ಡೆಲ್ಟಾ ಬೀಚ್ ಅಭಿವೃದ್ಧಿ ಮರೀಚಿಕೆ

ಅವಿನ್ ಶೆಟ್ಟಿ, ಉಡುಪಿ

ಕೋಡಿಬೇಂಗ್ರೆ ಡೆಲ್ಟಾ ಸಮುದ್ರ ತೀರ ಕಡಲ ತೀರ ರಮಣೀಯವಾಗಿದ್ದು, ಇಲ್ಲಿನ ನಿಸರ್ಗ ಸೌಂದರ್ಯ ಕಡಲ ತೀರ ನೋಡುಗರ ಮನ ಸೆಳೆಯುವಂತಿದೆ. ಪೂರ್ವದಲ್ಲಿ ಸುವರ್ಣ, ಸೀತಾನದಿ ಮತ್ತು ಪಶ್ಚಿಮದಲ್ಲಿ ಅರಬ್ಬಿ ಸಮುದ್ರದ ತ್ರಿವೇಣಿ ಸಂಗಮ ಪ್ರಕೃತಿ ಸೌಂದರ್ಯ ಇಮ್ಮಡಿಗೊಳಿಸಿದೆ.

ನಗರ, ವಾಣಿಜ್ಯ ಚಟುವಟಿಕೆಯಿಂದ ದೂರವಿದ್ದು, ಕರಾವಳಿಯ ಪ್ರಶಾಂತ ಪರಿಸರದಲ್ಲಿರುವ ಡೆಲ್ಟಾ ಬೀಚ್ ಅತ್ಯಂತ ಮನಮೋಹಕ ಬೀಚ್‌ಗಳಲ್ಲಿ ಒಂದಾಗಿದೆ. ಉಡುಪಿ ನಗರದಿಂದ 7 ಕಿ.ಮೀ. ದೂರದ ಕಲ್ಯಾಣಪುರ ಸಂತೆಕಟ್ಟೆಗೆ ಬಂದು ಅಲ್ಲಿಂದ 10 ಕಿ.ಮೀ. ದೂರದಲ್ಲಿದೆ ಕೋಡಿಬೇಂಗ್ರೆ. ಸರ್ಕಾರಿ, ಖಾಸಗಿ ಬಸ್ಸಿನ ಸೇವೆ ಲಭ್ಯವಿದೆ. ಪ್ರತಿನಿತ್ಯ ಇಲ್ಲಿಗೆ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಮಣಿಪಾಲದ ವಿದ್ಯಾರ್ಥಿಗಳು ಹೆಚ್ಚಾಗಿ ಇಲ್ಲಿಗೆ ಆಗಮಿಸುತ್ತಾರೆ. ಮಲ್ಪೆ ಬೀಚ್‌ಗಿಂತಲೂ ಡೆಲ್ಟಾ ಬೀಚ್ ಹೆಚ್ಚು ಆಹ್ಲಾದಕರ. ಮಣಿಪಾಲದ ಹಳೇ ವಿದ್ಯಾರ್ಥಿಗಳೇ ಇದಕ್ಕೆ ಡೆಲ್ಟಾ ಬೀಚ್ ಎಂದು ನಾಮಕರಣ ಮಾಡಿದ್ದಾರೆ. ಕೋಡಿಬೆಂಗ್ರೆ ಸಮುದ್ರ ತೀರ ಮೀನುಗಾರಿಕೆ ಬಂದರನ್ನು ಹೊಂದಿದ್ದು, ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಸ್ಥಾನ ಇಲ್ಲಿದೆ.

ಅಭಿವೃದ್ಧಿಗೆ ಬೇಕು ಒತ್ತು: ಈಗಾಗಲೇ ಇಲ್ಲಿ ಮೂರು ಬೋಟ್ ಹೌಸ್‌ಗಳಿವೆ. ಇಲ್ಲಿನ ಬೋಟ್‌ಯಾನ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತಿದೆ. ಡೆಲ್ಟಾ ಬೀಚ್‌ನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದಲ್ಲಿ ಉತ್ತಮ ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ವಿದ್ಯುತ್ ದೀಪ, ಶೌಚಗೃಹ, ಕುಡಿಯುವ ನೀರು, ಸಿಟ್ಟಿಂಗ್ ಬೆಂಚ್, ಪಾರ್ಕಿಂಗ್, ಕ್ಯಾಂಟೀನ್ ನಿರ್ವಹಣೆ ಮತ್ತು ಜೀವ ರಕ್ಷಕದಳ ಸಿಬ್ಬಂದಿ ಸೇರಿದಂತೆ ಮೂಲಸೌಕರ್ಯ ಒದಗಿಸಬೇಕು. ಪರಿಸರಕ್ಕೆ ಪೂರಕ ಯೋಜನೆ ಮಾಡಿದಲ್ಲಿ ಸ್ಥಳೀಯರೂ ಉದ್ಯಮ, ವ್ಯಾಪಾರ ನಡೆಸಿ, ಜೀವನ ಸಾಗಿಸಲು ಅನುಕೂಲವಾಗುತ್ತದೆ.

ಅಕ್ರಮ ಚಟುವಟಿಕೆ ತಾಣ: ಗಾಂಜಾ, ಮದ್ಯ ಸೇವನೆ, ಇತರೆ ಅಕ್ರಮ ಚಟುವಟಿಕೆ ಇಲ್ಲಿ ನಡೆಯುತ್ತಿರುತ್ತದೆ. ಇದೆಲ್ಲಕ್ಕೂ ಕಡಿವಾಣ ಬೀಳಬೇಕು ಎಂದು ಸಾರ್ವಜನಿಕರು ಬಯಸುತ್ತಿದ್ದಾರೆ. ಸಮುದ್ರದಲ್ಲಿ ಮೋಜು ಮಾಡುತ್ತ ಈಜಲು ತೆರಳಿ ಜೀವ ಕಳೆದುಕೊಂಡಿದ್ದಾರೆ. ಜೀವರಕ್ಷಕ ದಳವನ್ನು ಇಲ್ಲಿ ನೇಮಿಸಬೇಕು ಎಂಬುದು ಸ್ಥಳೀಯರ ಆಗ್ರಹ.

ಕೋಡಿಬೇಂಗ್ರೆ ಡೆಲ್ಟಾ ಬೀಚ್ ಅತ್ಯಂತ ಸುಂದರ ಬೀಚ್ ಆಗಿದ್ದು, ವಾಟರ್‌ಸ್ಪೋರ್ಟ್ಸ್‌ನಂತಹ ಚಟುವಟಿಕೆ ನಡೆಸಲು ಸೂಕ್ತ ಸ್ಥಳವಾಗಿದೆ. ಮೂಲಸೌಲಭ್ಯ ಸೇರಿದಂತೆ ಅಗತ್ಯ ಸೌಕರ್ಯಒದಗಿಸಿ ಉತ್ತಮ ಪ್ರವಾಸಿ ತಾಣವನ್ನಾಗಿಸುವ ಚಿಂತನೆ ನಡೆಸಲಾಗಿದ್ದು, ಶೀಘ್ರವೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು.
| ಅನಿತಾ ಭಾಸ್ಕರ್, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

ಕೋಡಿಬೆಂಗ್ರೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿದ್ದು, ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಬೇಕು. ಹೂಡೆಯಿಂದ ಪಡುತೋನ್ಸೆವರೆಗೆ ಉಡುಪಿ ವಿಧಾನಸಭಾ ವ್ಯಾಪ್ತಿ, ಅಲ್ಲಿಂದ ಒಂದೂವರೆ ಕಿ.ಮೀ. ಅಂತರದಲ್ಲಿ ಸಿಗುವ ಕೋಡಿಬೆಂಗ್ರೆ ಕುಂದಾಪುರ ಕ್ಷೇತ್ರಕ್ಕೆ ಸೇರಿದ್ದು, ಈ ನಿಟ್ಟಿನಲ್ಲಿ ಅಭಿವೃದ್ಧಿಯಲ್ಲಿ ಸಮಸ್ಯೆಯಾಗಿದೆ.
| ನವೀನ್ ಕುಂದರ್, ಸದಸ್ಯರು, ಕೋಡಿ ಗ್ರಾಪಂ