ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿ

1 Min Read
ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿ
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಅರುಣಕುಮಾರ ಜಡಿಮಠ ಉದ್ಘಾಟಿಸಿದರು. ಚಂದ್ರಶೇಖರ ಸವಡಿ ಸಾಲಿಮಠ, ಓಂಕಾರಮೂರ್ತಿ ಕೋಟಿಮಠ, ಎ.ಪಿ.ಚಿಕ್ಕಮಠ, ವಸುಂಧರಾ, ಚಂದ್ರಕಲಾ ಮಠಪತಿ, ಸಂಗಯ್ಯ ಹಿರೇಮಠ, ಮಹಾಂತೇಶ ರಣಗಟ್ಟಿಮಠ, ಪ್ರಶಾಂತ ಗಾಲಿಮಠ ಇದ್ದರು.

ಬೆಳಗಾವಿ: ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಬೇಡ ಜಂಗಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅಖಿಲ ಭಾರತ ಜಂಗಮ ಮಹಾಸಭಾದ ರಾಜ್ಯಾಧ್ಯಕ್ಷ ಅರುಣಕುಮಾರ ಜಡಿಮಠ ಎಚ್ಚರಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅಖಿಲ ಭಾರತ ಜಂಗಮ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಲವು ದಶಕಗಳಿಂದ ಸಾಂವಿಧಾನಿಕವಾಗಿ ಸಿಗಬೇಕಾದ ಜಾತಿ ಪ್ರಮಾಣ ಪತ್ರ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ಬೇಡ ಜಂಗಮರು ಆರ್ಥಿಕ, ಶೈಕ್ಷಣಿಕವಾಗಿ ತೀರಾ ಹಿಂದುಳಿಯುವಂತಾಗಿದೆ. ಆದ್ದರಿಂದ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತರಲ್ಲಿ ಅತಿ ಹಿಂದುಳಿದ ಜಂಗಮ ಸಮಾಜಕ್ಕೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು 70 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೆ, ಇದುವರೆಗೂ ಫಲ ಸಿಕ್ಕಿಲ್ಲ. ಜಂಗಮ ಸಮಾಜ ಎಲ್ಲ ರೀತಿಯಿಂದ ಹಿಂದುಳಿದಿದ್ದು, ಮೀಸಲಾತಿಗೆ ಅರ್ಹವಾಗಿದ್ದರೂ ರಾಜಕೀಯ ಧುರೀಣರ ನಿರ್ಲಕ್ಷೃ ಮನೋಭಾವದಿಂದ ಮೀಸಲಾತಿ ಸಾಧ್ಯವಾಗಿಲ್ಲ ಎಂದರು. ಬೇಡ ಜಂಗಮ ಸಮಾಜದ ಮುಖಂಡ ಚಂದ್ರಶೇಖರ ಸವಡಿ ಸಾಲಿಮಠ ಮಾತನಾಡಿ, ಬೇಡ ಜಂಗಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡುವಲ್ಲೂ ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಧೋರಣೆ ಬದಲಾಗದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆ ರೂಪಿಸಲಾಗುವುದು ಎಂದರು.

ಅಖಿಲ ಭಾರತ ಜಂಗಮ ಮಹಾಸಭಾ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಓಂಕಾರಮೂರ್ತಿ ಕೋಟಿಮಠ, ಎ.ಪಿ.ಚಿಕ್ಕಮಠ, ಸಂಗಯ್ಯ ಹಿರೇಮಠ, ಮಹಾಂತೇಶ ರಣಗಟ್ಟಿಮಠ, ಪ್ರಶಾಂತ ಗಾಲಿಮಠ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಜಂಗಮ ಮಹಾಸಭಾ ಕಾನೂನು ಸಲಹೆಗಾರ್ತಿ ವಸುಂಧರಾ, ಚಂದ್ರಕಲಾ ಮಠಪತಿ, ದುಂಡಯ್ಯ ಬೇವಿನಕೊಪ್ಪಮಠ, ಶಿವಕುಮಾರ ಶಿವಪೂಜಿಮಠ, ಶಿವಾನಂದ ಹಿರೇಮಠ, ರಾಜಶೇಖರ ಹಿರೇಮಠ, ಶಂಕರಯ್ಯ ಹಿರೇಮಠ, ಮಹಾದೇವ ಮಠಪತಿ, ಮಹೇಶ ಹಿರೇಮಠ, ಮಹಾಂತೇಶ ಹಿರೇಮಠ ಇತರರಿದ್ದರು.

See also  ಮುಗಿಬಿದ್ದ ಮದ್ಯಪ್ರಿಯರು!
Share This Article