ರಬಕವಿ-ಬನಹಟ್ಟಿ: ಎನ್‌ಎಂಎಂಎಸ್ (ನ್ಯಾಷನಲ್ ಮೀನ್ಸ್-ಕಂ-ಮೆರಿಟ್ ಸ್ಕಾಲರ್‌ಶಿಪ್) ಅರ್ಹತಾ ಪರೀಕ್ಷೆ ಜನೆವರಿ 5 ರಂದು ನಡೆಯಲಿದ್ದು, ರಬಕವಿ ಬನಹಟ್ಟಿ ಒಳಗೊಂಡಂತೆ ಅಖಂಡ ಜಮಖಂಡಿ ತಾಲೂಕಿನಲ್ಲಿ 2219 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಗೆ ನೋಂದಣಿ ಮಾಡಿಸಿದ್ದಾರೆೆ.
ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಜಮಖಂಡಿ ತಾಲೂಕಿನಿಂದ ನೋದಾಯಿತರಾಗಿದ್ದಾರೆ. 2023-24 ರಲ್ಲಿ 121, 2022-23 ರಲ್ಲಿ 96, 2021-22 ರಲ್ಲಿ 50, 2020-21 ರಲ್ಲಿ 116 ವಿದ್ಯಾರ್ಥಿಗಳು ಪಾಲು ಪಡೆದು ಶಿಷ್ಯವೇತನಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಸಂಯೋಜಕರು, ಬಿಆರ್‌ಪಿ , ಸಿಆರ್‌ಪಿ ಒಳಗೊಂಡಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ಪರೀಕ್ಷೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಪ್ರೇರೆಪಿಸುತ್ತಿರುವುದು ವಿಶೇಷವಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹನಗಂಡಿ ತೋಟ, ಆದರ್ಶ ವಿದ್ಯಾಲಯ, ಸರಕಾರಿ ಪ್ರೌಢಶಾಲೆ ಜಗದಾಳ, ಎಸ್.ಆರ್.ಎ. ಪ್ರೌಢಶಾಲೆ ಬನಹಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲಗೂರ ಮುಂತಾದ ಶಾಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ.
ರಾಜ್ಯಲಕ್ಷ್ಮಿ ಎಂಬ ಬೆಳಗಾವಿಯ ಸ್ವಯಂ ಸೇವಾ ಸಂಸ್ಥೆ ಪರೀಕ್ಷೆಯಲ್ಲಿ ಅತ್ಯುತ್ತಮ ಪಾಸಾದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಆರ್ಥಿಕ ಸೌಲಭ್ಯ ಒದಗಿಸುತ್ತಿದೆ.
ಏನಿದು ಎನ್‌ಎಂಎಂ ಎಸ್ ಪರೀಕ್ಷೆ?
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರಿತ ಶಿಷ್ಯವೇತನ ನೀಡುವ ಯೋಜನೆ ಇದಾಗಿದೆ.ಅರ್ಹತೆ ಪಡೆಯುವ ವಿದ್ಯಾರ್ಥಿಗಳಿಗೆ ಮಾಸಿಕ 1000 ರೂ. ದಂತೆ 4 ವರ್ಷ ಶಿಷ್ಯ ವೇತನ ನೀಡಲಾಗುತ್ತದೆ.
ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದಲ್ಲಿ ಎನ್‌ಎಂಎಂಎಸ್ ಪರೀಕ್ಷೆ ಒಂದು ಮೈಲುಗಲ್ಲು. ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಈ ಯೋಜನೆ ವರದಾನವಾಗಿದೆ.
–ಎ.ಕೆ. ಬಸಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿ, ಜಮಖಂಡಿನಮ್ಮ ಶಾಲೆಯಲ್ಲಿ ಕಳೆದ ವರ್ಷ 9 ವಿದ್ಯಾರ್ಥಿಗಳು ಶಿಷ್ಯ ವೇತನಕ್ಕೆ ಆಯ್ಕೆಯಾಗಿದ್ದು, ಅಧಿಕಾರಿಗಳು ಮತ್ತು ಶಿಕ್ಷಕರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
-ಸದಾಶಿವ ಆಲಬಾಳ ಅಧ್ಯಕ್ಷರು, ಎಸ್‌ಡಿಎಂಸಿ, ಸರ್ಕಾರಿ ಪ್ರೌಢಶಾಲೆ, ಜಗದಾಳ