ದಿನಗೂಲಿ ನೌಕರರಿಗೆ 6 ತಿಂಗಳಿಂದ ವೇತನವಿಲ್ಲ

ವಿಜಯವಾಣಿ ವಿಶೇಷ ಚಾಮರಾಜನಗರ
6 ತಿಂಗಳಿಂದ ವೇತನ ನೀಡದಿರುವುದರಿಂದ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಕೆಲಸ ನಿರ್ವಹಿಸುವ ದಿನಗೂಲಿ ನೌಕರರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ನಂತರದ ಹಾಸ್ಟೆಲ್‌ಗಳಲ್ಲಿ ದಿನಗೂಲಿ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರಿಗೆ ವೇತನ ನೀಡಿಲ್ಲ. ಪರಿಣಾಮ ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ.

ತಾಲೂಕಿನಲ್ಲಿ ಒಟ್ಟು 20 ಹಾಸ್ಟೆಲ್‌ಗಳಿವೆ. 14 ಮೆಟ್ರಿಕ್ ಪೂರ್ವ ಮತ್ತು 4 ಮೆಟ್ರಿಕ್ ನಂತರದ, 2 ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿವೆ. ಇವುಗಳಲ್ಲಿ ದಿನಗೂಲಿ ಆಧಾರದ ಮೇಲೆ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರು ಸೇರಿ 31 ಜನರು ಕೆಲಸ ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುವ ಅಡುಗೆಯವರು ಮತ್ತು ಅವರ ಕುಟುಂಬದವರ ಹೊಟ್ಟೆ ತುಂಬುತ್ತಿಲ್ಲ. 6 ತಿಂಗಳಿಂದ ಸಾಲ ಮಾಡಿ ಜೀವನ ನಡೆಸುವ ಪರಿಸ್ಥಿತಿಯಿದೆ. ಸಂಬಂಧಪಟ್ಟವರು ವೇತನದ ಬಿಲ್ ಮಾಡಿಕೊಡದೆ ವಿಳಂಬ ಮಾಡುತ್ತಿದ್ದಾರೆಂದು ನೌಕರರು ಅಳಲು ತೋಡಿಕೊಂಡಿದ್ದಾರೆ.
ಇದೇ ಹಾಸ್ಟೆಲ್‌ಗಳಲ್ಲಿರುವ ಕಾಯಂ ಅಡುಗೆ ನೌಕರರಿಗೆ ಸಕಾಲಕ್ಕೆ ವೇತನ ಬರುತ್ತಿದೆ. ಆದರೆ, ದಿನಗೂಲಿ ನೌಕರರಾದ ನಮಗೆ ಸಂಬಳ ಸಿಗುತ್ತಿಲ್ಲ. ಅಧಿಕಾರಿಗಳು ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ಧಾರೆ ಎಂದು ದೂರಿದ್ದಾರೆ.

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ, ಹಿಂದೆಲ್ಲ ಚೆಕ್ ಮೂಲಕ ವೇತನ ನೀಡಲಾಗುತ್ತಿತ್ತು. ಈಗ ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ವೇತನ ನೀಡಲಾಗುತ್ತಿದೆ. ಅಲ್ಲಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಲಾಗುತ್ತಿರುವುದರಿಂದ ವಿಳಂಬವಾಗಿದೆ ಎನ್ನುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನಾವೆಲ್ಲ ಆಧಾರ್, ಪಾನ್, ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಿದ್ದೇವೆ. ಆದರೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆಂದು ದೂರಿದ್ದಾರೆ.
ನೇರವಾಗಿ ಬ್ಯಾಂಕ್ ಖಾತೆಗೆ ಸಂಬಳ ಹಾಕಲು ಬೇಕಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಲು 6 ತಿಂಗಳು ಬೇಕೆ? ಅಧಿಕಾರಿಗಳು ದಿನಗೂಲಿ ನೌಕರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆಂದು ಆಪಾದಿಸಿದ್ದಾರೆ.

ಇತರೆ ತಾಲೂಕಿನವರಿಗೆ ವೇತನ ನೀಡಲಾಗಿದೆ: ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ತಾಲೂಕುಗಳಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ದಿನಗೂಲಿ ಅಡುಗೆ ನೌಕರರಿಗೆ ಸಂಬಳ ವಿತರಣೆ ಆಗುತ್ತಿದೆ. ಚಾಮರಾಜನಗರ ತಾಲೂಕಿನ ಹಾಸ್ಟೆಲ್‌ಗಳ ನೌಕರರಿಗೆ ಮಾತ್ರ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿ.ಪ್ರಕಾಶ್ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಸಂಬಳ ವಿತರಣೆ ಮಾಡದಿದ್ದರೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ನೌಕರರು ತಿಳಿಸಿದ್ದಾರೆ.

ಸಾಲ ಪಡೆದು ಜೀವನ ನಿರ್ವಹಣೆ: 6 ತಿಂಗಳಿನಿಂದ ವೇತನ ಬರಲಿದೆ ಎಂದು ಹೇಳಿಕೊಂಡು ದಿನಸಿ ಅಂಗಡಿಗಳಲ್ಲಿ ದಿನ ಬಳಕೆ ವಸ್ತುಗಳನ್ನು ಸಾಲ ಪಡೆಯಲಾಗುತ್ತಿದೆ. ಲೇವಾದೇವಿದಾರರದಿಂದ ಸಾಲ ಪಡೆದಿದ್ದೇವೆ. ಅಂಗಡಿಯವರು ಮತ್ತು ಲೇವಾದೇವಿದಾರರು ಸಾಲ ತೀರಿಸಿ ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.
ಬೇಗ ಸಂಬಳ ಮಾಡಿಕೊಟ್ಟರೆ ಜೀವನ ನಿರ್ವಹಣೆ ಮಾಡಬಹುದು ಇಲ್ಲದಿದ್ದರೆ ನಮ್ಮ ಕುಟುಂಬಗಳು ಬೀದಿಗೆ ಬೀಳಲಿವೆ. ಸಂಬಂಧ ಪಟ್ಟವರು ಇತ್ತ ಗಮನಹರಿಸಿ ನಮ್ಮನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಕೋರಿದ್ದಾರೆ.

ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ಸಂಬಳ ಹಾಕಬೇಕೆಂಬ ಹೊಸ ನಿಯಮ (ಖಜಾನೆ-2) ಜಾರಿಯಾಗಿದೆ. ನೌಕರರ ದಾಖಲೆಗಳನ್ನು ಲಗತ್ತಿಸುವ ಕೆಲಸ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ 6 ತಿಂಗಳ ವೇತನವವನ್ನು ಹಾಕಲಾಗುವುದು.
ಕೇಶವ, ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಚಾ.ನಗರ ತಾಲೂಕು

Leave a Reply

Your email address will not be published. Required fields are marked *