ಸದ್ಯಕ್ಕಿಲ್ಲ ಸಾಲಮನ್ನಾ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಬ್ಯಾಂಕ್​ಗಳ ನಡುವೆ ಉದ್ಭವಿಸಿರುವ ಕೆಲವು ಗೊಂದಲ ಬಗೆಹರಿಯದ ಪರಿಣಾಮ ಈ ವರ್ಷವೇ ಸಾಲಮನ್ನಾ ಭಾಗ್ಯ ರೈತರ ಕೈಗೆಟುಕುವುದು ಅನುಮಾನವಾಗಿದೆ. ಈಗಾಗಲೇ ಹೊಸ ಸಾಲವೂ ಸಿಗದೆ ಹತಾಶರಾಗಿರುವ ರಾಜ್ಯದ ಅನ್ನದಾತರು ಕೃಷಿ ಚಟುವಟಿಕೆಗಳಿಗಾಗಿ ಮತ್ತೆ ಖಾಸಗಿ ಲೇವಾದೇವಿದಾರರ ಮನೆ ಬಾಗಿಲು ತಟ್ಟುವ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್​ಗಳು ಹಾಗೂ ಸಹಕಾರ ವಲಯದಿಂದ 47 ಸಾವಿರ ಕೋಟಿ ರೂ.ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿದೆ. ಆದರೆ ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್​ಗಳಿಗೆ ಸಂಬಂಧಿಸಿದ ಒಪ್ಪಂದ ಏರ್ಪಡುವುದಕ್ಕೆ ಎದುರಾಗಿರುವ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗದಿರುವುದರಿಂದ ಇಡೀ ಪ್ರಕ್ರಿಯೆ ಅರ್ಧದಲ್ಲೇ ನಿಂತಿದೆ. ಹಣಕಾಸು ಹೊಂದಾಣಿಕೆಗೆ ಸರ್ಕಾರ ಸಿದ್ಧವಾಗಿದ್ದರೂ ಬ್ಯಾಂಕ್​ಗಳು ರೈತರಿಗೆ ಋಣಮುಕ್ತಿ ಪತ್ರ ನೀಡಬೇಕಾದರೆ ಎಲ್ಲ ಗೊಂದಲಗಳಿಗೂ ತೆರೆ ಎಳೆದುಕೊಳ್ಳಬೇಕಾಗಿದೆ.

ಫಲಾನುಭವಿಗಳ ಪಟ್ಟಿ: ಸಹಕಾರ, ರಾಷ್ಟ್ರೀಕೃತ ಬ್ಯಾಂಕ್ ಅಥವಾ ಗ್ರಾಮೀಣ ಬ್ಯಾಂಕ್​ಗಳಲ್ಲಿ ಎಲ್ಲಾದರೂ ಒಂದು ಕಡೆಯಷ್ಟೇ ಸಾಲಮನ್ನಾ ಮಾಡುವುದು ಸರ್ಕಾರದ ಉದ್ದೇಶ. ಇದಕ್ಕಾಗಿ ಪ್ರತಿಯೊಬ್ಬರ ವಿವರಗಳನ್ನೂ ಮತ್ತೊಂದು ಸಂಸ್ಥೆಯ ದಾಖಲೆಗಳೊಂದಿಗೆ ತುಲನೆ ಮಾಡಿ ಪರಿಶೀಲಿಸಬೇಕಾಗಿದೆ. ಸರ್ಕಾರ ಒಪ್ಪಂದ ಮಾಡಿಕೊಳ್ಳುವುದಕ್ಕೂ ಮುನ್ನ ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಪಟ್ಟಿ ಪಡೆದು ಅದನ್ನು ಸಹಕಾರ ಸಂಸ್ಥೆಗಳ ಜತೆ ತಾಳೆ ಹಾಕಲಿದೆ.

ಎರಡು ಕಡೆ ಸಾಲ ಪಡೆದಿದ್ದರೆ ಒಂದು ಕಡೆ ಕಿತ್ತು ಹಾಕಲಾಗುತ್ತದೆ. ಒಂದು ಕಡೆ ಸಾಲಕ್ಕಷ್ಟೇ ಫಲಾನುಭವಿ ಅರ್ಹನಾಗಿರಬೇಕು. ಕೇವಲ ಸಾಲ ಮಾತ್ರವಲ್ಲದೆ ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು ಮತ್ತು ಕುಟುಂಬದವರು, ಜನಪ್ರತಿನಿಧಿಯನ್ನು ಗುರುತಿಸಿ ಹೊರಗಿಡುವ ಕೆಲಸವೂ ನಡೆಯಬೇಕಿದೆ.

ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಫಲಾನುಭವಿಗಳ ಪಟ್ಟಿ ಬರಬೇಕಾದರೆ ಎರಡು ತಿಂಗಳಿಗೂ ಹೆಚ್ಚು ಕಾಲ ಕಾಯಬೇಕಾದ ಪರಿಸ್ಥಿತಿ ಇದೆ ಎನ್ನುತ್ತವೆ ಸರ್ಕಾರದ ಉನ್ನತ ಮೂಲಗಳು. ಆ ಪಟ್ಟಿ ಬಂದ ಬಳಿಕವಷ್ಟೇ ಪರಿಶೀಲನೆ ಮಾಡುವುದಕ್ಕೆ ಮತ್ತಷ್ಟು ಸಮಯ ಹಿಡಿಯಲಿದೆ. ಆದ್ದರಿಂದ 2019 ಜನವರಿವರೆಗೆ ರಾಷ್ಟ್ರೀಕೃತ ಬ್ಯಾಂಕ್​ಗಳೊಂದಿಗೆ ಒಡಂಬಡಿಕೆ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಒಡಂಬಡಿಕೆ ಆಗದೆ ಋಣಪತ್ರ ಸಿಗುವುದಿಲ್ಲ, ಋಣಪತ್ರ ಸಿಗದೆ ಹೊಸ ಸಾಲಕ್ಕೂ ರೈತರು ಅರ್ಹರಾಗುವುದಿಲ್ಲ.

ಇಂದು ಸಹಕಾರ ವಲಯದ ಸಾಲಮನ್ನಾ?

ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲಮನ್ನಾ ತಡವಾಗುವುದು ಖಚಿತವಾಗಿರುವುದರಿಂದ ರೈತರು ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಳ್ಳಬಾರದೆಂಬ ಕಾರಣಕ್ಕಾಗಿ ಸಹಕಾರ ವಲಯದ ಸಾಲಮನ್ನಾ ಮಾಡಲು ಕಡತ ಸಿದ್ಧವಾಗಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಹಕಾರ ವಲಯದ ಸಾಲಮನ್ನಾ ಘೋಷಣೆಯಾಗುವ ಸಾಧ್ಯತೆ ಇದೆ. 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಮನ್ನಾ ಆಗಲಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದಿದ್ದ 500 ಕೋಟಿ ರೂ.ಗಳು ಮನ್ನಾದಲ್ಲಿ ಸೇರಲಿವೆ ಎಂದು ಹೇಳಲಾಗುತ್ತಿದೆ.

ಸಮಸ್ಯೆಗಳೇನು?

1. ಬ್ಯಾಂಕ್​ಗಳು ಫಲಾನುಭವಿಗಳ ಪಟ್ಟಿಯನ್ನು ನೀಡಿಲ್ಲ

2. ಕಂತುಗಳಿಗೆ ಒಪ್ಪಿದ್ದರೂ ಬಡ್ಡಿ ಬಿಡಲು ಸಿದ್ಧವಿಲ್ಲ

3. ಎನ್​ಪಿಎ, ಮರು ಹೊಂದಾಣಿಕೆ, ಸುಸ್ತಿ ಹಾಗೂ ಚಾಲ್ತಿ ಸಾಲದ ವಿವರಗಳು ಸಿಕ್ಕಿಲ್ಲ ಲೇವಾದೇವಿದಾರರ ಮೇಲೆ ಅವಲಂಬನೆ

ಸಾಲಮನ್ನಾ ಘೋಷಣೆ ಆದೇಶ ರೂಪಕ್ಕೆ ಬರಲಿಲ್ಲ. ಅತ್ತ ಬ್ಯಾಂಕ್​ಗಳ ಜತೆಗೆ ಒಡಂಬಡಿಕೆಯೂ ಆಗದೆ ಋಣಪತ್ರವೂ ಸಿಕ್ಕಲಿಲ್ಲ. ಇದರಿಂದಾಗಿ ರೈತರು ಹೊಸ ಸಾಲ ಸಿಗದೆ ಕೃಷಿ ಚಟುವಟಿಕೆ ಗಳಿಗೆ ಖಾಸಗಿ ಲೇವಾದೇವಿಗಾರರ ಕಡೆ ಹೋಗುತ್ತಿದ್ದಾರೆ.

ಸಹಕಾರ ವಲಯದ ಸಾಲಮನ್ನಾಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಸಿಎಂ ಅವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ.

| ಬಂಡೆಪ್ಪ ಖಾಶೆಂಪುರ ಸಹಕಾರ ಸಚಿವ

ಸಾಲಮನ್ನಾವೂ ಆಗಲಿಲ್ಲ, ಹೊಸ ಸಾಲವೂ ಸಿಗುತ್ತಿಲ್ಲ. ಇದರಿಂದಾಗಿ ರೈತರು ಮತ್ತೆ ಖಾಸಗಿ ಲೇವಾದೇವಿಗಾರರ ಮೇಲೆ ಅವಲಂಬಿತರಾಗುವಂತಾಗಿದೆ. ಸರ್ಕಾರ ಗೊಂದಲಗಳನ್ನು ಬಗೆ ಹರಿಸಿಕೊಂಡು ಬೇಗ ಆದೇಶ ಹೊರಡಿಸಬೇಕಾಗಿದೆ.

| ಕುರುಬೂರು ಶಾಂತಕುಮಾರ್ ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ

ಯಾವ ಸಾಲ ಮೊದಲು?

ಸರ್ಕಾರ ಸಾಲಮನ್ನಾ ಮಾಡುವ ಸಂದರ್ಭದಲ್ಲಿ ಮೊದಲು ಎನ್​ಪಿಎಗೆ ಆದ್ಯತೆ ನೀಡಿದರೆ ಆ ನಂತರ ಮರು ಹೊಂದಾಣಿಕೆ ಮಾಡಿರುವ ಸಾಲ ಪರಿಗಣಿಸಲಿದೆ. ಇವರೆಡರ ನಂತರ ಸುಸ್ತಿ, ಕೊನೆಯದಾಗಿ ಚಾಲ್ತಿ ಸಾಲ ಮನ್ನಾ ಮಾಡಲಿದೆ. ಬ್ಯಾಂಕ್​ಗಳಿಂದ ಈ ವಿವರಗಳೂ ಸಹ ದೊರಕಬೇಕಾಗಿವೆ. ಇದೇ ಮಾದರಿಯಲ್ಲಿಯೇ ಪಟ್ಟಿ ನೀಡುವಂತೆ ಸರ್ಕಾರ ಬ್ಯಾಂಕ್​ಗಳಿಗೆ ಹೇಳಿದೆ.

ಸರ್ಕಾರಕ್ಕೆ ಹೆಚ್ಚಲಿದೆ ಹೊರೆ

ಇತ್ತೀಚಿಗೆ ಸರ್ಕಾರದ ಮುಖಂಡರು, ನೇಕಾರರು ಹಾಗೂ ಮೀನುಗಾರರ ಸಾಲ ಸಹ ಮನ್ನಾ ಆಗುತ್ತದೆ ಎಂಬ ಮಾತನ್ನಾಡಿದ್ದರು. ಆ ಸಾಲವೂ ಮನ್ನಾ ಆದರೆ ಒಟ್ಟಾರೆ 55 ಸಾವಿರ ಕೋಟಿ ರೂ.ಗಳ ಹೊರೆಯಾಗುತ್ತದೆ. ಬಡ್ಡಿಯೂ ಸೇರಿದರೆ ಹೊರೆ ಇನ್ನಷ್ಟು ಹೆಚ್ಚುತ್ತದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ಬಡ್ಡಿ ಮನ್ನಾಕ್ಕೆ ಅಸಮ್ಮತಿ

ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದ್ದರೂ ಬ್ಯಾಂಕ್​ಗಳು ಬಡ್ಡಿ ಬಿಟ್ಟುಕೊಡದಿರಲು ಚಿಂತಿಸಿವೆ ಎಂಬ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ. ಮೊದಲ ಕಂತು ಬಿಟ್ಟು ಎರಡನೇ ಕಂತಿನಿಂದ ಬಡ್ಡಿಯನ್ನು ನೀಡಬೇಕೆಂಬುದು ಬ್ಯಾಂಕ್​ಗಳ ವಾದವೆಂದು ಹೇಳಲಾಗುತ್ತಿದೆ. ಆದರೂ ಬ್ಯಾಂಕ್​ಗಳ ಮನವೊಲಿಸಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬ್ಯಾಂಕ್​ಗಳು ಬಡ್ಡಿ ಮನ್ನಾ ಒಪ್ಪದೆ ಇದ್ದರೆ 6 ಸಾವಿರ ಕೋಟಿ ರೂ.ಗಳಿಗೂ ಹೆಚ್ಚುವರಿ ಹೊರೆ ಬೀಳಲಿದೆ. ಸರ್ಕಾರವೇ ಸಾಲಮನ್ನಾ ಘೋಷಣೆ ಮಾಡಿರುವುದರಿಂದ ಬಡ್ಡಿ ಕಟ್ಟಲಿ ಎಂಬುದು ಬ್ಯಾಂಕ್​ಗಳ ವಾದ. ರೈತರು ಬಾಕಿ ಉಳಿಸಿಕೊಳ್ಳುವುದರಿಂದ ಬ್ಯಾಂಕ್​ಗಳೇ ಹಣ ಸಿಗುತ್ತದೆ ಎಂಬ ಕಾರಣಕ್ಕೆ ನಮ್ಮ ಷರತ್ತಿಗೆ ಒಪು್ಪತ್ತವೆ ಎಂಬುದು ಸರ್ಕಾರದ ನಿರೀಕ್ಷೆ.

 

Leave a Reply

Your email address will not be published. Required fields are marked *