ಐಟಿ ಕೇಸ್​ನಿಂದ ಡಿಕೆಶಿಗಿಲ್ಲ ಮುಕ್ತಿ

ಬೆಂಗಳೂರು: ದೆಹಲಿ ಫ್ಲಾ್ಯಟ್​ಗಳಲ್ಲಿ 8.5 ಕೋಟಿ ರೂ. ಪತ್ತೆ, ತೆರಿಗೆ ವಂಚನೆ ಸಂಬಂಧ ಆದಾಯ ತೆರಿಗೆ ಇಲಾಖೆ (ಐಟಿ) ದಾಖಲಿಸಿದ ಪ್ರಕರಣದಿಂದ ಕೈಬಿಡುವಂತೆ ಕೋರಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಐಟಿ ಪ್ರಕರಣದಿಂದ ಮುಕ್ತಿಗೊಳ್ಳುವ ನಿರೀಕ್ಷೆಯಲ್ಲಿದ್ದ ಡಿಕೆಶಿಗೆ ನಿರಾಸೆಯಾಗಿದೆ.

ದೆಹಲಿ ಫ್ಲಾ್ಯಟ್​ಗಳಲ್ಲಿ 8.5 ಕೋಟಿ ರೂ. ಪತ್ತೆ ಪ್ರಕರಣದಲ್ಲಿ 1ನೇ ಆರೋಪಿ ಡಿಕೆಶಿ ಮತ್ತು ಅವರ ಆಪ್ತ ಸಚಿನ್ ನಾರಾಯಣ, ಸುನೀಲ್​ಕುಮಾರ್ ಶರ್ಮ, ಅಂಜನೇಯ ಹನುಮಂತಯ್ಯ ಮತ್ತು ಎನ್. ರಾಜೇಂದ್ರನ್ ಕ್ರಮವಾಗಿ 2 ರಿಂದ 5ನೇ ಆರೋಪಿ ಗಳಾಗಿದ್ದಾರೆ. ಮುಂದಿನ ವಿಚಾರಣೆಗೆ ಹಾಜರಾಗು ವಂತೆ ಸೂಚಿಸಿ ನ್ಯಾಯಾಲಯ ಅರ್ಜಿಯನ್ನು ವಿಚಾರಣೆ ಜು.3ಕ್ಕೆ ಮುಂದೂಡಿದೆ.

2017ರ ಆಗಸ್ಟ್​ನಲ್ಲಿ ಡಿ.ಕೆ ಶಿವಕುಮಾರ್, ಕುಟುಂಬ ಸದಸ್ಯರು, ಸಂಬಂಧಿಕರು, ಆಪ್ತರ ಮನೆ, ಕಚೇರಿಗಳಲ್ಲಿ ಐಟಿ ಅಧಿಕಾರಿಗಳು 5 ದಿನಗಳ ಕಾಲ ಶೋಧ ನಡೆಸಿದ್ದರು. ಕೋಟ್ಯಂತರ ರೂ. ಮೌಲ್ಯದ ನಗದು, ಆಭರಣ, ಸ್ಥಿರಾಸ್ತಿ ಸೇರಿ ಇನ್ನಿತರ ದಾಖಲೆಗಳನ್ನು ಪತ್ತೆಯಾಗಿದ್ದವು. ಶಿವಕುಮಾರ್ ತೆರಿಗೆ ವಂಚನೆ ಮಾಡಿ ಕುಟುಂಬ ಸದಸ್ಯರ ಹೆಸರಿನಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ಬೆಳಕಿಗೆ ಬಂದಿದೆ. ಸ್ನೇಹಿತರು, ಸಂಬಂಧಿಕರ ಪಾಲುದಾರಿಕೆ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಐಟಿ ಇಲಾಖೆ ದೂರಿನಲ್ಲಿ ಆರೋಪಿಸಿತ್ತು.

ಇದನ್ನು ಪ್ರಶ್ನಿಸಿದ ಶಿವಕುಮಾರ್, ಕಾನೂನಬದ್ಧ ವಾಗಿ ವ್ಯವಹಾರ ನಡೆಸಿ ಸಂಪಾದಿಸಿದ್ದೇನೆ. ಐಟಿ ಇಲಾಖೆಗೆ ಪ್ರತಿವರ್ಷ ರಿಟರ್ನ್ ಸಲ್ಲಿಸುತ್ತಿದ್ದೇನೆ. ಆಸ್ತಿ ಸಂಬಂಧ ತೆರಿಗೆ ಪಾವತಿ ಮಾಡುತ್ತಿದ್ದೇನೆ. ಐಟಿ ಇಲಾಖೆಯು ಆರ್ಥಿಕ ವರ್ಷದ ನಡುವಿನಲ್ಲಿ ಕೇಸ್ ದಾಖಲಿಸಿದೆ. ಆಸ್ತಿ ಸಂಪಾದನೆ ಮತ್ತು ತೆರಿಗೆ ಪಾವತಿ ಕುರಿತು ಸೂಕ್ತ ರೀತಿ ಮೌಲ್ಯಮಾಪನ ಮಾಡಿಲ್ಲ. ಐಟಿ ಇಲಾಖೆ ದಾಖಲಿಸಿರುವ ಪ್ರಕರಣ ಲೋಪದೋಷ ಗಳಿಂದ ಕೂಡಿದೆ. ಹೀಗಾಗಿ, ಆರೋಪದಿಂದ ಕೈ ಬಿಡುವಂತೆ ಕೋರ್ಟ್ ಮೊರೆ ಹೋಗಿದ್ದರು.

ಇದನ್ನು ನಿರಾಕರಿಸಿದ ಐಟಿ ಪರ ವಕೀಲರು, ದಾಳಿ ವೇಳೆ ಪತ್ತೆಯಾದ ಹಣ, ಆಭರಣಕ್ಕೆ ಸಮರ್ಪಕ ದಾಖಲೆ ನೀಡುವಲ್ಲಿ ಆರೋಪಿಗಳು ವಿಫಲ ರಾಗಿದ್ದಾರೆ. ಐಟಿ ಕಾಯ್ದೆ ಅನುಸಾರ ಸೂಕ್ತ ದಾಖಲೆ ಗಳನ್ನು ಒದಗಿಸುವಂತೆ 120 ದಿನ ಕಾಲಾವಕಾಶ ನೀಡಲಾಗಿತ್ತು. ಆದರೆ, ಸಚಿವರು ನೀಡಿಲ್ಲ. ಹೀಗಾಗಿ ಪ್ರಕರಣದಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ವಾದ ಮಂಡಿಸಿದ್ದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.

ಹವಾಲಾ ಮೂಲಕ ಪಕ್ಷದ ಹೈಕಮಾಂಡ್​ಗೆ ಕಪ್ಪ ಕಾಣಿಕೆ?

ಕಾಂಗ್ರೆಸ್ ಹೈಕಮಾಂಡ್​ಗೆ ಹವಾಲಾ ಮೂಲಕ ಸಚಿವರು ಹಣ ಸಾಗಿಸುತ್ತಿದ್ದರು. ಅದಕ್ಕಾಗಿ ತಮ್ಮ ಆಪ್ತರು, ಸಹಚರನ್ನು ಬಳಸಿಕೊಂಡಿದ್ದರು. ಅಕ್ರಮ ಹಣ ಸಂಗ್ರಹಿಸಲು ದೆಹಲಿಯಲ್ಲಿ ಸಫ್ಜರ್​ಜಂಗ್ ಅಪಾರ್ಟ್ ಮೆಂಟ್​ನಲ್ಲಿ ಫ್ಲಾ್ಯಟ್ ಖರೀದಿಸಿದ್ದರು. ಐಟಿ ದಾಳಿ ವೇಳೆ ಫ್ಲಾ್ಯಟ್​ನ ವಿವಿಧ ಲಾಕರ್​ಗಳಲ್ಲಿ 8.5 ಕೋಟಿ ರೂ. ಪತ್ತೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಶಿವಕುಮಾರ್ಸೇರಿ ಆರೋಪಿಗಳು ಸಮರ್ಪಕ ಉತ್ತರ ನೀಡಿಲ್ಲ. ಹಣ ಸಾಗಣೆ ಹವಾಲಾ ಜಾಲದ ಮೂಲಕ ನಡೆದಿದೆ ಎಂದು ಆರೋಪಿಸಿದ್ದ ಐಟಿ ಇಲಾಖೆ, ಸಚಿವರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿತ್ತು.

ಗರಿಷ್ಠ ಏಳು ವರ್ಷ ಜೈಲುಶಿಕ್ಷೆ

ಆದಾಯ ತೆರಿಗೆ ಕಾಯ್ದೆ 278, 277 ಮತ್ತು ಐಪಿಸಿ ಕಲಂ 193, 199 ಮತ್ತು 120ಬಿ ಅಡಿ ಕೇಸ್ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ. ಐಟಿ ಇಲಾಖೆಗೆ ತಪ್ಪು ರಿಟರ್ನ್ ಸಲ್ಲಿಕೆ, ಐಟಿ ಪರಿಶೀಲನೆ ವೇಳೆ ತಪ್ಪು ಹೇಳಿಕೆ ನೀಡುವುದು, ಸುಳ್ಳು ಸಾಕ್ಷ್ಯಾಧಾರ ನೀಡುವುದು, ಸಾಕ್ಷಾಧಾರವಾಗಿ ಪರಿಗಣಿಸುವ ದಾಖಲೆಯಲ್ಲಿ ಸುಳ್ಳು ಹೇಳಿಕೆ ನೀಡುವುದು ಮತ್ತು ಅಪರಾಧಿಕ ಸಂಚು ಆರೋಪದಲ್ಲಿ ಸಹ ಕೇಸ್ ದಾಖಲಾಗಿದೆ. ಆರೋಪ ಸಾಬೀತಾದಲ್ಲಿ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.

ಮೂರು ಪ್ರಕರಣದಲ್ಲಿ ಖುಲಾಸೆ

ಡಿಕೆಶಿ ವಿರುದ್ಧ ಐಟಿ ಇಲಾಖೆ ಒಟ್ಟು 4 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲಿಸಿತ್ತು. ಈ ಪೈಕಿ 3 ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಐಟಿ ಇಲಾಖೆಯು ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.

Leave a Reply

Your email address will not be published. Required fields are marked *