ಸಂಪೂರ್ಣ ಹದಗೆಟ್ಟ ಬೆಳ್ಳೆ ಭದ್ರಮಾ ರಸ್ತೆ

ಅಶ್ವಿನ್ ಮೂಡುಬೆಳ್ಳೆ, ಶಿರ್ವ
ಬೆಳ್ಳೆ ಭದ್ರಮಾ ರಸ್ತೆ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ದುಸ್ಥಿತಿಯಲ್ಲಿರುವ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಹೋಗುವುದು ಅನಿವಾರ‌್ಯವಾಗಿದೆ.

ಸುಮಾರು 50ರಿಂದ 60 ಮನೆಗಳವರು ಈ ರಸ್ತೆ ಅವಲಂಬಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳ ಮೂಲ ಅವಶ್ಯಕತೆಯಾದ ಈ ರಸ್ತೆ, ಕಂಬಿಗಾರ ದೈವಸ್ಥಾನಕ್ಕೂ ಸಂಪರ್ಕ ಕಲ್ಪಿಸುತ್ತದೆ. ಹಲವಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ನಿತ್ಯ ಸಂಕಟ ಅನುಭವಿಸುವಂತಾಗಿದೆ. ಕೆಲವೆಡೆ ರಸ್ತೆ ಅಗಲ ಕಡಿಮೆ ಇರುವುದರಿಂದ ಕಾರು ಅಥವಾ ಬೇರೆ ವಾಹನಗಳು ಬಂದರೆ ದ್ವಿಚಕ್ರ ವಾಹನ ಸವಾರರು ಗುಂಡಿಗೆ ಇಳಿದು ಮುಂದೆ ಸಾಗಬೇಕಾಗುತ್ತದೆ.

ಸಂಪರ್ಕ ರಸ್ತೆ: ಪಾಪನಾಶಿನಿ ನದಿಗೆ ಕಿರು ಸೇತುವೆ ನಿರ್ಮಿಸಿದಲ್ಲಿ ಬೆಳ್ಳೆಯನ್ನು ಪಡುಬೆಳ್ಳೆಯೊಂದಿಗೆ ಬೆಸೆಯುವ ಈ ರಸ್ತೆಯಿಂದ ಬೆಳ್ಳೆ, ಪಡುಬೆಳ್ಳೆ, ಪಾಂಬೂರು, ಬಂಟಕಲ್ಲು ಪ್ರದೇಶದ ಜನರಿಗೆ ವಿಶೇಷ ಅನುಕೂಲವಿದೆ. ಪಡುಬೆಳ್ಳೆಯಿಂದ ನೇರವಾಗಿ ಈ ರಸ್ತೆ ಮೂಲಕ ಉಡುಪಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸೇರಬಹುದು. ಜಿಲ್ಲಾಡಳಿತ ಕೇಂದ್ರ ಮಣಿಪಾಲಕ್ಕೂ ಹತ್ತಿರದ ದಾರಿಯಲ್ಲಿ ತೆರಳಬಹುದು.

ಬೆಳ್ಳೆ ಭದ್ರಮಾ ರಸ್ತೆ ಶೀಘ್ರ ದುರಸ್ತಿಯಾಗುವ ಅಗತ್ಯವಿದೆ. ಪಡುಬೆಳ್ಳೆ-ಬೆಳ್ಳೆ ಸಂಪರ್ಕ ಸೇತುವೆಯಾಗಿ ರಸ್ತೆ ಅಭಿವೃದ್ಧಿಗೊಂಡರೆ ಬೆಳ್ಳೆ, ಪಡುಬೆಳ್ಳೆ, ಪಾಂಬೂರು, ಬಂಟಕಲ್ಲು ಭಾಗದ ಜನರಿಗೆ ಅನುಕೂಲಕರ. ಈ ಭಾಗದ ಜನರಿಗೆ ಶಿರ್ವ ಹಾಗೂ ಉಡುಪಿ, ಮಣಿಪಾಲಕ್ಕೆ ಹತ್ತಿರವಾಗುತ್ತದೆ.
ಸಚಿನ್ ಶೆಟ್ಟಿ ಕುಂತಳನಗರ ಕೆಳಮನೆ, ಸ್ಥಳೀಯ ನಿವಾಸಿ

ಭದ್ರಮಾ ರಸ್ತೆ ಪುನಃ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶಾಸಕರು ಅನುದಾನ ಮೀಸಲಿಟ್ಟಿದ್ದಾರೆ. ಹೆಚ್ಚುವರಿ ಅನುದಾನ ತರುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಸಂಪರ್ಕ ರಸ್ತೆ ನಿರ್ಮಿಸುವ ಬಗ್ಗೆ ನಬಾರ್ಡ್ ಅನುದಾನ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರ ರಸ್ತೆಗೆ ಕಾಯಕಲ್ಪ ಒದಗಲಿದೆ.
ರಾಜೇಂದ್ರ ಶೆಟ್ಟಿ ವಾರ್ಡ್ ಸದಸ್ಯ

Leave a Reply

Your email address will not be published. Required fields are marked *