More

    ಕಸ ಸಂಗ್ರಹಣೆ ವೇಳೆ ಮಿಶ್ರಣ; ಸಂಸ್ಕರಣಾ ಘಟಕಗಳಿಗೆ ಕೆಲಸವಿಲ್ಲ ತ್ಯಾಜ್ಯ ವಿಲೇವಾರಿ, ವಿಂಗಡಣೆ ವಿಫಲ 

    ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಕಸವನ್ನು ಹಸಿ ಮತ್ತು ಒಣ ಕಸವಾಗಿ ಜನರು ವಿಂಗಡಿಸಿ ಆಟೋ ಟಿಪ್ಪರ್​ಗಳಿಗೆ ಕೊಡುತ್ತಿದ್ದಾರೆ. ಆದರೆ, ಸ್ವೀಕರಿಸಿದ ಕಸ ಕಾಂಪ್ಯಾಕ್ಟರ್​ಗಳಲ್ಲಿ ಮಿಶ್ರಣ ಮಾಡಲಾಗುತ್ತಿದ್ದು, ತ್ಯಾಜ್ಯ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.

    ಬೆಂಗಳೂರು ನಗರದಲ್ಲಿ 1.30 ಕೋಟಿ ಜನಸಂಖ್ಯೆಯಿದ್ದು, 198 ವಾರ್ಡ್​ಗಳಿಂದ ಪ್ರತಿನಿತ್ಯ 4 ಸಾವಿರ ಟನ್​ಗೂ ಹೆಚ್ಚು ಕಸ ಉತ್ಪಾದನೆಯಾಗುತ್ತಿದೆ. ಇದನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಪಾಲಿಕೆ ಗುತ್ತಿಗೆ ನೀಡಿದೆ. ಆದರೆ ಕಸ ಸಂಗ್ರಹಿಸುವ ಬಹುತೇಕ ಗುತ್ತಿಗೆದಾರರು ಆಟೋ ಟಿಪ್ಪರ್​ಗಳಲ್ಲಿ ಕಸ ಮಿಶ್ರಣ ಮಾಡಿ ತುಂಬುತ್ತಿದ್ದಾರೆ. ಹೀಗಾಗಿ, ಮೂಲದಲ್ಲೇ ಕಸ ವಿಂಗಡಣೆಯಾದರೂ ಸಮರ್ಪಕವಾಗಿ ನಿರ್ವಹಿಸಲು ಪಾಲಿಕೆ ವಿಫಲವಾಗುತ್ತಿದೆ. ಇದರಿಂದ ಜನರ ಮನಸ್ಥಿತಿಯೂ ಬದಲಾಗುತ್ತಿದೆ.

    ಸಂಸ್ಕರಣೆಗೆ ಹಸಿ ಕಸವಿಲ್ಲ: ಪಾಲಿಕೆ ವ್ಯಾಪ್ತಿಯ ಕಸದ ಸಂಸ್ಕರಣೆಗಾಗಿ ದೊಡ್ಡಬಿದರಕಲ್ಲು, ಕನ್ನಹಳ್ಳಿ, ಸೀಗೆಹಳ್ಳಿ, ಚಿಕ್ಕನಾಗಮಂಗಲ, ಕೂಡ್ಲುಗೇಟ್ ಬಳಿಯ ಕೆಸಿಡಿಸಿ ಘಟಕ, ಲಿಂಗದೇವನಹಳ್ಳಿ ಹಾಗೂ ಸುಬ್ರಹ್ಮಣ್ಯಪಾಳ್ಯ ಸೇರಿ 7 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ವಿುಸಲಾಗಿದೆ. ಇವುಗಳು ಒಟ್ಟು 1,600 ಟನ್ ಕಸ ಸಂಸ್ಕರಣೆ ಸಾಮರ್ಥ್ಯ ಹೊಂದಿವೆ. ಆದರೆ ಪಾಲಿಕೆಯ 198 ವಾರ್ಡ್​ಗಳಿಂದ 600 ಟನ್ ಮಾತ್ರ ಹಸಿ ಕಸ ಘಟಕಗಳನ್ನು ತಲುಪುತ್ತಿದೆ. ಹೀಗಾಗಿ ಸಾಮರ್ಥ್ಯವಿದ್ದರೂ ಘಟಕಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಯಂತ್ರಗಳು ತುಕ್ಕು ಹಿಡಿಯಲಾರಂಭಿಸಿವೆ.

    ಹಸಿಕಸ ಟೆಂಡರ್ ಸ್ಥಗಿತ

    ನಿಕಟಪೂರ್ವ ಮೇಯರ್ ನಾಗಲಾಂಬಿಕೆ ಅವರ ಅಧಿಕಾರದ ಅವಧಿಯಲ್ಲಿ 198 ವಾರ್ಡ್​ಗಳಿಂದ ಹಸಿ ಕಸ ಸಂಗ್ರಹಣೆಗೆ ಟೆಂಡರ್ ಕರೆಯಲಾಗಿತ್ತು. 2 ವಾರ್ಡ್ ಹೊರತುಪಡಿಸಿ ಉಳಿದ 196 ವಾರ್ಡ್ ಗಳಲ್ಲಿ ಹಸಿ ಕಸ ಸಂಗ್ರಹಣೆಗೆ ಗುತ್ತಿಗೆದಾರರು ಮುಂದೆ ಬಂದಿದ್ದರು. ಆದರೆ ಪೂರ್ವ ವಲಯದಲ್ಲಿ 40 ಟೆಂಡರ್​ದಾರರು ಕೋರ್ಟ್ ಮೆಟ್ಟಿಲೇರಿ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ, 110 ಟೆಂಡರ್​ಗಳ ಪ್ರಕ್ರಿಯೆ ಅರ್ಧಕ್ಕೆ ನಿಂತಿದೆ. ಇವುಗಳಲ್ಲಿ 45 ಟೆಂಡರ್​ಗಳಿಗೆ ಕೌನ್ಸಿಲ್ ಸಭೆ ಮತ್ತು ಸ್ಥಾಯಿ ಸಮಿತಿಯ ಒಪ್ಪಿಗೆ ದೊರೆತಿದೆ ಎಂಬುದು ಗಮನಾರ್ಹ. ಕೆಲಸಕ್ಕೆ ಅನುಮತಿ ಕೊಡುವ ಹಂತದಲ್ಲಿ ಮೇಯರ್ ಬದಲಾಗಿದ್ದಾರೆ.

    ಮಿಶ್ರ ಕಸದ ಪ್ರಮಾಣ ಏರಿಕೆ

    ಮನೆಮುಂದೆ ಆಟೋ ಟಿಪ್ಪರ್​ಗಳಲ್ಲಿ ಬರುವ ಪೌರಕಾರ್ವಿುಕರು ವಿಂಗಡಣೆ ಮಾಡಿದ ಕಸ ಸಂಗ್ರಹಿಸುತ್ತಿದ್ದರು. ಆದರೆ ಕಾಂಪ್ಯಾಕ್ಟರ್​ಗೆ ತುಂಬುವಾಗ ಎಲ್ಲ ಕಸ ಮರುಮಿಶ್ರಣ ಮಾಡಿ ತುಂಬಿ, ಭೂಭರ್ತಿಗೆ ಕಳಿಸಲಾಗುತ್ತಿದೆ. 6 ತಿಂಗಳ ಹಿಂದೆ 250 ಕಾಂಪ್ಯಾಕ್ಟರ್​ಗಳು ಮಿಶ್ರ ಕಸ ಸಂಗ್ರಹಣೆ ಮಾಡುತ್ತಿದ್ದವು. ಆದರೆ ಈಗ ಇಂಥ ಕಾಂಪ್ಯಾಕ್ಟರ್​ಗಳ ಸಂಖ್ಯೆ ದಿಢೀರನೆ 350ಕ್ಕೆ ಹೆಚ್ಚಳವಾಗಿದೆ. ಹೀಗಾಗಿ, ಭೂಭರ್ತಿಗೆ ಗುರುತಿಸಲಾದ ಸ್ಥಳಗಳು ಕೂಡ ಅವಧಿಗೆ ಮೊದಲೇ ಭರ್ತಿಯಾಗುತ್ತಿವೆ.

    ಶೇ.60 ಕಸ ವಿಂಗಡಣೆ

    ಕಳೆದ ವರ್ಷ ವಾರ್ಡ್​ಗಳಲ್ಲಿ ಕಸ ವಿಂಗಡಣೆ ಮಾಡುವುದನ್ನು ಪಾಲಿಕೆ ಕಡ್ಡಾಯಗೊಳಿಸಿತ್ತು. ಅದರಂತೆ ಗುತ್ತಿಗೆದಾರರು ಕೂಡ ವಿಂಗಡಣೆಗೊಂಡ ಕಸವನ್ನು ಸ್ವೀಕರಿಸುತ್ತಿದ್ದರು. ವಿಂಗಡಣೆ ಮಾಡದೆ ಕಸವನ್ನು ಸ್ವೀಕರಿಸದೆ, ಮಿಶ್ರ ಕಸ ಕೊಡುವವರಿಗೆ ದಂಡ ವಿಧಿಸಲಾಗುತ್ತಿತ್ತು. ಇದರಿಂದಾಗಿ ಮೂಲದಲ್ಲೇ ಕಸ ವಿಂಗಡಣೆಯಲ್ಲಿ ಶೇ.60 ಯಶಸ್ಸು ಸಾಧಿಸಲಾಗಿದೆ.

    ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಸದ ಸಮಸ್ಯೆ ತೀವ್ರವಾಗಿದೆ. ಇಂದೋರ್ ಮಾದರಿ ಮುಂದಿಟ್ಟುಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕಸ ಸಮಸ್ಯೆಗೆ ಕುರಿತು ಮೇಯರ್ ಒಂದು ಕೌನ್ಸಿಲ್ ಸಭೆಯನ್ನೂ ಮಾಡಿಲ್ಲ. ಕಸ ಭೂಭರ್ತಿ ಕೇಂದ್ರವೂ ತುಂಬಿದ್ದು, ಹೊಸ ಭೂಭರ್ತಿಯಲ್ಲಿ ಸುರಿಯಲು ಟೆಂಡರ್ ಆಗಿಲ್ಲ. ಮುಂದಿನ ತಿಂಗಳಿಂದ ಕಸದ ಸಮಸ್ಯೆ ಉಲ್ಬಣಿಸಲಿದೆ.

    | ಅಬ್ದುಲ್ ವಾಜಿದ್ ಬಿಬಿಎಂಪಿಯ ಪ್ರತಿಪಕ್ಷ ನಾಯಕ 

    | ಸತೀಶ್ ಕೆ.ಬಳ್ಳಾರಿ ಬೆಂಗಳೂರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts