ಕ್ವಾರಿಗಳಿಗೆ ಹಾಕಿಲ್ಲ ಬೇಲಿ

ಭರತ್ ಶೆಟ್ಟಿಗಾರ್ ಮಂಗಳೂರು

ಪ್ರತಿವರ್ಷ ಮಳೆಗಾಲದಲ್ಲಿ ಕನಿಷ್ಠ ಒಂದೆರಡು ಬಲಿ ಪಡೆಯುವ ಕ್ವಾರಿಗಳು ಈ ಬಾರಿಯೂ ಬಲಿಗೆ ಕಾಯುತ್ತಿದೆಯೇ?

ಹೌದು ಎನ್ನಬಹುದು. ಕಾರಣ ಕಲ್ಲು ತೆಗೆದು ಕ್ವಾರಿ ನಿರ್ಮಾಣ ಮಾಡಿದ ಬಳಿಕ ಅವುಗಳನ್ನು ಹಾಗೇ ಬಿಡಲಾಗಿದೆ. ಕ್ವಾರಿಗಳಿಗೆ ತಡೆ ಬೇಲಿ ನಿರ್ಮಿಸಬೇಕು, ಸೂಚನಾ ಫಲಕ ಅಳವಡಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡಿರುವ ಸೂಚನೆ ಕೇವಲ ಆದೇಶಕ್ಕೆ ಮಾತ್ರ ಎಂಬಂತಾಗಿದೆ. ಹಲವು ಹಳೇ ಕ್ವಾರಿಗಳನ್ನು ಹಾಗೇ ಬಿಡಲಾಗಿದೆ. ಖಾಸಗಿ ಸ್ಥಳದಲ್ಲಿ ಪ್ರತಿವರ್ಷ ಅಕ್ರಮವಾಗಿ ಕಲ್ಲು ತೆಗೆದು ಬೃಹತ್ ಹೊಂಡಗಳು ನಿರ್ಮಾಣವಾಗುತ್ತಿವೆ. ಇವುಗಳು ಮಳೆಗಾಲದಲ್ಲಿ ನೀರು ತುಂಬಿ ಮಕ್ಕಳನ್ನು ಆಕರ್ಷಿಸಿ ಅವಘಡಕ್ಕೆ ಕಾರಣವಾಗುತ್ತಿವೆ. ಜಿಲ್ಲೆಯ ಹಲವೆಡೆ ಇಂತಹ ಕ್ವಾರಿಗಳಿವೆ.

ಜಿಲ್ಲೆಯಲ್ಲಿ ಪ್ರತಿವರ್ಷ ಜಿಲ್ಲೆಯಲ್ಲಿ ಕ್ವಾರಿ ದುರಂತಗಳು ಸಂಭವಿಸುತ್ತಿವೆ. 2014ರ ಜುಲೈ 20ರಂದು ಒಂದೇ ದಿನ ಮಿಜಾರು ದಡ್ಡಿಯಲ್ಲಿ ಮೂವರು ಹಾಗೂ ಬೆಳುವಾಯಿಯಲ್ಲಿ ಇಬ್ಬರು ಪುಟ್ಟ ಹೆಣ್ಮಕ್ಕಳು ಕ್ವಾರಿಗೆ ಬಿದ್ದು ಮೃತಪಟ್ಟ ಬಳಿಕ ಜಿಲ್ಲಾಡಳಿತ ಕ್ವಾರಿಗಳ ಕುರಿತಂತೆ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಖಾಲಿ ಕ್ವಾರಿಗಳನ್ನು ಮುಚ್ಚುವಂತೆ ಹಾಗೂ ಮುಚ್ಚಲು ಸಾಧ್ಯವಾಗದಿರುವುದಕ್ಕೆ ತಡೆಬೇಲಿ ಹಾಕುವಂತೆ ಸೂಚನೆ ನೀಡಿತ್ತು. ಕಳೆದ ವರ್ಷ ಜು.9ರಂದು ಅಡ್ಯಾರ್‌ಪದವಿನಲ್ಲಿ ತಮೀಮ್ (13), ಜುಲೈ 15ರಂದು ಬಜ್ಪೆ ಗುಂಡಾವುಪದವಿನಲ್ಲಿ ಸಂಜಯ್ (16) ಮೃತಪಟ್ಟಿದ್ದರು.

ಜಿಲ್ಲೆಯಲ್ಲಿ ಸುಮಾರು 400ರಷ್ಟು ಕಲ್ಲಿನ ಕ್ವಾರಿಗಳಿದ್ದು, ಪ್ರತಿವರ್ಷ ಇವುಗಳ ಸಂಖ್ಯೆ ಹೆಚ್ಚಾಗುತ್ತದೆ. ನಿಯಮಾನುಸಾರ ಕಲ್ಲಿನ ಕ್ವಾರಿ ಮಾಡಬೇಕಿದ್ದರೆ ಕಂದಾಯ ಮತ್ತು ಅರಣ್ಯ ಇಲಾಖೆಯವರಿಂದ ನಿರಾಕ್ಷೇಪಣಾ ಪತ್ರ ಪಡೆದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಜತೆ ಲೀಸ್ ಒಪ್ಪಂದ ಮಾಡಿಕೊಂಡಿರಬೇಕು. ಆದರೆ ಅನೇಕ ಪ್ರಕರಣಗಳಲ್ಲಿ ಈ ರೀತಿ ಲೀಸ್ ಪಡೆಯದೆ ಬೇಕಾಬಿಟ್ಟಿ ಕಲ್ಲಿಗಾಗಿ ಹೊಂಡ ತೆಗೆಯಲಾಗಿದೆ. ಗಣಿ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳುವಾಗ ಗುತ್ತಿಗೆದಾರರಿಗೆ ಕಲ್ಲು ತೆಗೆದ ಬಳಿಕ ಹೊಂಡ ಮುಚ್ಚುವಂತೆ ಸೂಚಿಸಲಾಗುತ್ತದೆ. ಕೆಲವು ಜಮೀನಿನ ಮಾಲೀಕರು ಅದನ್ನು ಕೆರೆಯಾಗಿ ಉಪಯೋಗಿಸುವ ಉದ್ದೇಶದಿಂದ ಹಾಗೇ ಬಿಡುತ್ತಾರೆ. ಅದಕ್ಕೆ ತಡೆಗೋಡೆ ನಿರ್ಮಾಣಕ್ಕೂ ಮುಂದಾಗದೆ ದುರಂತಕ್ಕೆ ದಾರಿಯಾಗುತ್ತಿದೆ.

ಮಾಹಿತಿ ಕೇಳಿದ ಗ್ರಾಪಂ: ಬೆಳುವಾಯಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕ್ವಾರಿಗಳಿವೆ. ಸರ್ಕಾರಿ ಜಾಗದ ಜತೆಗೆ, ಖಾಸಗಿ ಜಮೀನಿನಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ ಕಲ್ಲು ತೆಗೆದು ಕ್ವಾರಿ ನಿರ್ಮಾಣವಾಗಿವೆ. ಆದ್ದರಿಂದ ಸಾರ್ವಜನಿಕರು ಇಂತಹ ಕ್ವಾರಿಗಳು ಗಮನಕ್ಕೆ ಬಂದರೆ ತಕ್ಷಣ ಮಾಹಿತಿ ನೀಡಬೇಕು ಎಂದು ಪಂಚಾಯಿತಿ ಜಾಹೀರಾತು ಮೂಲಕ ಪ್ರಕಟಣೆ ನೀಡಿದೆ. ಮಳೆಗಾಲದಲ್ಲಿ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಇದರ ಉದ್ದೇಶ ಎನ್ನುತ್ತಾರೆ ಪಂಚಾಯಿತಿ ಪಿಡಿಒ.

ಬೆಳುವಾಯಿಯಲ್ಲಿ ಹಿಂದೆ ಕ್ವಾರಿ ದುರಂತ ಸಂಭವಿಸಿವೆ. ಆದ್ದರಿಂದ ಈ ಬಾರಿ ಮೊದಲೇ ಎಚ್ಚರಿಕೆ ವಹಿಸಿ ಅಪಾಯಕಾರಿ ಸ್ಥಿತಿಯಲ್ಲಿರುವ ಕಲ್ಲುಕ್ವಾರಿಗಳು, ಹೊಂಡ, ಅನುಪಯುಕ್ತ ಕೊಳವೆ ಬಾವಿಗಳಿದ್ದಲ್ಲಿ ಪಂಚಾಯಿತಿಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ಸೂಚಿಸಿದ್ದೇವೆ. ಸರ್ಕಾರಿ ಜಾಗದಲ್ಲಿರುವ ಕ್ವಾರಿಗಳಿಗೆ ತಂತಿ ಬೇಲಿ ಅಳವಡಿಸಲಾಗಿದೆ. ಖಾಸಗಿಯವರಿಗೆ ಬೇಲಿ ಅಳವಡಿಸುವಂತೆ ಸೂಚಿಸಲಾಗಿದೆ.
ಭೀಮಾ ನಾಯಕ ಬಿ. ಬೆಳುವಾಯಿ ಗ್ರಾಪಂ ಪಿಡಿಒ

Leave a Reply

Your email address will not be published. Required fields are marked *