ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕೇವಲ ವದಂತಿ ಎಂದ ಶೋಭಾ ಕರಂದ್ಲಾಜೆ

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುತ್ತದೆ ಎಂಬುದು ಸುಳ್ಳು. ಈ ಬಗ್ಗೆ ಮಂಗಳೂರಿನ ಆರ್​ಎಸ್​ಎಸ್​ ಬೈಠಕ್​ನಲ್ಲಿ ಚರ್ಚೆಯಾಗಿಲ್ಲ. ಇದೆಲ್ಲವೂ ಊಹಾಪೋಹ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಬದಲಿಸಿ ಆ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವ ಕುರಿತು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ ಎಂಬ ಮಾಧ್ಯಮ ವರದಿಗಳ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಅವರು,”ಯಾರೋ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಇವತ್ತಿನವರೆಗೆ ಯಾವುದೇ ಚರ್ಚೆಯಾಗಿಲ್ಲ. ಮಾಧ್ಯಮಗಳಲ್ಲಿ ಬರುವ ಚರ್ಚೆ ಸುಳ್ಳು ಮಾಹಿತಿಯಿಂದ ಕೂಡಿದೆ. ಬಿಜೆಪಿಯನ್ನು ಅಭದ್ರಗಿಳಿಸಲು ಷಡ್ಯಂತ್ರ ನಡೆಯುತ್ತಿದೆ. ಇಂತಹ ಸುದ್ದಿ ಹಬ್ಬಿಸಿದವರು ಯಾರು ಎಂಬುದೂ ನಮಗೆ ತಿಳಿಯುತ್ತಿಲ್ಲ,” ಎಂದು ಹೇಳಿದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನ ವಿಚಾರದಲ್ಲಿ ಕೇಳಿ ಬರುತ್ತಿರುವ ರಾಜಕೀಯ ಹಸ್ತಕ್ಷೇಪದ ಆರೋಪದ ಕುರಿತು ಮಾತನಾಡಿರುವ ಅವರು, “ಕರ್ನಾಟಕ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ವಿಪಕ್ಷದ ನಾಯಕರನ್ನು ಗುರಿ ಮಾಡುತ್ತಿದೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು. ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದೆ. ಸಾಲಮನ್ನಾ ಘೋಷಣೆಯಾಗಿಯೇ ಉಳಿದಿದೆ. ರಾಜ್ಯದ ಪಾಲಿಗೆ ಸರ್ಕಾರ ಉಳಿದಿಲ್ಲ. ಹುಟ್ಟಿದ ತಕ್ಷಣವೇ ಸಮ್ಮಿಶ್ರ ಸರ್ಕಾರ ಸತ್ತಿದೆ,” ಎಂದು ಕಟು ಶಬ್ದಗಳಿಂದ ಟೀಕಿಸಿದರು.

ರೆಡ್ಡಿಯನ್ನು ಸಮರ್ಥಿಸಿಕೊಳ್ಳುವುದಿಲ್ಲ

ಇನ್ನು ಬಿಜೆಪಿ ಜನಾರ್ದನ ರೆಡ್ಡಿ ಅವರ ಪರವಾಗಿಲ್ಲ ಎಂದೂ ಅವರು ಹೇಳಿಕೊಂಡರು.”ಜನಾರ್ದನ ರೆಡ್ಡಿಯವರನ್ನು ನಾವು ಸಮರ್ಥಿಸುವುದಿಲ್ಲ. ರೆಡ್ಡಿಯನ್ನು ಸಮರ್ಥಿಸುವ ಅಗತ್ಯ ನಮಗೆ ಇಲ್ಲ,” ಎಂದರು.

ರಾಮ ಮಂದಿರ ನಿರ್ಮಾಣವಾಗಬೇಕು

ರಾಮಮಂದಿರ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬದ ಕುರಿತು ಮಾತನಾಡಿ, ” ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು. ದೇಶದ ಜನರು ರಾಮಮಂದಿರಕ್ಕಾಗಿ ಅಪೇಕ್ಷೆ ಪಟ್ಟಿದ್ದಾರೆ. ಮೋದಿ ಅವರು ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಕೇಂದ್ರ ಸರ್ಕಾರ ಸೂಕ್ತ ತಿರ್ಮಾನ ತೆಗೆದುಕೊಳ್ಳಲಿದೆ,” ಎಂದು ಹೇಳಿದರು.

ತೃಪ್ತಿ ದೇಸಾಯಿ ಪ್ರಚಾರ ಪ್ರಿಯೆ

ಶಬರಿ ಮಲೆಗೆ ದರ್ಶನಕ್ಕೆ ತೆರಳಿರುವ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರ ಕುರಿತು ಪ್ರತಿಕ್ರಿಯಿಸಿದ ಅವರು, ಕೇರಳಕ್ಕೆ ತೃಪ್ತಿ ದೇಸಾಯಿ ಭಕ್ತೆಯಂತೆ ಹೋಗಿಲ್ಲ. ಸ್ತ್ರೀವಾದಿಯ ಸೋಗಿನಲ್ಲಿ ಬಂದಿದ್ದಾರೆ. ಪ್ರಚಾರಕ್ಕಾಗಿ ಅವರು ಹೀಗೆ ಮಾಡುತ್ತಿದ್ದಾರೆ ಎಂದರು.