ಮೈತ್ರಿಗಳ ವಿಶ್ವಾಸ ಪರೀಕ್ಷೆ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆಯೇ ಅವಿಶ್ವಾಸ ಗೊತ್ತುವಳಿ ಪರೀಕ್ಷೆಗೆ ಸಜ್ಜುಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ, ಪ್ರತಿಪಕ್ಷಗಳಿಗೆ ಸಂಸತ್ತಿನಲ್ಲೇ ಸೋಲುಣಿಸುವ ಮೂಲಕ 2019ರ ಲೋಕಸಭೆ ಚುನಾವಣೆಗೆ ಭರ್ಜರಿ ಶುಭಾರಂಭ ಮಾಡುವ ಲೆಕ್ಕಾಚಾರ ಹಾಕಿಕೊಂಡಿದೆ.

ಟಿಡಿಪಿಯ ಅವಿಶ್ವಾಸ ಗೊತ್ತುವಳಿ ಬೆಂಬಲಿಸಿ ಕಾಂಗ್ರೆಸ್ ಮತ್ತಿತರ ಪಕ್ಷಗಳು ನೀಡಿರುವ ನಿಲುವಳಿ ಈಗ ಪ್ರತಿಪಕ್ಷಗಳನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

‘ಎನ್​ಡಿಎ ಬಳಿ ಸಂಖ್ಯಾಬಲವಿಲ್ಲ’ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದರೂ, ಎನ್​ಡಿಎಗೆ ಪೂರ್ಣ ಬಹುಮತವಿರುವುದು ಸತ್ಯ. ಸದ್ಯ ಲೋಕಸಭೆಯಲ್ಲಿ 533 ಸಂಸದರಿದ್ದು, ಮ್ಯಾಜಿಕ್ ನಂಬರ್ 268ಗಿಂತ ಹೆಚ್ಚು ಬಿಜೆಪಿಯ ಸಂಸದರೇ ಇದ್ದಾರೆ. ಬಿಹಾರ ಬಿಜೆಪಿಯ ಚೋಟಾಲಾಲ್ ಮತ್ತು ಶತ್ರುಘ್ನ ಸಿನ್ಹಾ ಬಿಜೆಪಿ ಪರ ಮತ ಚಲಾಯಿಸುವುದಾಗಿ ಹೇಳಿದ್ದಾರೆ. ಬಿಜೆಪಿ ಹಿನ್ನಡೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಒಟ್ಟು 314 ಸಂಸದರು ಎನ್​ಡಿಎನಲ್ಲಿದ್ದಾರೆ.

ಅಚ್ಚರಿಯ ನಿರ್ಧಾರ

ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲವೆಂದು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಟಿಡಿಪಿ ಮತ್ತು ಇದನ್ನು ಬೆಂಬಲಿಸಿದ್ದ ಕಾಂಗ್ರೆಸ್, ಗೊತ್ತುವಳಿಗೆ ಸ್ಪೀಕರ್ ಮರುಕ್ಷಣವೇ ಒಪ್ಪಿಯಾರು ಎಂಬುದನ್ನೂ ಊಹಿಸಿಯೂ ಇರಲಿಲ್ಲ. ವಿಪಕ್ಷಗಳ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್, ಪ್ರತಿಪಕ್ಷಗಳನ್ನೇ ಚಿಂತೆಗೆ ದೂಡಿದ್ದಾರೆ. ಗುರುವಾರ ಕಾಂಗ್ರೆಸ್ ನಾಯಕ ಗುಲಾಂ ನಬೀ ಅವರು ಸಂಸತ್ತಿನ ತಮ್ಮ ಕಚೇರಿಯಲ್ಲಿ ವಿಪಕ್ಷ ನಾಯಕರೊಂದಿಗೆ ಸಭೆ ನಡೆಸಿದರೂ, ಅವರ ಮುಖದಲ್ಲಿ ಮಾತ್ರ ‘ವಿಶ್ವಾಸ’ ಕಂಡುಬಂದಿರಲಿಲ್ಲ!

ಸರ್ಕಾರ ಸಿದ್ಧತೆ

ಅಧಿವೇಶನದ ಆರಂಭದಲ್ಲೇ ಅವಿಶ್ವಾಸ ಗೊತ್ತುವಳಿ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿತ್ತು. ಪೂರ್ವ ತಯಾರಿ ಮಾಡಿಕೊಂಡು ಗೊತ್ತುವಳಿಗೆ ಒಪ್ಪುವಂತೆ ಸ್ಪೀಕರ್​ಗೆ ಬಿಜೆಪಿ ನಾಯಕರು ಸಂದೇಶ ರವಾನಿಸಿದ್ದರು. 10 ದಿನಗಳಲ್ಲಿ ಗೊತ್ತುವಳಿ ಮೇಲೆ ಚರ್ಚೆಗೆ ಸಮಯ ನಿಗದಿ ಮಾಡಿ ಎಂದು ಕೇಳಿಕೊಂಡಿದ್ದ ಕಾಂಗ್ರೆಸ್ ನಾಯಕರಿಗೆ ವಾಸ್ತವದಲ್ಲಿ ಈ ಬಗ್ಗೆ ವಿಶೇಷ ಆಸಕ್ತಿಯೇನೂ ಇರಲಿಲ್ಲ. ಚರ್ಚೆ, ಮತದಾನ ಮುಗಿದುಬಿಟ್ಟರೆ ಕೇಂದ್ರದ ವಿರುದ್ಧ ಮಾತನಾಡಲು ಏನೂ ಇರುವುದಿಲ್ಲ ಎಂದೇ ವಿಪಕ್ಷಗಳ ನಾಯಕರು ಮತ್ತಷ್ಟು ದಿನಗಳ ಕಾಲ ಇದನ್ನು ಎಳೆಯಬೇಕೆಂದು ಭಾವಿಸಿದ್ದರು. ಆದರೆ, ಗೊತ್ತುವಳಿಗೆ ಸಮ್ಮತಿಸಿದ ಕೆಲವೇ ಗಂಟೆಗಳಲ್ಲಿ ಗೊತ್ತುವಳಿ ಮೇಲಿನ ಚರ್ಚೆ ಮತ್ತು ಮತದಾನಕ್ಕೆ ಶುಕ್ರವಾರಕ್ಕೆ ಸಮಯ ನಿಗದಿ ಮಾಡುವ ಮೂಲಕ ಪ್ರತಿಪಕ್ಷಗಳೇ ಮುಜುಗರಕ್ಕೊಳಗಾಗುವ ಸನ್ನಿವೇಶ ಸೃಷ್ಟಿಯಾಗಿದೆ.

ರಾಹುಲ್ ಭಾಷಣ ಮಾಡ್ತಾರಾ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಬಂಡವಾಳ’ ಬಯಲು ಮಾಡುವುದು ನಮ್ಮ ಗುರಿ ಎಂದು ಬಿಜೆಪಿ ನಾಯಕರು ಈಗಾಗಲೇ ಹೇಳಿಕೊಂಡಿದ್ದಾರೆ. ದೇಶದಲ್ಲಿ ಎನ್​ಡಿಎ ವಿರೋಧಿ ವಾತಾವರಣ ನಿರ್ವಣವಾಗಿದೆ ಮತ್ತು ಬಿಜೆಪಿ ನಾಯಕರ ಪ್ರಚೋದನೆಯಿಂದಲೇ ದಲಿತರ ಮೇಲೆ ದೌರ್ಜನ್ಯ, ಸಮೂಹ ಸನ್ನಿ, ಮಹಿಳೆಯರು, ಅಲ್ಪಸಂಖ್ಯಾತರ ಮೇಲೆ ದಾಳಿಯಾಗುತ್ತಿದೆ ಎಂದು ಕಾಂಗ್ರೆಸ್ ಅನೇಕ ಬಾರಿ ಆರೋಪಿಸಿದೆ. ಸಂಸತ್ತಿನಲ್ಲಿ 15 ನಿಮಿಷದ ಭಾಷಣಕ್ಕೆ ಅವಕಾಶ ಸಿಕ್ಕರೆ ಮೋದಿ ಸಂಸತ್​ನಲ್ಲಿ ಇರಲು ಸಾಧ್ಯವಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ಹೀಗಾಗಿ ಶುಕ್ರವಾರ ಸಂಸತ್ತಿನಲ್ಲಿ ರಾಹುಲ್ ಭಾಷಣ ಮಾಡುವುದನ್ನೇ ಬಿಜೆಪಿ ನಿರೀಕ್ಷಿಸುತ್ತಿದೆ. ಆದರೆ ರಾಹುಲ್ ಭಾಷಣದ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಎನ್​ಡಿಎಗೆ ಲಾಭ

ಸಂಸತ್ತಿನಲ್ಲಿ ಪ್ರತಿಪಕ್ಷಗಳಿಗೆ ಸೋಲಾಗುವುದರಿಂದ ಎನ್​ಡಿಎಗೆ 2 ಲಾಭವಿದೆ. ಒಂದು- ಮುಂಗಾರು ಅಧಿವೇಶನ ಸುಸೂತ್ರವಾಗಿ ನಡೆಯಲಿದೆ. ಎರಡನೆಯದ್ದು- 2019ರ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್​ಗಢ, ಮಿಜೋರಾಂ ಮತ್ತು 2019ರ ಲೋಕಸಭೆ ಚುನಾವಣೆಗೆ ನೈತಿಕ ಬಲ ದುಪ್ಪಟ್ಟುಗೊಳಿಸಲಿದೆ. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರಣಕಹಳೆಯನ್ನು ಸಂಸತ್ತಿನಿಂದಲೇ ಮೊಳಗಿಸಲಿದ್ದಾರೆ. ಸಂಜೆ 6 ಗಂಟೆಗೆ ಪ್ರಧಾನಿ ಭಾಷಣ ನಿಗದಿಯಾಗಿದ್ದು, ಸುಮಾರು 1 ಗಂಟೆಗಳ ಕಾಲ ಲೋಕಸಭೆಯಲ್ಲಿ ಅವರು ಮಾತನಾಡಲಿದ್ದಾರೆ. ಪ್ರತಿಪಕ್ಷಗಳನ್ನು ಕೆಣಕುವ ಜತೆಗೆ ಸರ್ಕಾರದ 4 ವರ್ಷಗಳ ಸಾಧನೆಯ ಪಟ್ಟಿಯನ್ನು ಪ್ರಸ್ತುತಪಡಿಸಲಿದ್ದಾರೆ.

ಶಿವಸೇನೆ ಸಾಥ್?

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನಗಳಿಂದಲೂ ಅಸಮಾಧಾನ ಹೊರಹಾಕುತ್ತಿರುವ ಶಿವಸೇನೆ ಅವಿಶ್ವಾಸ ಗೊತ್ತುವಳಿ ಪರೀಕ್ಷೆಯಲ್ಲಿ ಎನ್​ಡಿಎ ಬೆಂಬಲಿಸುವ ಬಗ್ಗೆ ಅನುಮಾನಗಳಿದ್ದವು. ಆದರೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಶಿವಸೇನೆ ವಿಶ್ವಾಸ ಗಳಿಸುವಲ್ಲಿ ಯಶ ಕಂಡಿದ್ದಾರೆ. ಆದರೆ ಎನ್​ಡಿಎಗೆ ಮತ ಹಾಕುವ ಕುರಿತು ಶುಕ್ರವಾರ ನಿರ್ಧರಿಸುವುದಾಗಿ ಶಿವಸೇನೆ ತಿಳಿಸಿದೆ.

ಒಗ್ಗಟ್ಟಿಗೆ ಸವಾಲು

ನಾವು ಒಗ್ಗೂಡಿದರೆ ಮಾತ್ರ ಬಿಜೆಪಿಯನ್ನು ಸೋಲಿಸಲು ಸಾಧ್ಯವೆಂದು ಈಗ ಪ್ರತಿಪಕ್ಷ ಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೂ, ನಾಯಕತ್ವ, ಸೀಟು ಹಂಚಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ, ಸಂಖ್ಯಾಬಲವಿಲ್ಲದಿದ್ದರೂ, ವಿಪಕ್ಷಗಳಲ್ಲಿ ರಾಜಕೀಯ ಒಗ್ಗಟ್ಟಿದೆಯೇ ಇಲ್ಲವೇ ಎಂಬುದರ ಅನಾವರಣಕ್ಕೂ ಸಂಸತ್ತು ಸಾಕ್ಷಿಯಾಗಲಿದೆ.

ಬಹಿಷ್ಕಾರ?

ಸಂಖ್ಯಾಬಲದ ಹೋರಾಟದಲ್ಲಿ ಎನ್​ಡಿಎ ಗೆಲುವು ಬಹುತೇಕ ಖಚಿತ. ಹೀಗಾಗಿ ಸಂಸತ್ತಿನಲ್ಲಿ ಪ್ರತಿಪಕ್ಷಗಳ ವಿರುದ್ಧ ಪರಿಣಾಮಕಾರಿ ಭಾಷಣ ಮಾಡಿ ದೇಶದ ಗಮನಸೆಳೆಯುವ ಪ್ರಧಾನಿ ಮೋದಿ ಯತ್ನಕ್ಕೆ ಅವಕಾಶ ನೀಡಬಾರದು ಎಂದುಕೊಂಡಿರುವ ವಿಪಕ್ಷಗಳು ಅವರ ಭಾಷಣಕ್ಕೆ ಮುನ್ನವೇ ಸದನ ಬಹಿಷ್ಕರಿಸುವ ಸಾಧ್ಯತೆಯಿದೆ.

1999ರಲ್ಲೂ ನಮ್ಮ ಬಳಿ ಸಂಖ್ಯಾಬಲವಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದರು. ಈಗಲೂ ಅದನ್ನೇ ಹೇಳುತ್ತಿದ್ದಾರೆ. ಸೋನಿಯಾರಿಗೆ ಗಣಿತ ಗೊತ್ತಿಲ್ಲ. 1999ರ ಪುನರಾವರ್ತನೆಗೆ ಸಂಸತ್ತು ಶುಕ್ರವಾರ ಸಾಕ್ಷಿಯಾಗಲಿದೆ.

| ಅನಂತ್ ಕುಮಾರ್ ಸಂಸದೀಯ ವ್ಯವಹಾರಗಳ ಸಚಿವ

ಇಂದು ಸಂಸತ್​ನಲ್ಲಿ

# 12 ಗಂಟೆಗೆ ಗೊತ್ತುವಳಿ ಮೇಲೆ ಚರ್ಚೆ ಆರಂಭ

# ಆರಂಭಿಕ ಭಾಷಣಕಾರರು ಯಾರು ಸ್ಪಷ್ಟವಾಗಿಲ್ಲ

# ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ಭಾಷಣ

# ಸತತ 8 ಗಂಟೆಗಳ ಕಾಲ ಚರ್ಚೆ

# ಮಧ್ಯಾಹ್ನದ ಭೋಜನಕ್ಕೆ ಬಿಡುವಿಲ್ಲ

# ಶೂನ್ಯವೇಳೆ ಮತ್ತು ಪ್ರಶ್ನೋತ್ತರ ವೇಳೆ ರದ್ದು

# ಮೋದಿ ಭಾಷಣದ ಬಳಿಕ ಸಂಸದರ ಮತದಾನ ನಿರೀಕ್ಷೆ

10 ಭಾಷೆ ಬಳಸಿದ ನಾಯ್ಡು

ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರು ಕಲಾಪದಲ್ಲಿ 22 ಭಾಷೆಗಳಲ್ಲಿ ಮಾತನಾಡಲು ಅವಕಾಶ ಕೊಟ್ಟ ಬೆನ್ನಲ್ಲೇ ಖುದ್ದು ನಾಯ್ಡು ಅವರು 10 ಭಾಷೆಗಳಲ್ಲಿ ಮಾತನಾಡಿ ಮೆಚ್ಚುಗೆ ಗಳಿಸಿದ್ದಾರೆ. ಕನ್ನಡ, ಬಂಗಾಳಿ, ಗುಜರಾತಿ, ಮಲೆಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ತಮಿಳು ಹಾಗೂ ತೆಲುಗಿನಲ್ಲಿ ಅವರು ಮಾತನಾಡಿದರು.

ಆರ್ಥಿಕ ಅಪರಾಧ ಮಸೂದೆ ಪಾಸ್

ಆರ್ಥಿಕ ಅಪರಾಧ ತಡೆ ವಿಧೇಯಕ ವನ್ನು ಲೋಕಸಭೆ ಅಂಗೀಕರಿಸಿದೆ. ದೇಶದಲ್ಲಿ 100 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಆರ್ಥಿಕ ವಂಚನೆ ಮಾಡಿ ವಿದೇಶಕ್ಕೆ ಪರಾರಿ ಯಾದ ಆರ್ಥಿಕ ಅಪರಾಧಿಗಳ ವಿರುದ್ಧದ ಕ್ರಮಕ್ಕಾಗಿ ಈ ವಿಧೇಯಕ ತರಲಾಗಿದೆ. ಈಗಾಗಲೇ ಈ ಕಾಯ್ದೆಯು ಸುಗ್ರೀವಾಜ್ಞೆ ಮೂಲಕ ದೇಶದಲ್ಲಿ ಜಾರಿಯಲ್ಲಿದೆ. ಪ್ರತಿಪಕ್ಷ ಗಳಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಫ್​ಆರ್​ಡಿಐ ಹಾಗೂ ಆರ್​ಟಿಐ ತಿದ್ದುಪಡಿ ವಿಧೇಯಕವನ್ನು ಪ್ರಸಕ್ತ ಅಧಿವೇಶನದಲ್ಲಿ ಮಂಡಿಸದಿರಲು ಸರ್ಕಾರ ನಿರ್ಧರಿಸಿದೆ.