ಸಂಪರ್ಕ ಸೇತುವೆ ಮರೀಚಿಕೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಸರಿಯಾದ ಸಂಪರ್ಕ ರಸ್ತೆ ಇಲ್ಲದೆ ಎರಡು ಗ್ರಾಮದ ಜನರು ಅತ್ತಿತ್ತ ಕಿಂಡಿ ಅಣೆಕಟ್ಟಿನ ಮೇಲೆ ನಡೆದಾಡಿಕೊಂಡು ಕಿ.ಮೀ.ಗಟ್ಟಲೇ ಹೊಲ ಗದ್ದೆ ದಾಟಿ ಸಾಗಬೇಕಾಗಿದೆ. ದಶಕದಿಂದಲೂ ಸೇತುವೆಗೆ ಬೇಡಿಕೆ ಕೇಳಿ ಬರುತ್ತಿದ್ದರೂ ಇಲ್ಲಿವರೆಗೂ ನಿರ್ಮಾಣವಾಗಿಲ್ಲ. ಇದರಿಂದ ಗ್ರಾಮಸ್ಥರಿಗೆ ನಿತ್ಯ ಸಂಕಟ.
ಕಾರ್ಕಳ ತಾಲೂಕಿನ ಮುಂಡ್ಕೂರು, ಮಂಗಳೂರು ತಾಲೂಕಿನ ಉಳೆಪಾಡಿ ಬಳ್ಕುಂಜೆ ಸಂಪರ್ಕ ಕಲ್ಪಿಸುವ ಸೇತುವೆ ಸಹಿತ ರಸ್ತೆ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ.

ಈ ಭಾಗದಲ್ಲಿ ಈ ಹಿಂದೆ ಇಲ್ಲಿನ ಕೃಷಿಕರ ಅನುಕೂಲಕ್ಕೆ ನಿರ್ಮಿಸಲಾದ ಶಾಂಭವಿ ನದಿ ಕಿಂಡಿ ಅಣೆಕಟ್ಟು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಕಿಂಡಿ ಅಣೆಕಟ್ಟು ಸಂಪೂರ್ಣ ಬಿರುಕು ಬಿಟ್ಟಿದ್ದು, ಅಣೆಕಟ್ಟಿನ ಎರಡೂ ಬದಿ ಹಾಕಿದ್ದ ತಡೆಬೇಲಿ ತುಂಡಾಗಿದೆ. ಅದರ ಮೂಲಕವೇ ಜನ ಮುಂಡ್ಕೂರಿನಿಂದ ಉಳೆಪಾಡಿ ಕಡೆಗೆ ಕಾಲ್ನಡಿಗೆ ಸಂಚಾರ ಮಾಡುತ್ತಿದ್ದಾರೆ.

ಎರಡು ಪುಣ್ಯ ಕ್ಷೇತ್ರಗಳಿಗೆ ಕೊಂಡಿ: ಇಲ್ಲಿ ಸೇತುವೆ ನಿರ್ಮಾಣವಾದರೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದಿಂದ ಮಂಗಳೂರು ತಾಲೂಕಿನ ಉಳೆಪಾಡಿ ಶ್ರೀ ಉಮಾಮಹೇಶ್ವರಿ ದೇವಳಕ್ಕೆ ಬಳ್ಕುಂಜೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಂಡಿಯಂತಾಗಲಿದೆ.

ವಾಹನ ಸೌಕರ್ಯ ಮರೀಚಿಕೆ: ಈ ಭಾಗದಲ್ಲಿ ಹಿಂದೆ ಇಲ್ಲಿನ ಕೃಷಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಶಾಂಭವಿ ನದಿ ಅಣೆಕಟ್ಟು ನೇಪಥ್ಯಕ್ಕೆ ಸೇರಿದ ಪರಿಣಾಮ ಈ ರಸ್ತೆಯೂ ಪ್ರಾಮುಖ್ಯತೆ ಕಳೆದುಕೊಂಡಿದೆ. ಪ್ರಸಕ್ತ ಪಲಿಮಾರು ಮತ್ತು ಸಂಕಲಕರಿಯದ ಅಣೆಕಟ್ಟುಗಳು ಸುವ್ಯವಸ್ಥಿತವಾಗಿರುವುರಿಂದ ಇಲ್ಲಿನ ಅಣೆಕಟ್ಟನ್ನು ಸೇತುವೆಯಾಗಿಸಿ ವಿಸ್ತರಿಸಿ ಮುಂಡ್ಕೂರು- ಉಳೆಪಾಡಿಗೆ ಸಂಪರ್ಕ ರಸ್ತೆ ನಿರ್ಮಿಸಿ ಈ ಭಾಗದ ಜನರ ಬವಣೆ ನೀಗಿಸಬೇಕೆಂದು ಎರಡು ಗ್ರಾಮದ ಜನ ಒತ್ತಾಯಿಸುತ್ತಿದ್ದಾರೆ. ರಸ್ತೆ ವ್ಯವಸ್ಥೆ ಇಲ್ಲದ ಪರಿಣಾಮ ಸುಮಾರು 4 ರಿಂದ 5 ಕಿ.ಮೀ ಜನ ಕಾಲು ನಡಿಗೆ ಸಂಚಾರ ನಡೆಸಬೇಕಾಗಿದೆ. ಉಳೆಪಾಡಿ ಗ್ರಾಮದ ಜನ ಮುಂಡ್ಕೂರು ದೇವಳ, ಕಾರ್ಕಳ, ಬೆಳ್ಮಣ್ ಪೇಟೆಗೆ ಹಾಗೂ ಅವಶ್ಯ ವಸ್ತುಗಳ ಖರೀದಿಗೆ ಮುಖ್ಯ ಪೇಟೆಗೆ ಬರಬೇಕಾದರೆ ರಸ್ತೆ ನಿರ್ಮಾಣ ಅನಿವಾರ್ಯ.

ನಿರ್ಮಾಣವಾಗಲಿ ಸೇತುವೆ: ಹಲವಾರು ವರ್ಷಗಳಿಂದ ಉಳೆಪಾಡಿ, ಬಳ್ಕುಂಜೆ ಭಾಗದ ಜನ ಶಾಂಭವಿ ನದಿ ದೋಣಿ ಮೂಲಕ ದಾಟಿ ಮುಂಡ್ಕೂರಿಗೆ ಬರುತ್ತಿದ್ದು, ಕೆಲವು ವರ್ಷಗಳ ಹಿಂದೆ ಶಾಂಭವಿ ನದಿಗೆ ಅಣೆಕಟ್ಟು ನಿರ್ಮಿಸಲಾಯಿತು. ಈ ಅಣೆಕಟ್ಟಿನ ಸೇತುವೆ ಮೇಲೆ ಜನ ಸಂಚಾರ ಆರಂಭಿಸಿದರು. ಬಳಿಕ ಅಣೆಕಟ್ಟು ನಿರ್ವಹಣೆ ವೈಫಲ್ಯದಿಂದ ನಿಂತು ಹೋಗಿದ್ದರೂ, ಸಣ್ಣ ಸೇತುವೆ ಮೂಲಕ ಜನ ನಡೆದಾಡಿ ದಡ ಸೇರುತ್ತಿದ್ದರು. ವಾಹನ ಸಂಚಾರ ಮಾತ್ರ ಮರೀಚಿಕೆಯಾಗಿತ್ತು. ಕಾರಣ ಸಂಪರ್ಕ ರಸ್ತೆಗೆ ಖಾಸಗಿಯವರು ಜಾಗ ನೀಡದಿರುವುದು. ಈಗ ಜನ ಜಾಗ ನೀಡಲು ಮುಂದೆ ಬಂದಿದ್ದು, ಇಲಾಖೆ ಹಾಗೂ ಜನಪ್ರತಿನಿಧಿಗಳು ಸೇತುವೆ ವಿಸ್ತರಣೆಗೆ ಮನಸ್ಸು ಮಾಡಬೇಕಾಗಿದೆ.

ನಾವು ನಿತ್ಯ ಕಾಲು ನಡಿಗೆಯಲ್ಲೇ ಸಂಚಾರ ನಡೆಸಬೇಕಾಗಿದ್ದು, ಮುಖ್ಯ ಪೇಟೆ ಸೇರಲು ತುಂಬ ತೊಂದರೆಯಾಗುತ್ತಿದೆ. ವಾಹನ ಓಡಾಡಲು ರಸ್ತೆ ವ್ಯವಸ್ಥೆಯಾಗಬೇಕಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಶ್ರಮ ವಹಿಸಬೇಕಾಗಿದೆ.
ರಮೇಶ್ ಶೆಟ್ಟಿ ಉಳೆಪಾಡಿ ಗ್ರಾಮಸ್ಥ

ಶಾಲಾ ಮಕ್ಕಳು ಹಾಗೂ ವೃದ್ಧರು ಇಲ್ಲಿ ಓಡಾಡುವುದೇ ಕಷ್ಟ. ಅಣೆಕಟ್ಟಿನ ಸೇತುವೆ ಮೇಲೆ ಓಡಾಡುವುದೆಂದರೆ ಭಯವಾಗುತ್ತದೆ. ಸ್ವಲ್ಪ ಆಯ ತಪ್ಪಿದರೂ ಅಪಾಯ ಗ್ಯಾರಂಟಿ. ಕಾಲು ನಡಿಗೆಯಲ್ಲಿ ಕಿ.ಮೀ. ಗಟ್ಟಲೆ ನಡೆಯುವ ಜತೆ ಪ್ರಾಣ ಭಯದಲ್ಲಿ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಉಷಾ ಪೂಜಾರಿ ಸ್ಥಳೀಯ ನಿವಾಸಿ

ಕೇಂದ್ರ ಸರ್ಕಾರದಿಂದ 10 ಕೋಟಿ ರೂ. ಮಂಜೂರಾಗಿದೆ. ಕೆಲವು ದಿನಗಳ ಹಿಂದೆ ಇಂಜಿನಿಯರ್‌ಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಬೇಗ ಸೇತುವೆ ನಿರ್ಮಾಣವಾಗುವ ನಿರೀಕ್ಷೆ ಇದೆ.
ರವೀಂದ್ರ ಶೆಟ್ಟಿ ಮುಂಡ್ಕೂರು ಗ್ರಾಪಂ ಉಪಾಧ್ಯಕ್ಷ

Leave a Reply

Your email address will not be published. Required fields are marked *