ಪ್ರತ್ಯೇಕ ಉತ್ತರ ಕರ್ನಾಟಕ ಬಂದ್​ಗಿಲ್ಲ ಬೆಂಬಲ: ಜನಜೀನವ ಸಾಮಾನ್ಯ

ಹುಬ್ಬಳ್ಳಿ: ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್​ಗೆ ಜನಬೆಂಬಲ ವ್ಯಕ್ತವಾಗಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಜನಜೀವನ ಸಾಮಾನ್ಯವಾಗಿದ್ದು, ಜನರು ಎಂದಿನಂತೆ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬಂದ್​ಗೆಕರೆ ನೀಡಿದ್ದ ಸಂಘಟನೆಗಳ ನಡುವೆ ಸಹಮತ ಏರ್ಪಡದೆ ಹೋರಾಟಗಾರರೇ ಮೂರು ದಿಕ್ಕಿಗೆ ಹೊರಳಿದ್ದರಿಂದ ಬುಧವಾರವೇ ಬಂದ್ ಕರೆ ತನ್ನ ತೀವ್ರತೆ ಕಳೆದುಕೊಂಡಿದೆ. 13 ಜಿಲ್ಲೆಗಳಲ್ಲಿ ಹೋರಾಟ ನಡೆಸುವ ತೀರ್ಮಾನ ಬೆಂಬಲಿಸಿದ್ದ ಬಹುತೇಕ ಸಂಘಟನೆಗಳು ಬಂದ್​ಗೆ ಬೆಂಬಲಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದವು.

ಆ ಮೂಲಕ ನಮ್ಮ ಬೆಂಬಲ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟಕ್ಕೇ ಹೊರತು ಪ್ರತ್ಯೇಕ ರಾಜ್ಯಕ್ಕಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಪ್ರಮುಖವಾಗಿ ಬಂದ್​ಗೆ ಕರೆ ಕೊಟ್ಟಿದ್ದ ಉ.ಕ. ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಸಿಎಂ ಭರವಸೆ ಹಿನ್ನೆಲೆಯಲ್ಲಿ ಬಂದ್ ಹಿಂಪಡೆದಿರುವುದಾಗಿ ಘೋಷಿಸಿದ್ದರು. ಆದರೆ ಉತ್ತರ ಕರ್ನಾಟಕದ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಅವರು ಉತ್ತರ ಕರ್ನಾಟಕ ನಿರ್ಲಕ್ಷ್ಯ ಖಂಡಿಸಿ ಗುರುವಾರ ಬಂದ್ ಆಚರಿಸುವುದು ನಿಶ್ಚಿತ ಎಂದು ತಿಳಿಸಿದ್ದರು.

ಆದರೆ ಗುರುವಾರ ಬೆಳಗ್ಗೆ ಉತ್ತರ ಕರ್ನಾಟಕ ಭಾಗದ ಎಲ್ಲಾ 13 ಜಿಲ್ಲೆಗಳಲ್ಲಿ ಬಂದ್​ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗೆ ಕಂಡು ಬಂದ ಸ್ಥಿತಿ ಗತಿ ಹೀಗಿದೆ.

ಧಾರವಾಡ:ಧಾರವಾಡದಲ್ಲಿ ಎಂದಿನಂತೆ ಜನಜೀವನ ಪ್ರಾರಂಭವಾಗಿದ್ದು, ಶಾಲೆ-ಕಾಲೇಜುಗಳೂ ಪ್ರಾರಂಭವಾಗಿದೆ. ಬಂದ್​ಗೆ ಕರೆ ನೀಡಿದ್ದ ವಿವಿಧ ಸಂಘಟನೆಗಳು ಇನ್ನೂ ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿಲ್ಲ.

ಬೆಳಗಾವಿ: ಬೆಳಗಾವಿಯಲ್ಲಿ ಜನಜೀವನ ಸಹಜವಾಗಿದ್ದು, ಸರ್ಕಾರಿ ಬಸ್​, ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಇದೆ. ಎಂದಿನಂತೆ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಬೆಳಗ್ಗೆ 10.30ಕ್ಕೆ ಉ-ಕ ಅಭಿವೃದ್ದಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಯಿಂದ ಡಿಸಿ ಕಚೇರಿ ಮುಂದೆ ಧರಣಿ ನಡೆಸಲಿದ್ದಾರೆ. ಕರವೇ ಕಾರ್ಯಕರ್ತರು 1.30 ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.

ಗದಗ: ಗದಗನಲ್ಲಿ ಬಂದ್​ಗೆ ಯಾವುದೇ ಸಂಘಟನೆ ಬೆಂಬಲ ನೀಡಿಲ್ಲ. ಶಾಲಾ-ಕಾಲೇಜುಗಳು ಎಂದಿನಂತೆ ಆರಂಭವಾಗಲಿವೆ. ಬಂದ್ ಬಗ್ಗೆ ಜಿಲ್ಲಾಧಿಕಾರಿಗಳಿಂದ ಅಧಿಕೃತ ಆದೇಶ ಇಲ್ಲ ಎಂದು ಎಸ್​ಪಿ ಕೆ. ಸಂತೋಷ್​ ಬಾಬು ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ.

ಕಲಬುರಗಿ: ಕಲಬುರಗಿಯಲ್ಲಿ ಸಂಘಟನೆಗಳಿಂದ ಬಂದ್​ಗೆ ಬೆಂಬಲವಿಲ್ಲ, ಜನಜೀವನ ಎಂದಿನಂತೆ ಇದ್ದು, ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿದೆ. ಕನ್ನಡಪರ ಸಂಘಟನೆಗಳು , ರೈತ ಮುಖಂಡರು ಬಂದ್ ಗೆ ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಪ್ರತ್ಯೇಕ ಕಲ್ಯಾಣ ಕರ್ನಾಟಕ ಧ್ವಜಾರೋಹಣ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಳಗ್ಗೆ 10.30ಕ್ಕೆ ಕಲ್ಯಾಣ ಕರ್ನಾಟಕ ಹೆಸರಲ್ಲಿ ಧ್ವಜಾರೋಹಣ ನಡೆಯಲಿದೆ ಎಂದು ತಿಳಿದು ಬಂದಿದೆ.

ಬಳ್ಳಾರಿ: ಬಳ್ಳಾರಿಯಲ್ಲಿ ಬಂದ್​ಗೆ ಬೆಂಬಲ ಇಲ್ಲ. ಎಲ್ಲೆಡೆ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ವಾಹನ ಸಂಚಾರ ಆರಂಭವಾಗಿದೆ. ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.

ವಿಜಯಪುರ: ವಿಜಯಪುರದಲ್ಲಿ ಸಂಘಟನೆಗಳು ಬಂದ್​ಗೆ ಕರೆ ನೀಡಿಲ್ಲ. ಹಾಗಾಗಿ ಜನಜೀವನ ಎಂದಿನಂತೆ ಇದ್ದು, ವಾಹನ ಸಂಚಾರ ಸಹಜವಾಗಿದೆ.

ಹಾವೇರಿ: ಹಾವೇರಿಯಲ್ಲಿ ಬಂದ್​ಗೆ ಬೆಂಬಲವಿಲ್ಲ. ಆದರೆ ರೈತ ಸಂಘದಿಂದ ಬಂದ್​ಗೆ ಬೆಂಬಲಿಸಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ.

ಬಾಗಲಕೋಟೆ: ಬಾಗಲಕೋಟೆಯಲ್ಲಿ ಜನಜೀವನ ಎಂದಿನಂತೆ ಇದೆ. ಆದರೆ ಉತ್ತರ ಕರ್ನಾಟಕ ಹೋಟಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಮಾತ್ರ ಬಂದ್​ ಮಾಡುವುದಾಗಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ,

ಕೊಪ್ಪಳ:  ಕೊಪ್ಪಳದಲ್ಲಿ ಜನಜೀವನ ಎಂದಿನಂತೆ ಇದ್ದು, ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಬೆಳಗ್ಗೆ 11 ಗಂಟೆಗೆ ವಿವಿಧ ಕನ್ನಡ ಪರ ಸಂಘಟನೆಗಳು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.