ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲುವವರೆಗೆ ಆ ರಾಷ್ಟ್ರದೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದು ಸರಿಯಲ್ಲ. ಹಾಗಾಗಿ ಉದ್ದೇಶಿತ ಭಾರತ-ಬಾಂಗ್ಲಾದೇಶದ ಎಲ್ಲ ಪಂದ್ಯಗಳನ್ನು ಮತ್ತು ಬಾಂಗ್ಲಾ ಕಲಾವಿದರ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿಯು (ಎಚ್‌ಜೆಎಸ್) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದೆ.
ಬಾಂಗ್ಲಾ – ಭಾರತದ ಎರಡು ಟೆಸ್ಟ್ ಪಂದ್ಯ ಮತ್ತು ಮೂರು ಟಿ 20 ಪಂದ್ಯ ಭಾರತದಲ್ಲಿ ಸೆ.19ರಿಂದ ಅ.12ರವರೆಗೆ ಆಯೋಜಿಸಲಾಗಿದೆ. ಈ ಪಂದ್ಯಗಳು ಚೆನ್ನೈ, ಕಾನ್ಪುರ, ಗ್ವಾಲಿಯರ್, ದೆಹಲಿ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿವೆ. ಮತ್ತೊಂದೆಡೆ, ಬಾಂಗ್ಲಾದೇಶದಲ್ಲಿ ಹಿಂದು ಸಮುದಾಯದ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಇಲ್ಲಿಯವರೆಗೆ 230 ಮಂದಿ ಸಾವನ್ನಪ್ಪಿದ್ದಾರೆ. ಬಾಂಗ್ಲಾದ 64 ಜಿಲ್ಲೆಗಳ ಪೈಕಿ 52 ಜಿಲ್ಲೆಗಳಲ್ಲಿ ಹಿಂದು ವಿರೋಧಿ ಹಿಂಸಾಚಾರದ ಘಟನೆಗಳು ನಡೆದಿವೆ. ಶೇಖ್ ಹಸೀನಾ ಸರಕಾರ ರಾಜೀನಾಮೆ ನೀಡಿದ ನಂತರ ಹಿಂದುಗಳ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ಅಲ್ಲಿ ಹಿಂದೂ ಸಮುದಾಯ ಭಯದ ವಾತಾವರಣದಲ್ಲಿ ಜೀವಿಸುತ್ತಿರುವಾಗ ಕ್ರಿಕೆಟ್ ಪಂದ್ಯ ಅನಗತ್ಯ ಎಂದು ಸಮಿತಿಯ ನ್ಯಾಯವಾದಿ ಅನೀಶ್ ಪರಳಕರ, ಮಾನವ ಸೇವಾ ಪ್ರತಿಷ್ಠಾನದ ವಿನಾಯಕ ಶಿಂಧೆ ಆಗ್ರಹಿಸಿದ್ದಾರೆ.