More

    ದ.ಕ.ಪಡಿತರ ಸೀಮೆಎಣ್ಣೆ ಮುಕ್ತ

     ವೇಣುವಿನೋದ್ ಕೆ.ಎಸ್.ಮಂಗಳೂರು
    ಕೇಂದ್ರ-ರಾಜ್ಯ ಸರ್ಕಾರಗಳಿಂದ ಅಡುಗೆ ಅನಿಲ ಹೊಂದಲು ಉತ್ತೇಜನೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಸೀಮೆ ಎಣ್ಣೆ ಮುಕ್ತ ಗೊಂಡಿದ್ದು ಪ್ರಸ್ತುತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆಯ ಲಭ್ಯತೆ ಇಲ್ಲವಾಗಿದೆ. ರಾಜ್ಯದಲ್ಲಿ ಶಿವಮೊಗ್ಗ, ದಾವಣಗೆರೆಯಂತಹ ಕೆಲವು ಜಿಲ್ಲೆಗಳು ಮೊದಲೇ ಸೀಮೆಎಣ್ಣೆ ಮುಕ್ತವಾಗಿದ್ದವು. ಅದರೊಂದಿಗೆ ದಕ್ಷಿಣ ಕನ್ನಡವೂ ಸೇರ್ಪಡೆಯಾಗಿದೆ.

    ಹಳ್ಳಿಗಳ ವಿದ್ಯುದೀಕರಣ ಮತ್ತು ಅಡುಗೆ ಅನಿಲ ವ್ಯಾಪ್ತಿ ವಿಸ್ತಾರವಾಗಲು ಶುರುವಾದಂತೆಯೇ ಸೀಮೆಎಣ್ಣೆ ಬೇಡಿಕೆ ಕಡಿಮೆಯಾ ಗುವ ಬೆಳವಣಿಗೆ ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಶುರುವಾಗಿತ್ತು. ಕೇಂದ್ರ ಸರ್ಕಾರ ಉಜ್ವಲ ಯೋಜನೆ ಹಾಗೂ ರಾಜ್ಯ ಸರ್ಕಾರ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಗಳ ಮೂಲಕ ಗ್ಯಾಸೇತರ ರೇಷನ್ ಕಾರ್ಡ್‌ದಾರರನ್ನು ಗುರುತಿಸಿ, ಅವರನ್ನು ಅಡುಗೆ ಅನಿಲ ಜಾಲದಡಿ ತರುವ ಕೆಲಸ ಮಾಡಲಾಯಿತು. ಹಾಗಾಗಿ ಕಳೆದ ವರ್ಷವೇ ಪಡಿತರ ಸೀಮೆಎಣ್ಣೆ ಬೇಡಿಕೆ ತೀವ್ರ ಕುಸಿತ ಕಾಣತೊಡಗಿತ್ತು.
    ಪೂರೈಕೆದಾರರ ನಿರಾಸಕ್ತಿ: ಕಳೆದ ವರ್ಷ ಜಿಲ್ಲೆಯಲ್ಲಿ 40 ಕಿಲೋ.ಲೀ.ಟರ್(40 ಸಾವಿರ ಲೀಟರ್)ನಷ್ಟು ಸೀಮೆ ಎಣ್ಣೆ ಪಡಿತರ ಕಾರ್ಡ್‌ಗಳಿಗೆ ವಿತರಣೆಯಾಗುತ್ತಿತ್ತು. ಜಿಲ್ಲಾದ್ಯಂತ ಸೀಮೆ ಎಣ್ಣೆ ಎತ್ತುವಳಿ ಮಾಡಿ ಸರಬರಾಜು ಮಾಡಲು 15 ಮಂದಿ ಹೋಲ್‌ಸೇಲ್ ಡೀಲರುಗಳಿದ್ದರು. ಆದರೆ ಇದು ಬರಬರುತ್ತಾ ಕಡಿಮೆಯಾಗಿ 30 ಕಿಲೋ ಲೀಟರ್‌ಗೆ ಇಳಿಯಿತು. ಆ ಬಳಿಕ ಇಷ್ಟು ಕಡಿಮೆ ಮಂದಿಗೆ ವಿತರಣೆಯಾಗುವುದು ಲಾಭದಾಯಕ ಅಲ್ಲ ಎಂದು ಪೂರೈಕೆದಾರರು ಹಿಂದೆ ಸರಿದರು, ಲೈಸೆನ್ಸ್ ನವೀಕರಣದ ಗೋಜಿಗೆ ಹೋಗಲಿಲ್ಲ. ಹಾಗಾಗಿ ನಿಧಾನವಾಗಿ ಸೀಮೆ ಎಣ್ಣೆ ಬಳಕೆ ಕಡಿಮೆಯಾಗಿದೆ. ನಾವು ವೃಥಾ ಇಂಡೆಂಟ್ ಹಾಕುವುದು, ಆದರೆ ಎತ್ತುವಳಿಗೆ ಯಾವುದೇ ಡೀಲರ್‌ಗಳು ಬರದಿರುವುದು ನಡೆಯತೊಡಗಿ, ಕೊನೆಗೆ ಸೀಮೆ ಎಣ್ಣೆ ಕೈ ಬಿಡಲಾಯಿತು. ಕಳೆದ ಜೂನ್‌ನಿಂದ ಸೀಮೆ ಎಣ್ಣೆ ವಿತರಿಸುವುದನ್ನೇ ನಿಲ್ಲಿಸಲಾಗಿದೆ, ಕೆಲವರು ಮತ್ತೆಯೂ ಕೇಳುತ್ತಿದ್ದರು, ಪರಿಶೀಲನೆ ಮಾಡಿದರೆ ಹಲವರ ಮನೆಯಲ್ಲಿ ಗ್ಯಾಸ್ ಸಂಪರ್ಕ ಇತ್ತು, ಹಾಗಾಗಿ ಸೀಮೆ ಎಣ್ಣೆ ಕೊಡದಿರಲು ತೀರ್ಮಾನಿಸಲಾಯಿತು, ಯಾರೆಲ್ಲ ಸೀಮೆ ಎಣ್ಣೆಗೆ ಬೇಡಿಕೆ ಸಲ್ಲಿಸುತ್ತಾರೆಯೋ ಅವರಿಗೆ ಗ್ಯಾಸ್ ಸಂಪರ್ಕ ಪಡೆಯುವಂತೆ ತಿಳಿಹೇಳಲಾಯಿತು ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

     ಮೀನುಗಾರರಿಗೆ ನೇರ ತೈಲ ಕಂಪನಿಗಳಿಂದ ಪೂರೈಕೆ: ಪ್ರಸ್ತುತ ಸರ್ಕಾರವೂ ಜನರ ಆರೋಗ್ಯಕ್ಕೆ ಅಪಾಯಕಾರಿಯಾದ ಸೀಮೆ ಎಣ್ಣೆಯನ್ನು ಕೈಬಿಟ್ಟು ಗ್ಯಾಸ್‌ಗೇ ಒತ್ತು ನೀಡುತ್ತಿದೆ. ಆದರೂ ಕೈಗಾರಿಕಾ ಉದ್ದೇಶಗಳಿಗೆ ಬಿಳಿ ಸೀಮೆ ಎಣ್ಣೆ ನೀಡುವುದಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಅವಕಾಶ ನೀಡಲಾಗಿದೆ. ಆದರೆ ಅದಕ್ಕೆ ಸಾಕಷ್ಟು ನಿಯಮಾವಳಿಗಳಿರುವುದರಿಂದ ಮಾರಾಟಗಾರರು ಕಡಿಮೆ. ಮೀನುಗಾರರಿಗೆ ಬೋಟ್ ಚಲಾಯಿಸುವುದಕ್ಕೆ ಸಬ್ಸಿಡಿ ಸೀಮೆ ಎಣ್ಣೆಯನ್ನು ತೈಲ ಕಂಪನಿಗಳು ನೇರ ಮೀನುಗಾರಿಕಾ ಇಲಾಖೆಗೆ ನೀಡುತ್ತವೆ.

    ಉಜ್ವಲ ಯೋಜನೆಯಡಿ 30 ಸಾವಿರ ಸಂಪರ್ಕ, ಮುಖ್ಯಮಂತ್ರಿ ಅನಿಲಭಾಗ್ಯದಲ್ಲಿ 15 ಸಾವಿರದಷ್ಟು ಗ್ಯಾಸ್ ಕನೆಕ್ಷನ್ ಕೊಡಲಾಗಿದೆ, ಹಾಗಾಗಿ ಪ್ರಸ್ತುತ ಸೀಮೆ ಎಣ್ಣೆಗೆ ಡಿಮ್ಯಾಂಡಿಲ್ಲ. ನಮ್ಮದು ಸೀಮೆ ಎಣ್ಣೆ ಮುಕ್ತ ಜಿಲ್ಲೆಯಾಗಿದೆ.
    – ಸುನಂದಾ ಸಹಾಯಕ ನಿರ್ದೇಶಕರು, ಆಹಾರ ಇಲಾಖೆ

    ಉಡುಪಿಯಲ್ಲಿ ಸೀಮೆಎಣ್ಣೆ ಬಳಕೆ ಇಳಿಮುಖ
    ಉಡುಪಿ: ಜಿಲ್ಲೆಯಲ್ಲಿ ಶೇ.85ರಷ್ಟು ಅಧಿಕ ಗ್ಯಾಸ್ ಸಂಪರ್ಕ ಇರುವುದರಿಂದ ಸೀಮೆಎಣ್ಣೆ ಬಳಕೆ ಕುಟುಂಬಗಳು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿವೆ. ಈಗ ಗ್ರಾಮೀಣ ಭಾಗದ 8,995 ಪಡಿತರ ಕುಟುಂಬಗಳಿಗೆ ಕೋರಿಕೆಯಂತೆ ಸೀಮೆಎಣ್ಣೆ ಪೂರೈಕೆಯಾಗುತ್ತಿದೆ.
    ಈ ಹಿಂದೆ (2019-20 ದ್ವಿತೀಯ ತ್ರೈಮಾಸಿಕ ಜುಲೈನಿಂದ ಸೆಪ್ಟೆಂಬರ್‌ವರೆಗೆ) ಬಿಪಿಎಲ್, ಎಪಿಎಲ್ ಪಡಿತರಕ್ಕೆ ಸಂಬಂಧಿಸಿ ಕಾರ್ಕಳ 4755, ಕುಂದಾಪುರ 9380, ಉಡುಪಿ 5834 ಕುಟುಂಬಗಳು ಸೇರಿದಂತೆ ಒಟ್ಟು 19,969 ಕುಟುಂಬಗಳಿಗೆ ಸೀಮೆಎಣ್ಣೆ ಪೂರೈಕೆಯಾಗುತಿತ್ತು. 2019-20 ತೃತೀಯ ತ್ರೈಮಾಸಿಕ (ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ) ಸರ್ಕಾರ ಅನಿಲ ಸಂಪರ್ಕ ಇರುವ ಕುಟುಂಬಗಳನ್ನು ಪರಿಶೀಲಿಸಿ ಜಿಲ್ಲೆಗೆ ಶೇ.45ರಷ್ಟು ಸೀಮೆಎಣ್ಣೆ ಪೂರೈಕೆಯಲ್ಲಿ ಕಡಿತ ಮಾಡಲಾಗಿದ್ದು, ಈಗ 8995 ಕುಟುಂಬಗಳಿಗೆ ಮಾತ್ರ ಪೂರೈಕೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಬಿಪಿಎಲ್ ಹೊಂದಿರುವವರಿಗೆ 3 ಲೀಟರ್, ಎಪಿಎಲ್ ಹೊಂದಿರುವರಿಗೆ 1 ಲೀಟರ್ ಹಂಚಿಕೆ ಮಾಡಲಾಗುತ್ತಿದೆ.

    ಗ್ರಾಮೀಣ ಭಾಗದಲ್ಲಿ ಗ್ಯಾಸ್ ಸಂಪರ್ಕವಿರುವ ಪಡಿತರ ಕುಟುಂಬಗಳ ಕೋರಿಕೆ ಮೇರೆಗೆ 1 ಲೀಟರ್ ಸೀಮೆ ಎಣ್ಣೆ ವಿತರಿಸಲಾಗುತ್ತದೆ. ಗ್ರಾಮ ಪಂಚಾಯಿತಿಗೆ ಪತ್ರ ಬರೆದು, ಅನುಮತಿ ಪಡೆದ ಬಳಿಕವಷ್ಟೆ ಸೀಮೆ ಎಣ್ಣೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ರೀತಿ 96,688 ಪಡಿತರ ಕುಟುಂಬಗಳು 35 ರೂಪಾಯಿಯಂತೆ 1 ಲೀಟರ್ ಸೀಮೆ ಎಣ್ಣೆ ಪಡೆಯುತ್ತಿದೆ.
    ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆಯಾಗುತ್ತಿರುವ ಸಹಾಯಧನಯುಕ್ತ ಸೀಮೆಎಣ್ಣೆ ಬಳಕೆ ಮಾಡಲು ನೈಜ ಅನಿಲ ರಹಿತ ಫಲಾನುಭವಿ ಗುರುತಿಸಲು ವಿವರಗಳೊಂದಿಗೆ ಎಲ್ಲ ಜಂಟಿ, ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿತ್ತು. ಹಾಸನ, ಕೋಲಾರ, ರಾಯಚೂರು, ಚಿಕ್ಕಬಳ್ಳಾಪುರ, ರಾಮನಗರ ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಬಗ್ಗೆ ಕ್ರಮ ವಹಿಸಿ ಗಣನೀಯ ಅನಿಲ ಪಡಿತರ ಚೀಟಿ ಗುರುತಿಸಿ ಪರಿವರ್ತನೆ ಮಾಡಲಾಗಿದೆ. ಪ್ರಮುಖವಾಗಿ ಬೆಳಗಾವಿ, ಕಲಬುರಗಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅನಿಲ ಪಡಿತರ ಚೀಟಿ ಗುರುತಿಸಿ ಪರಿವರ್ತಿಸುವ ಕಾರ್ಯ ಕಳಪೆ ಮಟ್ಟದಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts