More

    ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕ್ಲಿಷ್ಟತೆ ಇನ್ನೂ ಮೂಡದ ಸ್ಪಷ್ಟತೆ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ತೀವ್ರಗೊಂಡಿರುವ ಕಾರಣ ಒಮ್ಮತ ಮೂಡದೆ ಹೊಸ ನಾಯಕತ್ವ ಘೋಷಣೆಯಲ್ಲಿ ಗೊಂದಲ ಮುಂದುವರಿದಿದೆ. ಮುಂದಿನ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವ ದೂರದೃಷ್ಟಿಯಲ್ಲಿ ಪ್ರಬಲ ಕೈನಾಯಕರು ಪೈಪೋಟಿ ನಡೆಸಿರುವುದು ಒಂದೆಡೆಯಾದರೆ, ಮುಂದೆ ಸರ್ಕಾರ ರಚಿಸುವ ಆಲೋಚನೆಯಲ್ಲಿ ಸಾವಧಾನಯುತ ಹೆಜ್ಜೆ ಇಡಲು ಪಕ್ಷ ಮುಂದಾಗಿರುವುದು ಮತ್ತೊಂದೆಡೆ.

    ಹೊಸ ನೇಮಕ ಘೋಷಣೆವರೆಗೆ ರಾಜ್ಯ ಘಟಕವನ್ನು ಕ್ರಿಯಾಶೀಲವಾಗಿಟ್ಟಿರಬೇಕೆಂಬ ಸಂದೇಶ ಎಐಸಿಸಿಯಿಂದ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮೂಲಕ ಹೊಸ ಆಯ್ಕೆ ಇನ್ನಷ್ಟು ತಡ ಆದರೂ ಆಗಬಹುದೆಂಬ ಚರ್ಚೆ ಪಕ್ಷದಲ್ಲೇ ನಡೆದಿದೆ.

    ಉಪಚುನಾವಣೆ ಫಲಿತಾಂಶ ಬಳಿಕ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ನಿಲುವಿಗೆ ಅಚಲರಾಗಿ ಕೆಪಿಸಿಸಿ ಕಚೇರಿಯಿಂದಲೂ ದೂರ ಉಳಿದಿದ್ದರು. ಇತ್ತ ಸಿದ್ದರಾಮಯ್ಯ ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೂ, ನಿರ್ಧಾರದಿಂದ ಹಿಂದೆ ಸರಿದಿದ್ದಲ್ಲದೆ ಪ್ರತಿಪಕ್ಷ ನಾಯಕ ಸ್ಥಾನ-ಶಾಸಕಾಂಗ ಪಕ್ಷ ನಾಯಕ ಸ್ಥಾನ ಪ್ರತ್ಯೇಕಗೊಳಿಸಬಾರದೆಂದು ಪಟ್ಟುಹಿಡಿದರು. ಈ ನಡುವೆ ಪಕ್ಷದ ಹಿಡಿತವನ್ನು ಸಿದ್ದರಾಮಯ್ಯ ಹಿಡಿತದಿಂದ ತಪ್ಪಿಸಲು ಪ್ರಯತ್ನ ಮುಂದುವರಿದಿದೆ. ಸ್ಪಷ್ಟವಾಗಿ ಸಿದ್ದರಾಮಯ್ಯ ಪರ ಮತ್ತು ವಿರೋಧ ಎಂಬ ಎರಡು ಗುಂಪುಗಳು ರಚನೆಯಾಗಿದ್ದು, ದೆಹಲಿ ಮಟ್ಟದಲ್ಲಿ ಒತ್ತಡ ತಂತ್ರ ಮುಂದುವರಿಸಿವೆ.

    ಹೈಕಮಾಂಡ್​ಗೆ ಸಿದ್ದರಾಮಯ್ಯ ಕೈಬಿಡಲು ಇಷ್ಟವಿಲ್ಲ. ಅವರು ಸೂಚಿಸಿದವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ಕೊಡಲು ಮನಸ್ಸಿಲ್ಲ ಎಂಬ ಸ್ಥಿತಿಯಾಗಿದೆ. ಒಂದೊಮ್ಮೆ ಆತುರ ಮಾಡಿದರೆ ಪಕ್ಷಕ್ಕೆ ಆಪತ್ತು, ಬೇರೆ ರಾಜ್ಯಗಳಲ್ಲಾದಂತೆ ಸಂಘಟನೆ ಮೇಲೆ ಪರಿಣಾಮ ಬೀಳಬಹುದೆಂಬ ಲೆಕ್ಕಾಚಾರದಲ್ಲಿ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದೆ. ರಾಜ್ಯದ ಮುಂದಿನ ಸಾರ್ವತ್ರಿಕ ಚುನಾವಣೆಯ ಮತ ಸಮೀಕರಣ ಗಮನದಲ್ಲಿಟ್ಟುಕೊಂಡು, ಪಕ್ಷದ ಚುಕ್ಕಾಣಿ ಯಾರಿಗೆ ವಹಿಸಿದರೆ ಸೂಕ್ತ ಎಂಬ ರಾಜಕೀಯ ಗುಣಾಕಾರದಲ್ಲಿ ದೆಹಲಿ ನಾಯಕರಿದ್ದಾರೆ. ಹಲವು ರಾಜ್ಯಗಳಲ್ಲಿ ಪಕ್ಷದ ಸ್ಥಿತಿ ಚೆನ್ನಾಗಿದ್ದಾಗ ನಾಯಕತ್ವ ನೀಡಿಕೆಯಲ್ಲಿ ಮಾಡಿಕೊಂಡ ಯಡವಟ್ಟಿನಿಂದ ಅಲ್ಲಿ ನೆಲೆ ಕಳೆದುಕೊಂಡಿದೆ. ಕೆಲಕಡೆ ಪುನಶ್ಚೇತನಗೊಂಡರೂ ಸಣ್ಣಪುಟ್ಟ ಪಕ್ಷಗಳಿಗೆ ಬೆಂಬಲ ನೀಡಿ ಕೈಕಟ್ಟಿಕುಳಿತುಕೊಳ್ಳುವ ವಾತಾವರಣವಿದೆ. ಹೀಗಾಗಿ ಕರ್ನಾಟಕದಲ್ಲಿ ಆತುರ ಮಾಡಬಾರದೆಂಬ ಸ್ಪಷ್ಟ ನಿಲುವು ಪಕ್ಷದ್ದಾಗಿದೆ.

    ಇತ್ತ ಆಕಾಂಕ್ಷಿಗಳ ಆಲೋಚನೆಯೇ ಬೇರೆೆ. ಈ ಬಾರಿ ಪಕ್ಷದ ಅಧ್ಯಕ್ಷರಾದವರು ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆ ಪ್ರಬಲರಾಗಿ ಬೆಳೆದರೆ, ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ ಎಂಬ ಲೆಕ್ಕಾಚಾರದಲ್ಲೇ ಪೈಪೋಟಿ ತೀವ್ರಗೊಳಿಸಿದ್ದಾರೆ. ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಆಯ್ಕೆ ಸಂಬಂಧ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಕರೆದು ಚರ್ಚೆ ನಡೆಸಿದ್ದು, ಒಮ್ಮತದಲ್ಲಿ ಎಲ್ಲರನ್ನೂ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಿದ್ದಾರೆ.

    ನಾಲ್ಕು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿ

    ಮೈಸೂರು: ಕೆಪಿಸಿಸಿ ಅಧ್ಯಕ್ಷರ ಜತೆಗೆ 4 ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸುವ ಚಿಂತನೆ ನಡೆಯುತ್ತಿದೆ ಎಂದು ಶಾಸಕ ಸತೀಶ್ ಜಾರಕಿಹೋಳಿ ಹೇಳಿದ್ದಾರೆ. ಪಕ್ಷವನ್ನು ರಾಜ್ಯದಲ್ಲಿ ಸದೃಢವಾಗಿ ಸಂಘಟಿಸುವ ಉದ್ದೇಶದಿಂದ ಜಾತಿ, ಪ್ರದೇಶವಾರು ಹಂಚಿಕೆ ಮಾಡಲಾಗುವುದು. ಒಂದು ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ಆಗುವ ಸಾಧ್ಯತೆ ಇದೆ. ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ವಿಳಂಬವಾಗಿದೆಯಷ್ಟೇ. ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಒಬ್ಬರೇ ಇರಲಿ ಎಂಬುದು ನನ್ನ ಸಲಹೆಯಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

    ಮಹಾರಾಷ್ಟ್ರ ಮಾದರಿ

    ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೀರ್ವನಕ್ಕೆ ಬದ್ಧ, ಹೈಕಮಾಂಡ್ ತೀರ್ಮಾನ ಯಾವಾಗ ಬರಲಿದೆ ಎಂದು ಹೇಳಲು ನನಗೆ ಭವಿಷ್ಯ ಗೊತ್ತಿಲ್ಲ, ಜಾದೂ ತಿಳಿದಿಲ್ಲ. ರಾಜ್ಯ ಕಾಂಗ್ರೆಸ್​ನಲ್ಲಿ ಮಹಾರಾಷ್ಟ್ರ ಮಾದರಿ ಅಳವಡಿಕೆ ಬಗ್ಗೆ ಏನು ಹೇಳಲ್ಲ. ನಾನು ಏನಾದರೂ ಹೇಳಿದರೆ, ಅದನ್ನು ತಪ್ಪಾಗಿ ಅರ್ಥೈಸಲಾಗುತ್ತೆ. ಶಾಸಕಾಂಗ ಪಕ್ಷ ನಾಯಕ, ಪ್ರತಿಪಕ್ಷ ನಾಯಕ ಪ್ರತ್ಯೇಕತೆ ಮಾಡುವುದನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ಮತ್ತು ಹೋರಾಟ ಮಾಡಬೇಕಿದ್ದು, ಎಐಸಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶೀಘ್ರವೇ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು.

    | ದಿನೇಶ್ ಗುಂಡೂರಾವ್ ಶಾಸಕ (ಉಡುಪಿಯಲ್ಲಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts