ದಕ್ಷಿಣದಲ್ಲಿ ಬಿಜೆಪಿಗೆ ನೆಲೆಯಿಲ್ಲ, ಅದರೊಂದಿಗೆ ಮೈತ್ರಿಯೂ ಇಲ್ಲ ಎಂದ ಎಐಎಡಿಎಂಕೆ

ನವದೆಹಲಿ: ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳವ ಸುದ್ದಿಗಳೆಲ್ಲವೂ ಸುಳ್ಳು. ಬಿಜೆಪಿಯನ್ನು ನಮ್ಮ ಹೆಗಲ ಮೇಲೆ ಕೂರಿಸಿಕೊಳ್ಳುವುದಿಲ್ಲ. ಅವರೊಂದಿಗೆ ಮೈತ್ರಿ ಎಂಬುದು ಅತಿ ದೊಡ್ಡ ವ್ಯಂಗ್ಯ ಎಂದು ಎಐಎಡಿಎಂಕೆ ಹೇಳಿದೆ.

ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಜತೆ ಬಿಜೆಪಿ ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳಲಿದೆ. ಅಮಿತ್​ ಷಾ ಅವರು ಎಐಡಿಎಂಕೆ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕ ತಂಬಿದೊರೈ ಈ ಹೇಳಿಕೆ ನೀಡಿದ್ದಾರೆ.

” ಬಿಜೆಪಿಯೊಂದಿಗೆ ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳಲಿದೆ, ಆ ಪಕ್ಷದ ಬಲವರ್ಧನೆಗೆ ನೆರವಾಗಲಿದೆ ಎಂಬುದು ಅತಿ ದೊಡ್ಡ ಜೋಕ್. ಅವರನ್ನು ನಮ್ಮ ಹೆಗಲ ಮೇಲೆ ಕೂರಿಸಿಕೊಳ್ಳಲಾಗದು. ನಮ್ಮ ಪಕ್ಷದ ಬಲವರ್ದನೆಗೆ ನಾವು ಶ್ರಮಿಸುತ್ತೇವೆ. ಅವರ ಪಕ್ಷವನ್ನು ಅವರು ಬಲಗೊಳಿಸಿಕೊಳ್ಳಲಿ,” ಎಂದು ತಂಬಿದೊರೈ ಹೇಳಿದ್ದಾರೆ.

” ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯ ನಮಗೇನಿದೆ? ಬಿಜೆಪಿಗೆ ದಕ್ಷಿಣದಲ್ಲಿ ನೆಲೆಯೇ ಇಲ್ಲ,” ಎಂದು ವ್ಯಂಗ್ಯ ಮಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳಿರುವ ಈ ಸಂದರ್ಭದಲ್ಲಿ ಬಿಜೆಪಿ ಜತೆಗಿನ ಮೈತ್ರಿಯಿಂದ ಹಲವು ಪಕ್ಷಗಳು ಹೊರ ಬಂದಿವೆ. ಆಂಧ್ರದ ಚಂದ್ರಬಾಬು ನಾಯ್ಡು, ಕಾಶ್ಮೀರದ ಮೆಹಬೂಬಾ ಮುಫ್ತಿ ಮೈತ್ರಿ ಭಂಗ ಮಾಡಿಕೊಂಡಿದ್ದಾರೆ. ಮಹರಾಷ್ಟ್ರದಲ್ಲಿ ಅಂಗ ಪಕ್ಷವಾಗಿರುವ ಶಿವಸೇನೆಯೊಂದಿಗಿನ ಸಂಬಂಧವೂ ಇತ್ತೀಚಿನ ದಿನಗಳಲ್ಲಿ ಹಳಸಲಾರಂಭಿಸಿದೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಎಸ್​ಪಿ-ಬಿಎಸ್​ಪಿ ಮೈತ್ರಿ ಏರ್ಪಟ್ಟಿದೆ.

ಇದೇ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಜೆಪಿಯ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮೈತ್ರಿಗೆ ಮುಕ್ತವಾಗಿರುವುದಾಗಿ ಬಹಿರಂಗವಾಗಿ ಘೋಷಿಸಿದ್ದರು.