ಕಾರ್ಕಳ ಪಶುವೈದ್ಯರ ಕೊರತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಬಹುತೇಕ ಗ್ರಾಮೀಣ ಭಾಗದ ರೈತಾಪಿ ವರ್ಗ ಹೈನುಗಾರಿಕೆಯಲ್ಲೇ ಜೀವನ ಸಾಗಿಸುತ್ತಿದ್ದು, ಇದೀಗ ತಮ್ಮ ಜಾನುವಾರುಗಳಿಗೆ ಕಾಯಿಲೆ ಬಂದರೆ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾದ್ಯಂತ ಪಶು ವೈದ್ಯರ ಕೊರತೆ ಕಂಡುಬರುತ್ತಿದೆ.

ಕಾರ್ಕಳ ತಾಲೂಕಿನಲ್ಲಿ 92 ವೈದ್ಯಾಧಿಕಾರಿಗಳ ಅಗತ್ಯ ಇದ್ದು, ಪ್ರಸ್ತುತ 24 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 41 ಸಹಾಯಕ ಸಿಬ್ಬಂದಿ ಹಾಗೂ ಪಶು ಪರೀಕ್ಷಕರ ಅಗತ್ಯ ಇದ್ದು, ಕೇವಲ 13 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.

5000 ಜಾನುವಾರುಗಳಿಗೊಂದು ಕೇಂದ್ರ: 5000 ಜಾನುವಾರುಗಳಿಗೊಂದು ಪಶು ಆಸ್ಪತ್ರೆ ಇರಬೇಕು ಎಂಬುದು ನಿಯಮ. ಕಾರ್ಕಳ ತಾಲೂಕಿನಲ್ಲಿ ಈಗಾಗಲೇ ಹೆಬ್ರಿ, ಬಜಗೋಳಿ, ಕಾರ್ಕಳದಲ್ಲಿ ಇಂತಹ ಕೇಂದ್ರ ಕಾರ್ಯಾಚರಿಸುತ್ತಿದೆ. ನಿಟ್ಟೆಯಲ್ಲಿ ಪಶು ಚಿಕಿತ್ಸಾಲಯ ಇದೆ. ಆದರೆ ಇಲ್ಲಿ ಕಾಯಂ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳ ಕೊರತೆ ಕಾಣುತ್ತಿದೆ. ಹೀಗಾಗಿ ಹೈನುಗಾರರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ. ಕಾರ್ಕಳ ಕೇಂದ್ರದಲ್ಲಿ 3 ಹಿರಿಯ ವೈದ್ಯಾಧಿಕಾರಿಗಳ ಅಗತ್ಯ ಇದ್ದರೂ ಒಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಾರ್ಕಳ ತಾಲೂಕಿನಾದ್ಯಂತ ಕಳೆದ ಸೆಪ್ಟಂಬರ್‌ವರೆಗಿನ ಮಾಹಿತಿಯಂತೆ 75 ಹಾಲು ಉತ್ಪಾದಕರ ಸಂಘಗಳಿದ್ದು, 6,228 ಹೈನುಗಾರರು ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಜಾನುವಾರುಗಳ ಚಿಕಿತ್ಸೆಗೆ ಪಶು ಸಂಗೋಪನಾ ಇಲಾಖೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಇದೆ. ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವೈದ್ಯರ ಸೇವೆ ಸಕಾಲದಲ್ಲಿ ಸಿಗದೇ ಹೋದಲ್ಲಿ ಹೈನುಗಾರರು ಆಪತ್ತು ಎದುರಿಸಬೇಕಾದೀತು.

ಆಸ್ಪತ್ರೆಗೆ ತಿಂಗಳುಗಟ್ಟಲೆ ಬೀಗ!: ಮುಂಡ್ಕೂರು ಗ್ರಾಪಂ ವ್ಯಾಪ್ತಿಯ ಪಶು ಆಸ್ಪತ್ರೆ ಜವಾಬ್ದಾರಿಯ ಪಶು ಅಧಿಕಾರಿಗೆ ನಕ್ರೆಯ ಹೆಚ್ಚುವರಿ ಕರ್ತವ್ಯ ಇದ್ದರೂ ಅವರು ಕಳೆದ ಒಂದು ತಿಂಗಳುಗಳಿಂದ ವೈಯಕ್ತಿಕ ರಜೆಯಲ್ಲಿದ್ದಾರೆ. ಹೀಗಾಗಿ ಸೇವೆ ಬಯಸಿ ಬಂದವರಿಗೆ ಬೀಗವೇ ಗತಿ. ಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಂದ್ರ ಶೀತಲೀಕರಣ ಘಟಕದ ವ್ಯಾಪ್ತಿಯಲ್ಲಿ ಹಾಲು ಉತ್ಪಾದಕರ ಸಂಘಗಳಿದ್ದು, 4 ಸಂಘಗಳ ಸುಮಾರು 500 ಹೈನುಗಾರರು ಹಾಲು ಪೂರೈಸುತ್ತಿದ್ದಾರೆ. ಬೋಳ ಗ್ರಾಮದಲ್ಲೂ ಯಾವಾಗ ವೈದ್ಯರು ಇರುತ್ತಾರೆ, ಇಲ್ಲ ಎನ್ನುವುದೇ ಹೈನುಗಾರರಿಗೆ ತಿಳಿಯುತ್ತಿಲ್ಲ.

ಒಕ್ಕೂಟದ ವೈದ್ಯರಿಗೂ ಹೊರೆ: ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಕ್ಯಾಂಪ್ ಆಫೀಸ್‌ಗಳು ವಿರಳವಾಗಿರುವ ಹಿನ್ನೆಲೆಯಲ್ಲಿ ಆ ಕ್ಯಾಂಪ್ ಕಚೇರಿಯ ವೈದ್ಯರು ದಿನವೊಂದಕ್ಕೆ 3-4 ದನಗಳ ಶುಶ್ರೂಷೆ ಮಾಡಲು ಸಾಧ್ಯ. ಹೀಗಾಗಿ ಗ್ರಾಮೀಣ ಭಾಗದ ಹೈನುಗಾರರಿಗೆ ಸರ್ಕಾರದ ಮಟ್ಟದ ಪಶು ವೈದ್ಯರ ಸೇವೆ ಅಗತ್ಯ.

ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಸಹಾಯಕ ಸಿಬ್ಬಂದಿ, ಡಿ. ಗ್ರೂಪ್ ನೌಕರರು, ಹಿರಿಯ ಅಧಿಕಾರಿಗಳು ಸೇರಿ ಒಟ್ಟು 357 ಹುದ್ದೆಗಳು ಮಂಜೂರಾಗಿದ್ದು, 107 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಉಳಿದಂತೆ 250 ಹುದ್ದೆಗಳು ಖಾಲಿ ಇವೆ. ಉಡುಪಿ ಜಿಲ್ಲೆಯಲ್ಲಿ 2019ರ ಮೇವರೆಗಿನ ಮಾಹಿತಿಯಂತೆ 336 ಹಾಲು ಉತ್ಪಾದಕರ ಸಂಘಗಳು, 30,513 ಹೈನುಗಾರರು ಹೈನುಗಾರಿಕೆಯನ್ನು ಉಪಕಸುಬನ್ನಾಗಿಸಿದ್ದಾರೆ.

ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದೆ. ಹೊಸ ಪದವೀಧರರು ಉದ್ಯೋಗದ ಆಕಾಂಕ್ಷೆಯಲ್ಲಿದ್ದಾರೆ. ಜಿಲ್ಲೆಯ ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಸೇರಿ ಸರ್ಕಾರಕ್ಕೆ ಒತ್ತಡ ಹೇರಿ ಈ ಸಮಸ್ಯೆ ಪರಿಹರಿಸಬಹುದಾಗಿದೆ.
ಡಾ.ಪ್ರಸನ್ನ, ಸಹಾಯಕ ನಿರ್ದೇಶಕರು(ಪ್ರಭಾರ)  ಪಶು ಸಂಗೋಪನಾ ಇಲಾಖೆ ಉಡುಪಿ ಜಿಲ್ಲೆ

ಪಶು ಸಂಗೋಪನಾ ಇಲಾಖೆ ಈ ಕೊರತೆಗಳನ್ನು ನೀಗಿಸಬೇಕಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಇದ್ದರೂ ಸಕಾಲದಲ್ಲಿ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇವೆ
ಡಾ.ಪ್ರಸಾದ್, ವೈದ್ಯಾಧಿಕಾರಿ ಕಾರ್ಕಳ
—-
ಗ್ರಾಮೀಣ ಭಾಗದ ಹೈನುಗಾರರಿಗೆ ಪಶು ಇಲಾಖೆಯ ಸಕಲ ಸೇವೆಯ ಜತೆ ಹೈನುಗಾರಿಕೆಯ ಮಾಹಿತಿಗಾಗಿ ಕಾಯಂ ಪಶು ವೈದ್ಯರ ಅಗತ್ಯ ಇದೆ.
ಪ್ರಭಾಕರ ಶೆಟ್ಟಿ, ಮುಂಡ್ಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ

Leave a Reply

Your email address will not be published. Required fields are marked *