More

    ಬಂದ್ ಇಲ್ಲ, ಪ್ರತಿಭಟನೆ ಮಾತ್ರ

    ಮಂಗಳೂರು/ಉಡುಪಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ವಿವಿಧ ಬೇಡಿಕೆ ಮುಂದಿರಿಸಿ ಅಖಿಲ ಭಾರತ ಮಟ್ಟದಲ್ಲಿ ಕರೆ ನೀಡಲಾದ ಮುಷ್ಕರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರತಿಭಟನಾ ರೂಪದಲ್ಲಷ್ಟೇ ನಡೆಯಲಿದೆ.
    ಸಾರಿಗೆ ಸೇರಿದಂತೆ ಇತರೆ ವ್ಯವಸ್ಥೆಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಸಿಟಿ, ಎಕ್ಸ್‌ಪ್ರೆಸ್, ದೂರದ ಊರಿಗೆ ತೆರಳುವ ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಟ್ಯಾಕ್ಸಿ, ರಿಕ್ಷಾ ಸೇವೆಗಳಲ್ಲಿಯೂ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.

    ಮುಷ್ಕರಕ್ಕೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದರೂ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್, ಕರ್ಫ್ಯೂ ಇತ್ಯಾದಿಗಳಿಂದಾಗಿ ದ.ಕ. ಜಿಲ್ಲೆಯಲ್ಲಿ ಬಂದ್ ನಡೆಸದಿರಲು ನಿರ್ಧರಿಸಲಾಗಿದೆ. ಕೆನರಾ ಬಸ್ ಮಾಲೀಕರ ಸಂಘ, ಸಿಟಿ ಬಸ್ ಮಾಲೀಕರ ಸಂಘದವರು ಬಸ್‌ಗಳು ಎಂದಿನಂತೆ ಕಾರ್ಯವೆಸಗಲಿವೆ ಬಂದ್ ಇರುವುದಿಲ್ಲ ಎಂದು ತಿಳಿಸಿದ್ದಾರೆ. ‘ಕೆಎಸ್‌ಆರ್‌ಟಿಸಿ ನಿಗಮವು ಎಲ್ಲ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದು, ಹೀಗಾಗಿ ಬುಧವಾರ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಾಚರಿಸಲಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

    ಮುಷ್ಕರಕ್ಕೆ ಬೆಂಬಲ: ಕೆಲವು ಆಟೊ ರಿಕ್ಷಾ ಮತ್ತಿತರ ಸಂಘಟನೆಗಳು ಮಾತ್ರವೇ ಮುಷ್ಕರಕ್ಕೆ ಬೆಂಬಲ ಸೂಚಿಸಿರುವುದರಿಂದ ಸಾರ್ವಜನಿಕ ಜನಜೀವನದ ಮೇಲೆ ದೊಡ್ಡ ಮಟ್ಟಿನ ಪರಿಣಾಮ ಬೀರದು. ಕೆಲವು ಬ್ಯಾಂಕ್‌ಗಳ ಸಿಬ್ಬಂದಿ ಮುಷ್ಕರ ಬೆಂಬಲಿಸಿರುವುದರಿಂದ ಬ್ಯಾಂಕಿಂಗ್ ಸೇವೆ ವ್ಯತ್ಯಯವಾಗಬಹುದು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಮಂಗಳೂರು ಬಂದರು ಶ್ರಮಿಕರ ಸಂಘವು ಮುಷ್ಕರ ಬೆಂಬಲಿಸಿರುವುದರಿಂದ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀಳಬಹುದು. ಉಡುಪಿಯಲ್ಲಿ ಮುಷ್ಕರಕ್ಕೆ ವರ್ತಕರ ಸಂಘ ಬೆಂಬಲವಿದೆ, ಆದರೆ ಬಂದ್ ಮಾಡುವುದಿಲ್ಲ ಎಂದು ಸಂಘದ ಅಧ್ಯಕ್ಷ ಐರೊಡಿ ಸಹನಶೀಲ ಪೈ, ಕಾರ್ಯದರ್ಶಿ ಪಾದೆಮಠ ನಾಗರಾಜ್ ತಿಳಿಸಿದ್ದಾರೆ.

     ಪ್ರತಿಭಟನಾ ಸಭೆ: ಮಂಗಳೂರಿನ ಪುರಭವನದ ಆವರಣದಲ್ಲಿ ಜ.8ರಂದು ಬೆಳಗ್ಗೆ 10.30ರಿಂದ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ವಿವಿಧ ವರ್ಗದ ಕಾರ್ಮಿಕ ಸಂಘಟನೆಗಳ ಪ್ರಮುಖರು ಭಾಗವಹಿಸುವ ನಿರೀಕ್ಷೆಯಿದೆ. ಮಂಗಳೂರು ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉಡುಪಿಯ ಅಜ್ಜರಕಾಡಿನಲ್ಲಿ ಸಿಐಟಿಯು, ಸಿಪಿಎಂ ನೇತೃತ್ವದಲ್ಲಿ ಬೆಳಗ್ಗೆ 10.45ಕ್ಕೆ ಬೃಹತ್ ಪ್ರತಿಭಟನೆ ನಡೆಯಲಿದೆ.

     ಬುಧವಾರ ಬಂದ್ ಇರೋದಿಲ್ಲ. ಈ ಬಗ್ಗೆ ಕಾರ್ಮಿಕ ಸಂಘಟನೆ ನಾಯಕರೊಂದಿಗೆ ಮಾತನಾಡಿದ್ದೇವೆ. ಮುಷ್ಕರ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಧರಣಿ, ಪ್ರತಿಭಟನೆ ಮಾಡಬಹುದು. ಮೆರವಣಿಗೆಗೆ ಅವಕಾಶವಿಲ್ಲ. ಶಾಲಾ ಕಾಲೇಜು, ಬಸ್ ಸಂಚಾರ ಯಥಾಸ್ಥಿತಿ ಇರುತ್ತದೆ.
    – ಬಸವರಾಜ ಬೊಮ್ಮಾಯಿ, ಗೃಹಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts