ಬಾಂದ ಕೆರೆ ಅಭಿವೃದ್ಧಿ ನಿರ್ಲಕ್ಷ್ಯ

ಭಾಗ್ಯವಾನ್ ಸನೀಲ್ ಹಳೆಯಂಗಡಿ

ಪಡುಪಣಂಬೂರು ಹಾಗೂ ಪಕ್ಕದ ಬೆಳ್ಳಾಯೂರು ಗ್ರಾಮದ ಕೃಷಿಕರ ಜಲ ಮೂಲವಾಗಿದ್ದ ಪಡುಪಣಂಬೂರು ಬಾಂದ ಕೆರೆ ಸರ್ಕಾರದ ನಿರ್ಲಕ್ಷೃದಿಂದ ಮೂಲೆಗುಂಪಾಗಿದೆ.

ಸುಮಾರು ಒಂದು ಎಕರೆ ಅಧಿಕ ವಿಸ್ತೀರ್ಣದ ಹಾಗೂ 60 ಅಡಿ ಆಳವಿರುವ ಸುತ್ತಲೂ ಕಲ್ಲ ಕಟ್ಟೆ ಹೊಂದಿರುವ ರಚನೆ ಇರುವ ಈ ಬಾಂದ ಕೆರೆ ಕೃಷಿಕರ ಮೂರು ಬೆಳೆಗಳಿಗೆ ಆಶ್ರಯವಾಗಿತ್ತು. ಜತೆಗೆ ತನ್ನ ಒರತೆಗಳಿಂದ ಪಡುಪಣಂಬೂರು ಗ್ರಾಮದ ಹೆಚ್ಚಿನ ಬಾವಿಗಳಲ್ಲಿ ಮಳೆಗಾಲದವರೆಗೆ ನೀರು ಇರುವಂತೆ ನೋಡಿಕೊಳ್ಳುವ ಅತ್ಯುತ್ತಮ ಜಲ ಮೂಲವಾಗಿತ್ತು. ಕಾಲಕ್ರಮೇಣ ಜನರಲ್ಲಿ ಕೆರೆಗಳ ಬಗ್ಗೆ ಆಸಕ್ತಿ ಕುಂಠಿತವಾಗಿ ನಿರ್ವಹಣೆ ಕೊರತೆಯಿಂದ ಕೆರೆ ದಂಡೆಗಳು ಕುಸಿದು ಮಣ್ಣು, ಕಸ ಕಲ್ಲುಗಳು ಕೆರೆ ಸೇರಿ ಸುಮಾರು 12 ಮೀಟರ್ ಎತ್ತರಕ್ಕೂ ಅಧಿಕ ಹೂಳಾಗಿ ಪರಿವರ್ತಿತವಾಗಿದೆ. ಹೂಳು ಹಾಗೂ ಹಾವಸೆಗಳಿಂದ ತುಂಬಿದ ಈ ಕೆರೆಯಲ್ಲಿ ಇಂದಿಗೂ ಒರತೆ ಇದೆ. ಸರ್ಕಾರ ಗಮನಹರಿಸಿ ಕೆರೆಯನ್ನು ಮೂಲ ಸ್ವರೂಪಕ್ಕೆ ಧಕ್ಕೆ ಬರದ ಸ್ಥಿತಿಯಲ್ಲಿ ಅಭಿವೃದ್ಧಿಪಡಿಸಿದರೆ ಪಡುಪಣಂಬೂರು ಪಂಚಾಯಿತಿ ವ್ಯಾಪ್ತಿಯ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಿದೆ.

ಟ್ಯಾಂಕ್ ಕುಸಿದು ಸಮಸ್ಯೆ: ಪಡುಪಣಂಬೂರು ಪಂಚಾಯಿತಿಯ ನೀರು ವಿತರಣೆಗೆ ಆಧಾರವಾಗಿದ್ದ ಬೃಹತ್ ಟ್ಯಾಂಕ್ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆ ಸಂದರ್ಭ ಭೂ ಕುಸಿತದಿಂದ ಧರಾಶಾಯಿಯಾಗಿತ್ತು. ಬಳಿಕ ಸಂಸದರು, ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರ ಸತತ ಪ್ರಯತ್ನದಿಂದ ಎಂಆರ್‌ಪಿಎಲ್ ಕಂಪನಿ ಟ್ಯಾಂಕ್ ನಿರ್ಮಿಸುತ್ತಿದೆ.

ನರೇಗಾದಿಂದ ಕಷ್ಟ: ಈ ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಸುಮಾರು 1 ಕೋಟಿ ರೂ. ಅನುದಾನ ಅಗತ್ಯವಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಕಾಮಗಾರಿ ಸಾಧ್ಯವಿಲ್ಲ. ಸರ್ಕಾರದ ಕೆರೆ ಸಂಜೀವಿನಿ ಯೋಜನೆ ಇನ್ನೂ ಬಂದಿಲ್ಲ. ಪಂಚಾಯಿತಿ ಸಣ್ಣ ನೀರಾವರಿ ಇಲಾಖೆಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಟ್ಟಾರೆ ಈ ಕೆರೆ ಅಭಿವೃದ್ಧಿಯಿಂದ ಪಡುಪಣಂಬೂರು ಪಂಚಾಯಿತಿ ಕುಡಿಯುವ ನೀರಿನ ಬಗ್ಗೆ ಸ್ವಾವಲಂಬನೆ ಗಳಿಸಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಪಡುಪಣಂಬೂರು ಗ್ರಾಮಕ್ಕೆ ನೀರುಣಿಸುತ್ತಿದ್ದ ಕೆರೆ ಸರ್ಕಾರದ ಉಪೇಕ್ಷೆಗೆ ಒಳಗಾಗಿದೆ. ಈ ಬಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯಿಂದ ಅನುದಾನ ಪಡೆಯುವ ಬಗ್ಗೆ ಮನವಿ ಮಾಡಲಾಗಿದೆ. ಯೋಜನೆಯ ವೆಚ್ಚ ಅಧಿಕವಾದ ಕಾರಣ ಈ ವರ್ಷ ಅವರಿಂದ ಸಹಕಾರ ಲಭಿಸಿಲ್ಲ.
| ದುಗ್ಗಣ್ಣ ಸಾವಂತರು, ಮೂಲ್ಕಿ ಸೀಮೆ ಅರಸರು

ಈ ಕೆರೆಯ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಅವರಿಂದ ಈವರೆಗೆ ಯಾವುದೇ ಸ್ಪಂದನೆ ಲಭ್ಯವಾಗಿಲ್ಲ.
| ಮೋಹನ್‌ದಾಸ್ ತೋಕೂರು, ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ

ನನ್ನ ಅಧ್ಯಕ್ಷಾವಧಿಯಲ್ಲಿ ಮೂಲ್ಕಿ ನಗರ ಪಂಚಾಯಿತಿಗೆ ಈ ಕೆರೆಯ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಗಿತ್ತು. ಈ ಕೆರೆ ಅಭಿವೃದ್ಧಿಪಡಿಸಿ ಮೂಲ್ಕಿ ಹಾಗೂ ಪಡುಪಣಂಬೂರು ಗ್ರಾಮದ ನೀರಿನ ಬವಣೆ ನಿವಾರಿಸಲು ವಿನಂತಿಸಲಾಗಿತ್ತು. ಆದರೆ ಮೂಲ್ಕಿ ನಗರ ಪಂಚಾಯಿತಿ ಈ ಬಗ್ಗೆ ಸ್ಪಂದಿಸಿಲ್ಲ.
| ವಿನೋದ್ ಸಾಲ್ಯಾನ್ ಪಡುಪಣಂಬೂರು ಪಂಚಾಯಿತಿ ಸದಸ್ಯ