ಬಿಡುವುದು ರಸ್ತೆ ಬದಿಯ ಚರಂಡಿಗೆ! ಸ್ವಚ್ಛ ಭಾರತ್, ಶುಚಿತ್ವ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಬುದ್ಧಿ ಹೇಳುವ ಶಿಕ್ಷಣ ಸಂಸ್ಥೆ ತನ್ನ ಮಡಿಲಲ್ಲೇ ಕೊಚ್ಚೆ ತುಂಬಿಕೊಂಡಿದ್ದರೂ ಮೌನವಾಗಿದೆ. ತ್ಯಾಜ್ಯ ನೀರು ಸಂಸ್ಕರಿಸಿ ಪ್ಲಾಂಟೇಶನ್‌ಗೆ ಬಳಸಬೇಕು ಎನ್ನುವುದು ನಿಯಮ. ಆದರೆ ಈ ವಾರ್ಡ್‌ನಲ್ಲಿ ಶಿಕ್ಷಣ ಸಂಸ್ಥೆ, ಹೋಟೆಲ್ ಹಾಗೂ ಪಿಜಿಗಳಿಗೆ ಈ ನಿಯಮ ಅನ್ವಯ ಆದಂತಿಲ್ಲ. ಬೇಸಿಗೆಯಲ್ಲಂತೂ ಈ ವಾರ್ಡ್‌ನಲ್ಲಿ ಸಹಿಸಲಾಗದಷ್ಟು ವಾಸನೆ ಇರುತ್ತದೆ.

 ನಾನಾ ಸಾಹೇಬ್ ವಾರ್ಡ್‌ನಲ್ಲಿ ಶಿಕ್ಷಣ ಸಂಸ್ಥೆ, ಪಿಜಿ ಹಾಗೂ ಹೋಟೆಲ್‌ನ ತ್ಯಾಜ್ಯ ನೀರು ನೇರವಾಗಿ ಚರಂಡಿಗೆ ಹರಿಯುತ್ತಿದ್ದು, ಈ ಬಗ್ಗೆ ದೂರುಗಳು ಬಂದಿವೆ. ಪುರಸಭೆ ಆರೋಗ್ಯಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ, ತ್ಯಾಜ್ಯ ನೀರು ಬಿಡುವ ಪೈಪ್ ಅನ್ನು ಬ್ಲಾಕ್ ಮಾಡಲಾಗಿದೆ. ಚರಂಡಿಗೆ ಮತ್ತೆ ತ್ಯಾಜ್ಯ ನೀರು ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ಸಂಬಂಧಿಸಿದ ಸಂಸ್ಥೆಗಳಿಗೆ ನೀಡಿರುವ ಪರವಾನಗಿ ರದ್ದು ಪಡಿಸಲಾಗುವುದು.
ಗೋಪಾಲಕೃಷ್ಣ ಶೆಟ್ಟಿ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ 
ಶಿಕ್ಷಣ ಸಂಸ್ಥೆ ಹಾಗೂ ಹೋಟೆಲ್ ಹಾಗೂ ಪಿಜಿ ತ್ಯಾಜ್ಯ ನೀರನ್ನು ಚರಂಡಿಗೆ ಬಿಡಲಾಗುತ್ತಿದೆ. ತೆರೆದ ಚರಂಡಿಯಲ್ಲಿ ಕಿಲೋಮೀಟರ್ ಉದ್ದಕ್ಕೆ ತ್ಯಾಜ್ಯ ನೀರು ಹರಿಯುವ ಮೂಲಕ ಇಡೀ ಪರಿಸರ ವಾಸನೆ ಬೀರುತ್ತಿದೆ. ತ್ಯಾಜ್ಯದ ವಾಸನೆ ಸಹಿಸಲಾಗುತ್ತಿಲ್ಲ. ಈ ಬಗ್ಗೆ ಪುರಸಭೆ ಗಮನಕ್ಕೂ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
ನಾನಾ ಸಾಹೇಬ್ ವಾರ್ಡ್ ನಿವಾಸಿಗಳು

Leave a Reply

Your email address will not be published. Required fields are marked *