ಪ್ರಗತಿ ಕಾಣದ ಪಶ್ಚಿಮವಾಹಿನಿ ಯೋಜನೆ

ಪಿ.ಬಿ.ಹರೀಶ್ ರೈ ಮಂಗಳೂರು

ಟೆಂಡರ್ ಪರಿಶೀಲನೆಯಲ್ಲಿದೆ, ವಿನ್ಯಾಸ ಮರು ಪರಿಶೀಲಿಸಲಾಗುತ್ತಿದೆ, ಅಂದಾಜು ಪಟ್ಟಿ ತಯಾರಿಸಲು ನೀಡಲಾಗಿದೆ.
– ಇದು ಪಶ್ಚಿಮವಾಹಿನಿ ಯೋಜನೆಯ ಸದ್ಯದ ಪ್ರಗತಿ ವಿವರ!
ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ನದಿಗಳ ಹರಿವು ಸಂರಕ್ಷಿಸಲು ರಾಜ್ಯ ಸರ್ಕಾರ 2017-18ರ ಬಜೆಟ್‌ನಲ್ಲಿ ಪಶ್ಚಿಮವಾಹಿನಿ ಯೋಜನೆ ಘೋಷಿಸಿತ್ತು. 100 ಕೋಟಿ ರೂ. ಅನುದಾನ ಒದಗಿಸುವುದಾಗಿಯೂ ತಿಳಿಸಿತ್ತು. ಕಳೆದ ಎರಡು ವರ್ಷದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳಿಗೆ 25 ಕಾಮಗಾರಿ ಈ ಯೋಜನೆಯಡಿ ಮಂಜೂರಾಗಿದೆ. ಆದರೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಯೋಜನೆಯಡಿ ಯಾವುದೇ ವೆಚ್ಚವೂ ಆಗಿಲ್ಲ.

ಏನಿದು ಯೋಜನೆ?: ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ನದಿ ಮತ್ತು ಉಪನದಿಗಳಿಗೆ ಸರಣಿ ಕಿಂಡಿ ಅಣೆಕಟ್ಟು /ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಿಸಿ ಅಂತರ್ಜಲ ವೃದ್ಧಿಸುವ ಹಾಗೂ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ತಾಂತ್ರಿಕವಾಗಿ ಕಿಂಡಿ ಅಣೆಕಟ್ಟು ನಿರ್ಮಿಸಲು ಉಪಯುಕ್ತ ಸ್ಥಳ ಗುರುತಿಸಿ, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

54 ಕಾಮಗಾರಿ: ಪಶ್ಚಿಮವಾಹಿನಿ ಯೋಜನೆಯಡಿ 3 ಜಿಲ್ಲೆಗಳ 54 ಕಾಮಗಾರಿಗಳಿಗೆ ಸಣ್ಣ ನೀರಾವರಿ ಇಲಾಖೆ ಅನುಮೋದನೆ ನೀಡಿದೆ. ದ.ಕ ಜಿಲ್ಲೆಯಲ್ಲಿ 256.25 ಕೋಟಿ ರೂ. ವೆಚ್ಚದ 11 ಕಾಮಗಾರಿ ಮತ್ತು ಉಡುಪಿ 52.60 ಕೋಟಿ ರೂ. ವೆಚ್ಚದ 14 ಕಾಮಗಾರಿ ಅನುಮೋದನೆಗೊಂಡಿದೆ. ಈ ಪೈಕಿ ಸಚಿವ ಯು.ಟಿ.ಖಾದರ್ ಅವರ ಮಂಗಳೂರು ಕ್ಷೇತ್ರದ ಹರೇಕಳದಲ್ಲಿ 174 ಕೋಟಿ ರೂ. ವೆಚ್ಚದಲ್ಲಿ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಿಸುವುದು ದೊಡ್ಡ ಯೋಜನೆಯಾಗಿದೆ.

ಟೆಂಡರ್ ಪರಿಶೀಲನೆ : ದ.ಕ ಮತ್ತು ಉಡುಪಿ ಜಿಲ್ಲೆಗಳ 23 ಕಾಮಗಾರಿಗಳ ಟೆಂಡರ್ ಈಗಷ್ಟೇ ಪರಿಶೀಲನಾ ಹಂತದಲ್ಲಿದೆ. ಯಾವುದೇ ಟೆಂಡರ್ ಅನುಮೋದನೆಗೊಂಡಿಲ್ಲ. 2 ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾದ 29 ಕಾಮಗಾರಿಗಳ ಪೈಕಿ 4 ಕಾಮಗಾರಿ ಪ್ರಗತಿಯಲ್ಲಿದೆ. 20ಕ್ಕೂ ಅಧಿಕ ಕಾಮಗಾರಿಗಳ ಗುತ್ತಿಗೆ ಕರಾರು ಒಪ್ಪಂದ ನಡೆದಿದೆ.

ಕ್ಷೇತ್ರವಾರು ಮಂಜೂರಾದ ಕಿಂಡಿ ಅಣೆಕಟ್ಟುಗಳ ವಿವರ

ದಕ್ಷಣಿ ಕನ್ನಡ ಜಿಲ್ಲೆ (ಕೋಟಿ ರೂ.ಗಳಲ್ಲಿ)
ಬೆಳ್ತಂಗಡಿ: ನಿಟ್ಟಡೆ -6.29, ಕಡಿರುದ್ಯಾವರ-4.92
ಮೂಡುಬಿದಿರೆ: ನಿಡ್ಡೋಡಿ-2, ಮಾಡೂರು-5.55
ಮಂಗಳೂರು ಉತ್ತರ: ಕೊಳವೂರು -11.46,
ಬಂಟ್ವಾಳ: ಸಂಗಬೆಟ್ಟು-7, ಕರ್ಪೆ-15, ಕರಿಯಂಗಳ-12.50
ಪುತ್ತೂರು: ಬಿಳಿಯೂರು -18.40
ಸುಳ್ಯ: ಚಾರ್ವಾಕ -7.5
ಮಂಗಳೂರು: ಹರೇಕಳ -174

ಉಡುಪಿ ಜಿಲ್ಲೆ
ಕುಂದಾಪುರ : ಹಾಲಾಡಿ-4.41 , ಬೆಳ್ವೆ-4.95,
ಉಡುಪಿ : ಕುದಿ -5 , ಹಲುವಳ್ಳಿ-4.25
ಕಾಪು: ಕುರ್ಕಾಲು-5, ಪಲಿಮಾರು-6.50, ಪಡುಬಿದ್ರಿ-2.25
ಕಾರ್ಕಳ: ಬೋಳ-2.75, ಮಾಳಾ-1.84, ಇನ್ನಾ-2.41
ಬೈಂದೂರು: ಜಡ್ಕಲ್-4.40, ಮುದೂರು-2.28, ಕೊಲ್ಲೂರು-2.22, ತಲ್ಲೂರು-4.44

ಪಶ್ಚಿಮವಾಹಿನಿ ಯೋಜನೆಯಡಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 54 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಯೋಜನೆಯಡಿ ಇದುವರೆಗೆ ಯಾವುದೇ ವೆಚ್ಚವಾಗಿಲ್ಲ. ಕಾಮಗಾರಿಗಳು ಅನುಷ್ಠಾನದ ಹಂತದಲ್ಲಿವೆ. ಅನುದಾನದ ಲಭ್ಯತೆ ಅನುಸಾರ ಹಂತಹಂತವಾಗಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು.
|ಸಿ.ಎಸ್.ಪುಟ್ಟರಾಜು, ಸಣ್ಣ ನೀರಾವರಿ ಸಚಿವ

ಸರ್ಕಾರದ ನಿರ್ಲಕ್ಷೃದಿಂದ ಯೋಜನೆ ಕುಂಠಿತವಾಗಿದೆ. ಶಾಸಕನಾದ ಬಳಿಕ ಬೆಳ್ತಂಗಡಿ ಕ್ಷೇತ್ರಕ್ಕೆ ಮಂಜೂರಾದ ಎರಡು ಕಾಮಗಾರಿಗಳ ಅನುಷ್ಠಾನಕ್ಕೆ ನಿರಂತರ ಪ್ರಯತ್ನ ನಡೆಸಿದ ಕಾರಣ ಈಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರ ಗುತ್ತಿಗೆ ಒಪ್ಪಂದ ಪೂರೈಸಿ ಕಾಮಗಾರಿ ಆರಂಭಿಸಲಾಗುವುದು.
|ಹರೀಶ್ ಪೂಂಜ, ಬೆಳ್ತಂಗಡಿ ಶಾಸಕ